ನಮಗೆ ಅಪ್ಪಳಿಸುವ ಎಲ್ಲ ಬಿರುಗಾಳಿಗಳು ನಮ್ಮ ವೈರಿಗಳಲ್ಲ. ಅವು ನಮ್ಮನ್ನು ಒಂದುಗೂಡಿಸುತ್ತವೆ. ಅವು ನಮ್ಮ ಬೇರು ಕೀಳುತ್ತವೆ ಎಂದು ಅನಿಸುತ್ತದೆಯಾದರೂ ಅವುಗಳ ಜೊತೆಗಿನ ಹೋರಾಟದಲ್ಲಿ ನಮ್ಮ ಬೇರುಗಳು ಗಟ್ಟಿಗೊಳ್ಳುತ್ತ ಹೋಗುತ್ತವೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮಳೆ
ಧಾರಾಕಾರವಾಗಿ ಸುರಿಯುತ್ತಿರುವಾಗ,
ದಟ್ಟ ಚಳಿ
ಸುತ್ತ ಆವರಿಸಿಕೊಂಡಿರುವಾಗ
ನೀನು ಇನ್ನಷ್ಟು
ದಿವ್ಯವಾಗಿ ಅನಾವರಣಗೊಳ್ಳುತ್ತೀ.
ಹಿಮ
ನನ್ನನ್ನು ಇನ್ನಷ್ಟು ನಿನ್ನ
ತುಟಿಗಳ ಹತ್ತಿರ ಕರೆದೊಯ್ಯುತ್ತದೆ.
ಆ ಒಳಗಿನ ರಹಸ್ಯ
ಯಾವುದು ಇನ್ನೂ ಹುಟ್ಟೇ ಇಲ್ಲವೋ
ಆ ತಾಜಾತನ
ಮನೆ ಮಾಡಿದೆ ನಿನ್ನಲ್ಲಿ,
ಮತ್ತು ಒಂದಾಗಿದ್ದೇನೆ ನಾನು
ನಿನ್ನ ಈ ಹೊಸತನದಲ್ಲಿ.
ಈ ಬರುವಿಕೆ, ಹೋಗುವಿಕೆ ಎಲ್ಲ
ವಿವರಣೆಗೆ ನಿಲುಕುವ ಮಾತುಗಳಲ್ಲ,
ಆದರೆ,
ಥಟ್ಟನೇ ನೀನು ನನ್ನೊಳಗೆ
ದಾಖಲಾಗಿದ್ದು
ಹಾಗು ನಿನ್ನ ಭವ್ಯತೆಯಲ್ಲಿ
ನಾನು ಮತ್ತೆ ಕಳೆದುಹೋಗಿದ್ದನ್ನು ಮಾತ್ರ
ನಮೂದು ಮಾಡಬಲ್ಲೆ
ನಾನು.
ರೂಮಿ
ಮರವೊಂದನ್ನು ಕಲ್ಪಿಸಿಕೊಳ್ಳಿ. ಆ ಮರವನ್ನು ನೀವು ಕೋಣೆಯಲ್ಲಿ ತಂದಿಟ್ಟುಕೊಂಡು ಒಂದು ರೀತಿಯಲ್ಲಿ ಅದಕ್ಕೆ ರಕ್ಷಣೆ ಕೊಡಬಹುದು ; ಆಗ ಗಾಳಿ ಜೋರಾಗಿ ಮರವನ್ನು ಆಕ್ರಮಿಸುವುದಿಲ್ಲ. ಹೊರಗೆ ಗಾಳಿ ಜೋರಾಗಿ ಬೀಸುತ್ತಿದ್ದರೂ ಒಳಗೆ ಮರ ಸುರಕ್ಷಿತವಾಗಿರುತ್ತದೆ. ಆಗ ಮರಕ್ಕೆ ಯಾವ ಸವಾಲುಗಳೂ ಎದುರಾಗುವುದಿಲ್ಲ ಅದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದರೆ ಮರ ನಿಧಾನವಾಗಿ ಸೊರಗಲು ಶುರು ಮಾಡುತ್ತದೆ. ಅದು ತನ್ನ ಹಸಿರುತನವನ್ನ ಕಳೆದುಕೊಳ್ಳುತ್ತದೆ. ಮರದ ಆಳದಲ್ಲಿ ಏನೋ ಒಂದು ಸಾಯಲು ಶುರು ಮಾಡುತ್ತದೆ, ಏಕೆಂದರೆ ಬದುಕನ್ನ, ಜೀವಂತಿಕೆಯನ್ನ ಕಾಯ್ದುಕೊಳ್ಳಲು ಸವಾಲುಗಳು ಬೇಕು.
