ಗೆಳೆಯರು ಸಲಹೆ ನೀಡಲು ಬಯಸಿದರೆ, ಗಮನವಿಟ್ಟು ಕೇಳಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ರೂಮಿ
ತನ್ನ ಅಂತಃಕರಣದ ಭಾವಪರವಶತೆಯಲ್ಲಿ
ಮೈಮರೆತುಬಿಟ್ಚಾಗಲೆಲ್ಲ
ಸ್ಪಷ್ಟತೆಯನ್ನು ಕಳೆದುಕೊಂಡುಬಿಡುತ್ತಾನೆ.
ಆ ಸ್ಥಿತಿಗೆ ಶರಣಾಗಿ
ಎಲ್ಲವನ್ನೂ ಮರೆತುಬಿಡುತ್ತಾನೆ.
ಆದರೆ ನಾನು ಹಾಗಲ್ಲ,
ಅರಿವು ನನ್ನ ಕೈ ಬಿಡಿದು ನಡೆಸುತ್ತದೆ,
ನಾನೂ ಅದೇ ಆನಂದ ಅನುಭವಿಸುತ್ತೇನಾದರೂ
ಪ್ರೇಮದ ಭಾವೋನ್ಮಾದ
ನನ್ನ ಯಾವತ್ತೂ ಮೈ ಮರೆಸಿಲ್ಲ.
~ ಶಮ್ಸ್
ನಾವು ಕಲಿಯಬಹುದಾದ ಅತ್ಯಂತ ಮಹತ್ವದ ಸಂಗತಿಯೆಂದರೆ “ಕೇಳುವಿಕೆ”. ಅತ್ಯಂತ ಸಮಾಧಾನದಿಂದ ಕೇಳಿ. ಸುಮ್ಮನೇ ಅಸಡ್ಡೆಯಿಂದ ಕೇಳಬೇಡಿ. ಸುಮ್ಮನೇ ಸೌಜನ್ಯಕ್ಕಾಗಿ ಕೇಳಬೇಡಿ. ಗೆಳೆಯರ ಮಾತು ಕೇಳದಿದ್ದರೆ ಅವರು ಬೇಸರ ಮಾಡಿಕೊಳ್ಳಬಹುದೆಂದು ಸಂಕೋಚದಿಂದ ಕೇಳಬೇಡಿ. ಹಾಗಿದ್ದಾಗ ಅವರಿಗೆ ಮಾತು ನಿಲ್ಲಿಸಲು ಹೇಳಿ, ನಿಮಗೆ ಕೇಳುವ ಮೂಡು ಇಲ್ಲವೆನ್ನುತ್ತ.
ಆದರೆ ನೀವು ಕೇಳುವಾಗ ಮಾತ್ರ ಗಮನವಿಟ್ಟು ಕೇಳಿ, ಯಾವ ಪೂರ್ವಾಗ್ರಹ ಇಲ್ಲದೇ ಕೇಳಿ. ಏಕೆಂದರೆ ನಿಮ್ಮ ಗೆಳೆಯರು ನಿಮಗೆ ಹೇಳಬಯಸುತ್ತಿರುವುದು ನಿಮಗೆ ಪ್ರಯೋಜನಕಾರಿಯಾಗಿರಬಹುದು. ಅವರು ಹೇಳುತ್ತಿರುವುದು ತಪ್ಪಾಗಿದ್ದರೂ ಅದು ನಿಮ್ಮನ್ನು ಅನುಭವಶಾಲಿಯಾಗಿಸುತ್ತದೆ. ಆಗ ನೀವು ಹಲವಾರು ದೃಷ್ಟಿಕೋನಗಳನ್ನು ಕಲಿಯುತ್ತೀರಿ. ಹಾಗಾಗಿ ಗಮನವಿಟ್ಟು ಕೇಳಿ ಆದರೆ, ನಿಮ್ಮ ನಿರ್ಧಾರ ಮಾತ್ರ ನಿಮಗೆ ಅನಿಸಿದ್ದಾಗಿರಲಿ.
