ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಅದು ಮರ್ಯಾದಾ ಹಿಂದಿ ಸಿನೇಮಾದ ಶೂಟಿಂಗ್. ಸಿನೇಮಾದ ಹೀರೋ ಡೈಲಾಗ್ ಕಿಂಗ್ ರಾಜಕುಮಾರ್ ಸೆಟ್ ನಲ್ಲಿ ಒಂದು ಕಡೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಹಾಸ್ಯನಟ ಮೋಹನ್ ಚೋಟಿ ರಾಜಕುಮಾರ್ ಸುತ್ತ ಓಡಾಡುತ್ತ ಮುಂದಿನ ಶಾಟ್ ಗಾಗಿ ತಮ್ಮ ಡೈಲಾಗ್ ಬಾಯಿಪಾಠ ಮಾಡುತ್ತಿದ್ದಾರೆ.
“ಸಾಹಬ್, ನೀವು ಕೊಟ್ಟ ಹಣದಿಂದ ನನ್ನ ತಾಯಿಗೆ ಆಪರೇಷನ್ ಮಾಡಿಸಿದೆ. ಅವಳಿಗೆ ಆರೋಗ್ಯ ಈಗ ತುಂಬ ಸುಧಾರಿಸಿದೆ. ನಿಮ್ಮ ಋಣವನ್ನ ನಾನು ಎಂದೂ ಮರೆಯಲಾರೆ. ಸಾಹಬ್ ಸ್ನಾನ ಕ್ಕಾಗಿ ನಿಮಗೆ ಕಾಯಿಸಲೇ? “ ಇದು ಮೋಹನ್ ಚೋಟಿ ಬಾಯಿಪಾಠ ಮಾಡುತ್ತಿದ್ದ ಡೈಲಾಗ್. ಈ ಬಾಯಿಪಾಠ ಕೇಳಿ ಕೇಳಿ ರಾಜಕುಮಾರ್ ಗೆ ಇರುಸುಮುರುಸು.
ಶಾಟ್ ರೆಡಿ ಆದಾಗ ರಾಜಕುಮಾರ್ ಮತ್ತು ಮೋಹನ್ ಚೋಟಿ ಇಬ್ಬರೂ ಕ್ಯಾಮೆರಾ ಮುಂದೆ ಬರುತ್ತಾರೆ ಮತ್ತು ರಾಜಕುಮಾರ್ ತಮ್ಮ ಡೈಲಾಗ್ ಶುರುಮಾಡುತ್ತಾರೆ…..
“ಮೋಹನ್, ನಾನು ಕೊಟ್ಟ ಹಣದಿಂದ ನಿನ್ನ ತಾಯಿಗೆ ಆಪರೇಷನ್ ಮಾಡಿಸಿದ್ದು ಒಳ್ಳೆಯದಾಯ್ತು . ಈಗ ನಿನ್ನ ತಾಯಿಗೆ ಆರೋಗ್ಯ ಸುಧಾರಿಸಿದ್ದು ತುಂಬ ಸಂತೋಷ. ಋಣ ಗಿಣ ಅಂತ ಮಾತನಾಡಬೇಡ, ಹೋಗು ನನ್ನ ಸ್ನಾನಕ್ಕಾಗಿ ನೀರು ಕಾಯಿಸು”.
ತನ್ನ ವಿಶ್ರಾಂತಿಗೆ ಭಂಗ ಮಾಡಿದ ಸಿಟ್ಟಿನಿಂದ ರಾಜಕುಮಾರ್, ಮೋಹನ್ ಚೋಟಿ ಡೈಲಾಗ್ ಎಲ್ಲವನ್ನೂ ತಾವೇ ನುಂಗಿ ನೀರು ಕುಡಿದುಬಿಟ್ಟಿದ್ದರು. ಒಮ್ಮೆ ರಾಜಕುಮಾರ್ ಡೈಲಾಗ್ ಹೇಳಿದ ಮೇಲೆ ಅದನ್ನು ಬದಲಾಯಿಸುವ ಹಕ್ಕು ಯಾರಿಗೂ ಇರಲಿಲ್ಲ.
ಹೀಗೆ ರಾಜಕುಮಾರ್ ರ ವಿಕ್ಷಿಪ್ತ ವಿಚಿತ್ರ ಸ್ವಭಾವವನ್ನು ನೆನಪಿಸಿಕೊಂಡವರು ಪ್ರಸಿದ್ಧ ಖಳ ನಟ ರಜಾ ಮುರಾದ್.

