ಯಾರೂ ಮಂದಿರ, ಮಸೀದಿ, ಚರ್ಚ್ ಗೆ ಹೋಗುವುದು ಬೇಕಿಲ್ಲ ; ನೀವು ಎಲ್ಲಿ ಇರುವುರೋ ಅಲ್ಲಿಯೇ ಆನಂದದಿಂದಿರಿ, ಆಗ ಅಲ್ಲಿಯೇ ದೇವ ಮಂದಿರ. ದೇವಸ್ಥಾನ ಎನ್ನುವುದು ನಿಮ್ಮ ಎನರ್ಜಿಯ ಸೂಕ್ಷ್ಮ ಸೃಷ್ಟಿ. ನೀವು ಆನಂದದಿಂದ ಇರುವಿರಾದರೆ, ನಿಮ್ಮ ಸುತ್ತ ನೀವೇ ದೇವಸ್ಥಾನ ಸೃಷ್ಟಿ ಮಾಡಿಕೊಳ್ಳುವಿರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಚೈತನ್ಯದ ಪೂಜೆ ನಡೆದSದ
ನೋಡS ತಂಗಿ।। ಅಭಂಗದ ಭಂಗೀS ।। ಪ ।।
ಸೌಜನ್ಯ ಎಂಬುದು ಮೊದಲನೆ ಹೂವು
ಅರಳೋಣ ನಾವೂ ನೀವೂ
ಸಾಮರ್ಥ್ಯ ಎಂಬುದು ಬೆಲಪತ್ರಿ
ಶಿವಗರ್ಪಿತ ಇರಲಿ ಖಾತ್ರಿ.
ಸತ್ಯ ಎಂಬುವ ನಿತ್ಯದ ದೀಪ
ಸುತ್ತೆಲ್ಲಾ ಅವನದೇ ರೂಪ
ಪ್ರೀತಿ ಎಂಬುವ ನೈವೇದ್ಯ
ಇದು ಎಲ್ಲರ ಹೃದಯದ ಸಂವೇದ್ಯ.
ಸೌಂದರ್ಯ ಧ್ಯಾನಾ ಎದೆಯಲ್ಲಿ
ಅಸ್ಪರ್ಶಾ ಚಿನ್ಮಯದಲ್ಲಿ
ಆನಂದಗೀತ ಸಾಮSವೇದಾ
ಸರಿಗಮ ನಾದಾ.
‘ಉದ್ಭವ’ ‘ಉದ್ಭವ’ ಹೇ ಮಂಗಳ ಮೂರ್ತಿ
ಅಲಲಾ! ಆಹಹಾ! ಅಮಮಾ!
ಆತ್ಮಾ ಪರಮಾತ್ಮಾ ಅಂತSರಾತ್ಮಾ
ಘನವೋ ಘನ! ನಿಮ್ಮಾ ಮಹಿಮಾ!
~ ಅಂಬಿಕಾತನಯದತ್ತ
ದೇವಸ್ಥಾನಗಳಲ್ಲಿ ನಾವು ಕೇವಲ ಮಿಥ್ಯಾಚಾರಗಳನ್ನು ಮಾಡುತ್ತೇವೆ. ಅಲ್ಲಿ ನಾವು ದೇವರಿಗೆ ಹೂವುಗಳನ್ನು ಅರ್ಪಿಸುತ್ತೇವೆ ಆದರೆ ಆ ಹೂವುಗಳು ನಮಗೆ ಸೇರಿದ್ದಲ್ಲ, ಅವಗಳನ್ನು ಮರಗಳಿಂದ ಕಿತ್ತು ತಂದಿದ್ದೇವೆ. ಮರದ ಮೇಲಿರುವಾಗಲೇ ಆ ಹೂವುಗಳು ದೇವರಿಗೆ ಅರ್ಪಿತವಾಗಿವೆ, ಮತ್ತು ಅವು ಮರದ ಮೇಲಿದ್ದಾಗ ಜೀವಂತವಾಗಿರುತ್ತವೆ ; ನೀವು ಅವುಗಳನ್ನು ಕೊಂದು, ಆ ಶವಗಳನ್ನು ಯಾವ ನಾಚಿಕೆಯಿಲ್ಲದೇ ದೇವರಿಗೆ ಅರ್ಪಿಸುತ್ತಿದ್ದೀರ.
ನಾನು ಗಮನಿಸಿದ್ದೇನೆ. ವಿಶೇಷವಾಗಿ ಭಾರತದಲ್ಲಿ ಹೂವುಗಳನ್ನು ತಮ್ಮ ಮನೆಯ ಗಿಡದಿಂದ ಕಿತ್ತುಕೊಳ್ಳುವುದಿಲ್ಲ, ಅವರು ಹೂವು ಕಿತ್ತುಕೊಳ್ಳುವುದು ನೆರೆಮನೆಯವರ ತೋಟದಿಂದ. ಮತ್ತು ಹೂವುಗಳನ್ನು ಅವರು ಧಾರ್ಮಿಕ ಕಾರ್ಯಗಳಿಗಾಗಿ ಬಳಸುತ್ತಿದ್ದಾರಾದ್ದರಿಂದ ಯಾರೂ ಅವರನ್ನು ತಡೆಯುವುದಿಲ್ಲ. ಜನ ಉರಿಸುವ ದೀಪ, ಕ್ಯಾಂಡಲ್, ಅಗರಬತ್ತಿ ಯಾವುದೂ ಅವರದಲ್ಲ, ಎಲ್ಲವೂ ಇನ್ನೊಬ್ಬರಿಂದ ಕೊಂಡು ತಂದಿರುವುದು.
ನಿಜದ ಗುಡಿಯನ್ನು ಆನಂದದ ಭಾವದಿಂದ ನಿರ್ಮಿಸಲಾಗುತ್ತದೆ ಮತ್ತು ದೇವರಿಗೆ ಅರ್ಪಿತವಾಗುವ ಈ ಎಲ್ಲ ಸಂಗತಿಗಳು ಆಗ ತಾವೇ ತಾವಾಗಿ ಹುಟ್ಟಿಕೊಳ್ಳುತ್ತವೆ. ನೀವು ಆನಂದದಿಂದ ಇರುವಿರಾದರೆ ದೇವರಿಗೆ ನೀವು ನಿಮ್ಮ ಪ್ರಜ್ಞೆಯ ಹೂವುಗಳನ್ನು ಅರ್ಪಿಸುತ್ತೀರಿ, ಮತ್ತು ನೀವು ದೇವರಿಗೆ ಮಾಡುತ್ತಿರುವ ಆರತಿಯಲ್ಲಿರುವ ದೀಪ, ನಿಮ್ಮ ಅಂತರಂಗದ ಜ್ವಾಲೆಯಿಂದ ಹೊತ್ತಿಕೊಂಡಿರುವಂಥದು. ಅಲ್ಲಿ ಪರಿಮಳವಿದೆ, ಆದರೆ ಆ ಪರಿಮಳ ನಿಮ್ಮ ಇರುವಿಕೆಯಿಂದಾಗಿಯೇ ತಾನೇ ಸೃಷ್ಚಿಯಾದಂಥದು. ಇದು ನಿಜವಾದ ಪೂಜೆ.