ಒಮ್ಮೆ ವ್ಯಕ್ತಿಗೆ ಈ ರಿಲೇಟಿವ್ ತಿಳುವಳಿಕೆ ಬಂದುಬಿಟ್ಟರೆ, ಆಗ ಸಂಗತಿಗಳನ್ನು ಸ್ಪಷ್ಟವಾಗಿ, ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಇಲ್ಲವಾದರೆ ಜನ ನಿಖರವಾದಿಗಳಾಗುತ್ತ ( absolutist) ಹೋಗುತ್ತಾರೆ. ಅವರು ಎಲ್ಲವನ್ನೂ ಕೇವಲ ಸರಿ – ತಪ್ಪುಗಳ ದಿಕ್ಕಿನಲ್ಲಿ ನೋಡುತ್ತ ಹೋಗುತ್ತಾರೆ : ನಾನು ಹೇಳುತ್ತಿರುವುದು ಸತ್ಯ ಮತ್ತು ನನ್ನ ವಿರುದ್ಧವಾಗಿರುವವರು ತಪ್ಪು ಎಂದು. ಮನುಷ್ಯನ ಈ ವರ್ತನೆ ಇಡೀ ಜಗತ್ತನ್ನು ನಿಸ್ಸಹಾಯಕವಾಗಿಸಿದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ರು ತಮ್ಮದು ಮಾತ್ರ ನಿಖರ ಸತ್ಯ ಎಂದು ವಾದಿಸುತ್ತ ಪರಸ್ಪರ ಕಚ್ಚಾಡುತ್ತಿದ್ದಾರೆ. ಆದರೆ ಸತ್ಯದ ಮೇಲೆ ಯಾರ ಯಜಮಾನಿಕೆಯೂ ಇಲ್ಲ.
ಸತ್ಯ ಅಪಾರ. ಅದರ ಮುಖಗಳು ಅನಂತ ಮತ್ತು ಅದನ್ನು ತಲುಪುವ ದಾರಿಗಳು ಅಗಣಿತ. ನಮಗೆ ಗೊತ್ತಿರುವುದು ಪೂರ್ತಿಯಲ್ಲ, ಸೀಮಿತ ; ಕೇವಲ ಒಂದು ಭಾಗ ಮಾತ್ರ.
ಒಮ್ಮೆ ಗೆಳೆಯನೊಬ್ಬ ಸಾಲ ಕೇಳಿಕೊಂಡು ನಸ್ರುದ್ದೀನ್ ನ ಬಳಿ ಬಂದ. ತನಗೆ ಈಗ ಹಣದ ಬಹಳ ಅವಶ್ಯಕತೆಯಿದೆ ಎಂದೂ ಎರಡು ವಾರಗಳ ಬಳಿಕ ಹಣ ವಾಪಸ್ಸು ಕೊಡುವುದಾಗಿಯೂ ಕೇಳಿಕೊಂಡ.
ಗೆಳೆಯ, ಸಾಲ ವಾಪಸ್ಸು ಕೊಡುವ ಮಾತನ್ನ ನಂಬಲು ನಸ್ರುದ್ದೀನ್ ಗೆ ಸುತರಾಂ ಸಾಧ್ಯವಾಗಲಿಲ್ಲ, ಆದರೂ ಗೆಳೆಯನಿಗೆ ಹಣ ಕೊಟ್ಟು ಕಳುಹಿಸಿದ.
ಎರಡು ವಾರಗಳ ಬಳಿಕ ಗೆಳೆಯ, ನಸ್ರುದ್ದೀನ್ ನ ಸಾಲ ವಾಪಸ್ಸು ಮಾಡಿದ. ನಸ್ರುದ್ದೀನ್ ಗೆ ಬಹಳ ಆಶ್ಚರ್ಯವಾಯಿತು.
ಕೆಲ ದಿನಗಳ ನಂತರ, ಗೆಳೆಯ ಮತ್ತೆ ಬಂದು ನಸ್ರುದ್ದೀನ್ ನ ಹತ್ತಿರ ಸಾಲ ಕೇಳಿದ, ಕಳೆದ ಬಾರಿ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ಸು ಮಾಡಿದ್ದನ್ನ ನಸ್ರುದ್ದೀನ್ ಗೆ ನೆನಪಿಸಿದ.
“ ಈ ಸಲ ನಿನಗೆ ಸಾಲ ಕೊಡುವುದು ಸಾಧ್ಯವಿಲ್ಲ. ಕಳೆದ ಬಾರಿ ನೀನು ಸಾಲ ವಾಪಸ್ ಮಾಡುವುದಿಲ್ಲ ಎಂದು ನಾನು ನಂಬಿದ್ದೆ. ಆದರೆ ಸಾಲ ವಾಪಸ್ ಮಾಡಿ ನೀನು ನನ್ನ ನಂಬಿಕೆಗೆ ದ್ರೋಹ ಮಾಡಿದ್ದೀಯ. ಇನ್ನೊಮ್ಮೆ ಮೋಸ ಹೋಗಲು ನಾನು ತಯಾರಿಲ್ಲ “
ನಸ್ರುದ್ದೀನ್, ಗೆಳೆಯನಿಗೆ ಸಾಲ ಕೊಡಲು ಖಡಾಖಂಡಿತವಾಗಿ ನಿರಾಕರಿಸಿದ.

