If you can do nothing, that is the best! ~ ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ
ಬಹಳ ಧೈರ್ಯ ಬೇಕು nothing ಮಾಡುವುದಕ್ಕೆ. ಏನಾದರೂ ಮಾಡುವುದಕ್ಕೆ ಅಂಥ ಧೈರ್ಯವೇನೂ ಬೇಕಾಗಿಲ್ಲ, ಏಕೆಂದರೆ ಇಲ್ಲಿ, ಮಾಡುವ ಕೆಲಸದಲ್ಲಿ ತೊಡಗಿಕೊಂಡಿರುವುದು ಮೈಂಡ್. ಅಹಂ ಏನನ್ನಾದರೂ ಮಾಡುವುದಕ್ಕೆ ಹಾತೊರೆಯುತ್ತಿರುತ್ತದೆ ಅದು ಲೌಕಿಕವಾಗಬಹುದು ಅಥವಾ ಅಲೌಕಿಕವಾಗಬಹುದು. ಮೈಂಡ್ ಗೆ ಏನೋ ಒಂದು ಕೆಲಸ ಬೇಕು. ನೀವು ಏನನ್ನಾದರೂ ಮಾಡುತ್ತಿರುವಿರಾದರೆ ಅಹಂ ಗೆ ಏನೋ ಒಂದು ತೃಪ್ತಿ, ಸಮಾಧಾನ, ಆನಂದ, ಜೀವಂತಿಕೆ.
ಆದರೆ Nothing ಎನ್ನುವುದು ಜಗತ್ತಿನಲ್ಲಿಯೇ ಅತ್ಯಂತ ಕಠಿಣಕರವಾದ ಸಂಗತಿ, ಮತ್ತು ಇದು ನಿಮಗೆ ಸಾಧ್ಯವಾದರೆ, ಬೆಸ್ಟ್. ನಾವು ಏನಾದರೂ ಮಾಡಬೇಕು ಎನ್ನುವ ಐಡಿಯಾನೇ ಮೂಲಭೂತವಾಗಿ ತಪ್ಪು. We have to be, not Do. ನಾನು ಜನರಿಗೆ ಏನಾದರೂ ಮಾಡಲು ಯಾಕೆ ಹೇಳುತ್ತೇನೆಂದರೆ ಅವರಿಗೆ ಈ doing ನ ನಿರರ್ಥಕತೆ ಗೊತ್ತಾಗಲೆಂದು. ಕೊನೆಗೊಮ್ಮೆ ಅವರಿಗೇ ಬೇಜಾರಾಗಿ “ಸಾಕು ಇದು, ನಾವು ಏನೂ ಮಾಡೋದು ಬೇಡ” ಎಂದು ಅವರೇ ಕೈಚೆಲ್ಲಲೆಂದು. ಮತ್ತು ಆಗ ನಿಜದ ಕೆಲಸ ಶುರುವಾಗುತ್ತದೆ.
ನಿಜವಾದ ಕೆಲಸ ಯಾವುದೆಂದರೆ, just to be. ಏಕೆಂದರೆ ನಿಮಗೆ ಅವಶ್ಯಕವಾಗಿರುವುದನ್ನೆಲ್ಲ ನಿಮಗೆ ಮೊದಲೇ ಕೊಡಲಾಗಿದೆ, ಈಗ ನೀವು, ನೀವಾಗಿರಬೇಕು ಮಾತ್ರ. ನಾವಾಗಿರುವುದೆಂದರೇನು? ನಿಮಗೆ ಇನ್ನೂ ಗೊತ್ತಿಲ್ಲ, ನಿಜ. ನೀವು ಈಗ ಮಾಡಬೇಕಾಗಿರುವುದೇನೆಂದರೆ ಆಳ ಮೌನದಲ್ಲಿ ಒಂದಾಗುವುದು, ಎಲ್ಲಿ ನಿಮ್ಮನ್ನು ಬಿಟ್ಟರೆ ನಿಮಗೆ ಬೇರೆ ಯಾರೂ ಕಾಣಿಸುವುದಿಲ್ಲವೋ ಅಲ್ಲಿ. ಅಲ್ಲಿ ನಿಮಗೆ ನಿಮ್ಮ ಭೇಟಿಯಾಗುತ್ತದೆ, ಪರಿಚಯವಾಗುತ್ತದೆ.
ಒಮ್ಮೆ ಒಬ್ಬ ಸದ್ಗ್ರಹಸ್ಥ, ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬಂದು ಅವನನ್ನು ತನ್ನ ಹೊಸ ಮನೆಯ ಕಾರ್ಯಕ್ರಮ ಒಂದಕ್ಕೆ ಆಹ್ವಾನಿಸಿದ.
ಮಾಸ್ಟರ್ : ನನಗೆ ಬಿಡುವಿಲ್ಲ, ಬರಲು ಆಗುವುದಿಲ್ಲ
ಗ್ರಹಸ್ಥ : ಏನು ಕೆಲಸ ಮಾಡುತ್ತಿದ್ದೀರಿ? ನನ್ನ ಸಹಾಯ ಏನಾದರೂ ಬೇಕೆ?
ಮಾಸ್ಟರ್ : ಏನೂ ಮಾಡುತ್ತಿಲ್ಲ. ಏನೂ ಮಾಡದಿರುವುದೇ ಝೆನ್ ಸನ್ಯಾಸಿಯ ಮುಖ್ಯ ಕೆಲಸ
ಸ್ವಲ್ಪ ದಿನಗಳ ನಂತರ ಮತ್ತೆ ಆ ಗ್ರಹಸ್ಥ, ಮಾಸ್ಟರ್ ನನ್ನು ಮತ್ತೆ ತನ್ನ ಮನೆಗೆ ಆಹ್ವಾನಿಸಿದ.
ಮಾಸ್ಟರ್ : ನನಗೆ ಬಿಡುವಿಲ್ಲ, ಬರಲು ಆಗುವುದಿಲ್ಲ “
ಗ್ರಹಸ್ಥ : ಈಗ ಏನು ಮಾಡುತ್ತಿದ್ದೀರಿ?
ಮಾಸ್ಟರ್: ಏನೂ ಮಾಡುತ್ತಿಲ್ಲ .
ಗ್ರಹಸ್ಥ : ಆವತ್ತೂ ನೀವು ಅದನ್ನೇ ಮಾಡುತ್ತಿದ್ದಿರಿ, ಅಲ್ಲವೆ?
ಮಾಸ್ಟರ್ : ಹೌದು, ಅದು ಇನ್ನೂ ಮುಗಿದಿಲ್ಲ.