ನಮಗೆ ಅಪ್ಪಳಿಸುವ ಎಲ್ಲ ಬಿರುಗಾಳಿಗಳು ನಮ್ಮ ವೈರಿಗಳಲ್ಲ. ಅವು ನಮ್ಮನ್ನು ಒಂದುಗೂಡಿಸುತ್ತವೆ. ಅವು ನಮ್ಮ ಬೇರು ಕೀಳುತ್ತವೆ ಎಂದು ಅನಿಸುತ್ತದೆಯಾದರೂ ಅವುಗಳ ಜೊತೆಗಿನ ಹೋರಾಟದಲ್ಲಿ ನಮ್ಮ ಬೇರುಗಳು ಗಟ್ಟಿಗೊಳ್ಳುತ್ತ ಹೋಗುತ್ತವೆ. ಬೇರುಗಳು ಯಾವ ಬಿರುಗಾಳಿಯೂ ನಮ್ಮನ್ನು ನಾಶಮಾಡದಷ್ಟು ಆಳಕ್ಕೆ ಇಳಿಯುತ್ತವೆ. ಸೂರ್ಯನ ಭಯಂಕರ ಬಿಸಿಲು ಎಲ್ಲಿ ಮರವನ್ನು ಸುಟ್ಟುಬಿಡುತ್ತದೆಯೋ ಎಂದು ಅನಿಸುತ್ತದೆಯಾದರೂ, ಸೂರ್ಯನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮರ ನೆಲದಿಂದ ಹೆಚ್ಚು ಹೆಚ್ಚು ನೀರು ಹೀರಿಕೊಳ್ಳುತ್ತದೆ ಮತ್ತು ಹೆಚ್ಚು ಹಸಿರಾಗಿ ಕಂಗೊಳಿಸುತ್ತದೆ. ಪ್ರಾಕೃತಿಕ ಶಕ್ತಿಗಳ ಜೊತೆಗಿನ ತನ್ನ ಹೋರಾಟದಲ್ಲಿ ಮರ ತನ್ನ ಆತ್ಮವನ್ನು ಕಂಡುಕೊಳ್ಳುತ್ತದೆ. ಸಂಘರ್ಷದ ಕಾರಣವಾಗಿಯೇ ಮರ ತನ್ನ ಆತ್ಮವನ್ನ ಗುರುತಿಸಿಕೊಂಡದ್ದು.
ಸಂಗತಿಗಳು ಬಹಳ ಸುಲಭವಾಗಿದ್ದರೆ ನೀವು ಕಳಚಿಕೊಳ್ಳುತ್ತ ಹೋಗುತ್ತೀರಿ. ನಿಮ್ಮ ಸಮಗ್ರತೆಯ ಅವಶ್ಯಕತೆ ಇಲ್ಲವಾದ್ದರಿಂದ ನೀವು ಚೂರು ಚೂರಾಗುತ್ತ ಹೋಗುತ್ತಿರಿ. ಮುದ್ದು ಮಾಡಿದ ಮಗುವಿನಂತಾಗುತ್ತೀರಿ, ಅಶಕ್ತರಾಗುತ್ತೀರಿ. ಹಾಗಾಗಿ ಸವಾಲುಗಳು ಎದುರಾದಾಗ ಧೈರ್ಯದಿಂದ ಎದುರಿಸಿ, ಸವಾಲುಗಳು ನಿಮ್ಮ ಬದುಕನ್ನ ಗಟ್ಟಿಗೊಳಿಸುತ್ತವೆ.

