ಮತ್ತೆ ಶುರುವಾತು ( Start Again ) : ಓಶೋ 365 #DAY 72

ಸುಮ್ಮನೇ ನಿಮ್ಮ ಸುತ್ತ ಒಮ್ಮೆ ನೋಡಿಕೊಳ್ಳಿ : ಇಲ್ಲಿಯವರೆಗೆ ನೀವು ಮಾಡುತ್ತಿರುವುದೇ ಅಂತಿಮವಲ್ಲ. ಮತ್ತೆ ಅದನ್ನು ಓಪನ್ ಮಾಡಿ, ಮತ್ತೆ ಪ್ರಯಾಣ ಶುರುವಾಗಲಿ. ಹೊಸ ಹೊಸ ಸಂಗತಿಗಳನ್ನು ತೆಗೆದುಕೊಂಡು ಬನ್ನಿ, ಕೆಲವೊಮ್ಮೆ ಅವು ವಿಚಿತ್ರವಾಗಿರಬಹುದು, ತಿಕ್ಕಲಾಗಿರಬಹುದು, ಕೆಲವೊಮ್ಮೆ ಕ್ರೇಝಿ ಅನಿಸಬಹುದು ; ಈ ಎಲ್ಲವೂ ಸಹಾಯ ಮಾಡುತ್ತವೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಎಲ್ಲ ಅನ್ವೇಷಕರು ಬಹುತೇಕ ಹುಚ್ಚರೇ, ತಿಕ್ಕಲರೇ. ಹೌದು ಏಕೆಂದರೆ ಅವರು ತಮ್ಮ ಮಿತಿಗಳ ಆಚೆ ಪ್ರಯತ್ನ ಮಾಡುತ್ತಾರೆ. ಅವರು ತಮ್ಮ ದಾರಿಯನ್ನು ತಾವೇ ಹುಡುಕಿಕೊಳ್ಳುತ್ತಾರೆ. ಅವರು ಮಹಾ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುವುದಿಲ್ಲ, ಆ ದಾರಿಗಳು ಅವರಿಗಲ್ಲ ; ಅವರು ಕಾಡು ದಾರಿಗಳನ್ನು ಹಿಡಿಯುತ್ತಾರೆ. ಅಲ್ಲಿ ಅಪಾಯವಿದೆ : ಅವರು ಅಲ್ಲಿ ಕಳೆದು ಹೋಗಬಹುದು , ಅವರು ಮತ್ತೆ ವಾಪಸ್ ಬಂದು ಜನಸಾಗರವನ್ನು ಸೇರುವುದು ಸಾಧ್ಯವಾಗದೇ ಇರಬಹುದು, ಅವರು ಜನಸಮೂಹದೊಂದಿಗೆ ಸಂಪರ್ಕ ವಂಚಿತರಾಗಬಹುದು….

ಕೆಲವೊಮ್ಮೆ ನೀವು ವಿಫಲರಾಗಬಹುದು. ಹೊಸ ದಾರಿಯಲ್ಲಿ ನಡೆಯುವಾಗ ನೀವು ವಿಫಲರಾಗುವುದೇ ಇಲ್ಲ ಎಂದು ನಾನು ಹೇಳಲಾರೆ. ಖಂಡಿತ ಅಪಾಯವಿದೆ ಆದರೆ ಈ ಪ್ರಯಾಣದಲ್ಲಿ ಥ್ರಿಲ್ ಕೂಡ ಇದೆ. ಈ ಥ್ರಿಲ್ ಗಾಗಿಯಾದರೂ ನೀವು ಅಪಾಯಕ್ಕೆ ತೆರೆದುಕೊಳ್ಳಬೇಕು. ಯಾವ ಬೆಲೆ ತೆತ್ತಾದರೂ ಈ ಥ್ರಿಲ್ ಗಾಗಿ ನೀವು ಅಪಾಯವನ್ನು ಆಹ್ವಾನಿಸಬಹುದು. ನಿಮ್ಮ ಹಳೆಯ ಕೆಲಸದಲ್ಲಿ ಏನಾದರೂ ಹೊಸತನ್ನು ಸೇರಿಸಿ ಆ ಕೆಲಸವನ್ನು ಹೊಸತಾಗಿಸಿ ಅಥವಾ ಆ ಕೆಲಸವನ್ನು ಸಂಪೂರ್ಣವಾಗಿ ತ್ಯಜಿಸಿ ಹೊಚ್ಚ ಹೊಸ ಕೆಲಸವೊಂದನ್ನು ಕೈಗೆತ್ತಿಕೊಳ್ಳಿ. ಮತ್ತೆ ಮೊದಲಿನಿಂದ ಶುರು ಮಾಡಿ,  ಕುಂಬಾರರಾಗಿ, ಸಂಗೀತಕಾರರಾಗಿ, ಡಾನ್ಸರ್ ಆಗಿ ಅಥವಾ ಯಾವುದಕ್ಕೂ ಸಿದ್ಧರಾಗಿರುವ ಅಲೆಮಾರಿಯಾಗಿ.

