ಒಳ್ಳೆಯ ನಾಯಕನ ಗುಣಲಕ್ಷಣ : Coffeehouse ಕತೆಗಳು

ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ

1979 ರಲ್ಲಿ ಇಸ್ರೋ SLV – 3 ನೌಕೆಯನ್ನ ಅಂತರೀಕ್ಷಕ್ಕೆ ಹಾರಿಸುವ ಪ್ಲಾನ್ ಮಾಡಿಕೊಂಡಿತ್ತು. ಈ ಪ್ರೊಜೆಕ್ಟ್ ನ ಲೀಡ್ ಮಾಡುತ್ತಿದ್ದವರು APJ ಅಬ್ದುಲ್ ಕಲಾಂ. ಆದರೆ ದುರದೃಷ್ಟವಶಾತ್ ನೌಕೆ ತನ್ನ ಕಕ್ಷೆ ಸೇರುವ ಮೊದಲೇ ಅಪಘಾತಕ್ಕೆ ಈಡಾಗಿ ಬಂಗಾಲ ಉಪಸಾಗರದಲ್ಲಿ ಹೋಗಿ ಬಿತ್ತು. ಇದು ಇಡೀ ದೇಶಕ್ಕೆ ಆಘಾತ ನೀಡುವ ಘಟನೆಯಾಗಿತ್ತು. ಪ್ರೊಜೆಕ್ಟ್ ಲೀಡ್ ಆಗಿದ್ದ ಕಲಾಂ ಅವರಂತೂ ತೀವ್ರ ನಿರಾಶೆಗೆ ಒಳಗಾಗಿದ್ದರು.

ಅವತ್ತು ಪತ್ರಿಕಾ ಗೋಷ್ಟಿಯಲ್ಲಿ ಪತ್ರಕರ್ತರೆಲ್ಲ ಅಬ್ದುಲ್ ಕಲಾಂ ಅವರನ್ನು ಪ್ರಶ್ನೆ ಮಾಡಲು ಬಯಸಿದರು. ಆದರೆ ಆಗ ಕಲಾಂ ಅವರ ಬಾಸ್ ಆಗಿದ್ದ ಇಸ್ರೋ ಚೇರಮನ್ ಡಾ. ಸತೀಶ್ ಧವನ್ ಇದಕ್ಕೆ ಅವಕಾಶ ಕೊಡಲಿಲ್ಲ. ಅವರು ತಾವೇ ಮುಂದೆ ನಿಂತು ಪತ್ರಕರ್ತರ ಎಲ್ಲ ಪ್ರಶ್ನೆಗಳಿಗೆ ತಾವೇ ಸಮಾಧಾನ ನೀಡಿದರು, ಪ್ರೊಜೆಕ್ಟ್ ಫೇಲ್ ಆಗಿದ್ದರ ಹೊಣೆಯನ್ನು ತಾವೇ ಹೊತ್ತುಕೊಂಡರು. ಮತ್ತು ಯುವ ವಿಜ್ಞಾನಿ ಅಬ್ದುಲ್ ಕಲಾಂ ಅವರಿಗೆ ಆಗಬಹುದಾಗಿದ್ದ ಬಹಿರಂಗ ಮುಜುಗರವನ್ನು ತಪ್ಪಿಸಿದರು.

ಅದೇ ಮುಂದಿನ ವರ್ಷ ಇಸ್ರೋ, ರೋಹಿಣಿ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದಾಗ, ಡಾ. ಧವನ್, ಅಬ್ದುಲ್ ಕಲಾಂ ಅವರಿಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಲು ಮುಂದೆ ಕರೆದು, ಅವರ ಮನೋಬಲವನ್ನು ಮತ್ತಷ್ಟು ಹೆಚ್ಚು ಮಾಡಿದರು.

ಇದು ಒಬ್ಬ ಒಳ್ಳೆಯ ನಾಯಕನಿಗಿರಬೇಕಾದ ಗುಣ ಎಂದು ಅಬ್ದುಲ್ ಕಲಾಂ, ಡಾ. ಸತೀಶ್ ಧವನ್ ಅವರನ್ನು ಸ್ಮರಿಸಿಕೊಳ್ಳುತ್ತಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.