ಸ್ವಾಭಾವಿಕವಾಗಿ ನಿಮ್ಮ ಮೈಂಡ್ ಇದನ್ನು ತಪ್ಪು ಎಂದು ಹೇಳಬಹುದು. ನೀವು ಈಗಾಗಲೇ ಸಮಾಜದಲ್ಲಿ ಒಂದು ಸ್ಥಾನದಲ್ಲಿದ್ದೀರ, ನಿಮಗೆ ಹೆಸರಿದೆ, ಪ್ರಸಿದ್ಧಿ ಇದೆ, ಮತ್ತು ಹಲವಾರು ಜನರಿಗೆ ನೀವು ಪರಿಚಿತರಾಗಿದ್ದೀರ, ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಮತ್ತು ನೀವು ಸಾಕಷ್ಟು ಗಳಿಸುತ್ತಿದ್ದೀರ ಕೂಡ, ಎಲ್ಲವೂ ಸೆಟಲ್ ಆಗಿದೆ, ಈಗ ಯಾಕೆ ಈ ಎಲ್ಲವನ್ನು ಡಿಸ್ಟರ್ಬ್ ಮಾಡಬೇಕು? ನಿಮ್ಮ ಮೈಂಡ್ ಹೀಗೆ ಹೇಳಬಹುದು. ನಿಮ್ಮ ಮೈಂಡ್ ನ ಮಾತು ಕೇಳಬೇಡಿ ; ಮೈಂಡ್ ಸಾವಿನ ನೌಕರನಂತೆ ಕೆಲಸ ಮಾಡುತ್ತಿದೆ.

ಜ್ಞಾನೋದಯಕ್ಕಾಗಿ ಬಹಳ ಹಂಬಲಿಸುತ್ತಿದ್ದ ಒಬ್ಬ ಮನುಷ್ಯನಿಗೆ ಒಂದು ರಾತ್ರಿ ಕನಸು ಬಿತ್ತು. ಕನಸಿನಲ್ಲಿ ಆತ ಜ್ಞಾನವನ್ನು ಹುಡುಕುತ್ತ ಕಾಡಿನಲ್ಲಿ ಓಡಾಡುತ್ತಿದ್ದ.

ಮರುದಿನ ಮುಂಜಾನೆ ಆತ ಆ ಕಾಡನ್ನು ಹುಡುಕುತ್ತ ಹೊರಟ. 

ದಾರಿಯಲ್ಲಿ ವಿಶ್ರಾಂತಿಗಾಗಿ ಆತ ಒಂದು ಮರದ ಕೆಳಗೆ ಕುಳಿತುಕೊಂಡಾಗ ಹತ್ತಿರದಲ್ಲಿ ಅವನಿಗೆ ಬಂಡೆಯ ಕೆಳಗೆ ಒಂದು ನರಿ ಮಲಗಿರುವುದು ಕಾಣಿಸಿತು. ಆ ನರಿಗೆ ಕಾಲುಗಳಿರಲಿಲ್ಲ. ಕಾಲುಗಳಿಲ್ಲದ ನರಿ ಹೇಗೆ ಬದುಕಬಲ್ಲದು? ಆಹಾರ ಹೇಗೆ ಹುಡುಕಿಕೊಳ್ಳುತ್ತದೆ ಎಂದು ಆ ಮನುಷ್ಯ ವಿಚಾರ ಮಾಡುತ್ತಿರುವಾಗಲೇ ಒಂದು ಆಶ್ಚರ್ಯ ಗಮನಿಸಿದ.

ಒಂದು ಭಾರಿ ಸಿಂಹ, ನರಿಯ ಹತ್ತಿರ ಬಂದು ಮಾಂಸದ ತುಣುಕುಗಳನ್ನು ಎಸೆದು ಹೋಯಿತು. ಈ ಘಟನೆಯನ್ನು ನೋಡುತ್ತಿದ್ದಂತೆಯೇ ಆ ಮನುಷ್ಯನಿಗೆ ಏನೋ ಹೊಳೆದಂತಾಯಿತು. ಭಗವಂತನಿಗೆ ನನ್ನನ್ನು ಪೂರ್ತಿಯಾಗಿ ಸಮರ್ಪಿಸಿಕೊಂಡು ಬಿಟ್ಟರೆ ಸಾಕು, ಅವ ನನ್ನ ಎಲ್ಲ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಾನೆ. ಇದೇ ಮನುಷ್ಯ ಬದುಕಿನ ಯಶಸ್ಸಿನ ಗುಟ್ಟು ಎಂದು ಆತ ಧೃಡವಾಗಿ ನಿಶ್ಚಯ ಮಾಡಿದ.

ಎರಡು ವಾರಗಳ ನಂತರ ಹಸಿವಿನಿಂದ ಬಳಲುತ್ತ, ನರಳುತ್ತ ಮಲಗಿದ್ದ ಆ ಮನುಷ್ಯನಿಗೆ ಇನ್ನೊಂದು ಕನಸು ಬಿತ್ತು. ಕನಸಿನಲ್ಲಿ ಒಂದು ಭಾರಿ ದೊಡ್ಡ ದನಿ ಕೂಗಿಕೊಂಡಿತು,

“ ಹುಚ್ಚಾ , ಆ ಕನಸಿನ ಅರ್ಥ ಸಿಂಹದಂತಾಗು ಎಂದು “

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.