ಒಂದು ಮೈ ಒಂದು ಮನಸು ಎರಡು ಸೆಳೆತ । ಅಕ್ಕ ಮಹಾದೇವಿ #5

ತನ್ನನ್ನು ತಾನು ಇಡಿಯಾಗಿ ಉಳಿಸಿಕೊಳ್ಳಲು ಬಯಸುವ ಮನಸಿನ ತೊಳಲಾಟ ಈ ವಚನದಲ್ಲಿದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ಉಳ್ಳುದೊಂದು ತನು
ಉಳ್ಳುದೊಂದು ಮನ
ನಾನಿನ್ನಾವ ಮನದಲ್ಲಿ ಧ್ಯಾನವ ಮಾಡುವೆನಯ್ಯಾ
ಸಂಸಾರವನಾವ ಮನದಲ್ಲಿ ತಲ್ಲೀಯವಾಹೆನಯ್ಯಾ
ಅಕಟಕಟಾ
ಕೆಟ್ಟೆ ಕೆಟ್ಟೆ
ಸಂಸಾರಕ್ಕಲ್ಲಾ ಪರಮಾರ್ಥಕ್ಕಲ್ಲಾ
ಎರಡಕ್ಕೆ ಬಿಟ್ಟ ಕರುವಿನಂತೆ
ಬಿಲ್ವ ಬೆಳವಲಕಾಯನೊಂದಾಗಿ ಹಿಡಿಯಬಹುದೆ
ಚೆನ್ನಮಲ್ಲಿಕಾರ್ಜುನಾ [೮೯]

ಉಳ್ಳುದೊಂದು=ಇರುವುದೊಂದು; ತನು=ದೇಹ; ತಲ್ಲೀಯವಾಹೆನು=ತತ್-ಅದರಲ್ಲಿ, ಲೀಯವಾಹೆನು-ಒಂದಾಗುವೆನು

ಇರುವುದೊಂದು ಮನಸ್ಸು, ಇರುವುದೊಂದು ಮೈ. ಯಾವ ಮನಸಿನಲ್ಲಿ ಧ್ಯಾನ ಮಾಡಲಿ, ಯಾವ ಮನಸಿನಲ್ಲಿ ಸಂಸಾರದೊಳಗೆ ಲೀನವಾಗಲಿ. ಅಯ್ಯೋ, ಕೆಟ್ಟೆ. ನಾನು ಸಂಸಾರಕ್ಕೂ ಅಲ್ಲ, ಪರಮಾರ್ಥಕ್ಕೂ ಅಲ್ಲ. ಎರಡು ಹಸುವಿನ ಹಾಲು ಕುಡಿಯಲು ಬಿಟ್ಟ ಕರುವಿನ ಹಾಗೆ ನಾನು. ಬಿಲ್ವಪತ್ರೆಯ ಕಾಯಿ, ಬೇಲದ ಕಾಯಿಗಳನ್ನು [ಒಂದೇ ಕೈಯಲ್ಲಿ] ಹಿಡಿಯಲಾಗುವುದೇ, ಚೆನ್ನಮಲ್ಲಿಕಾರ್ಜುನಾ?

ವ್ಯಕ್ತಿತ್ವ ಅಖಂಡವಾಗಿರಬೇಕು ಅನ್ನುವುದು ಆದರ್ಶ. ಮನಸ್ಸು ಸಂಸಾರದತ್ತ ಮತ್ತು ಪರಮಾರ್ಥದತ್ತ ಎರಡೂ ಸೆಳೆತಕ್ಕೆ ಗುರಿಯಾಗುವುದು ವಾಸ್ತವ. ಒಂದು ಮನಸನ್ನು ಹೀಗೆ ಎರಡಾಗಿ ಸೀಳಿಕೊಳ್ಳಲು ಒಲ್ಲೆ ಎಂದಾದರೆ ತಳಮಳ ಹುಟ್ಟುತ್ತದೆ. ಬಿಲ್ವಪತ್ರೆಯ ಕಾಯಿ, ಬೇಲದ ಕಾಯಿ ಎರಡೂ ಒಂದೇ ಕೈಯಲ್ಲಿ ಹಿಡಿಯಲು ಆಗದಷ್ಟು ದೊಡ್ಡ ಗಾತ್ರದವು, ದುಂಡನೆಯ ಆಕಾರದವು, ಪರಮಾರ್ಥ ಮತ್ತು ಸಂಸಾರ ಎರಡೂ ಹಾಲೂಡುವ ಹಸುಗಳೇ, ನಾನು ಕರು, ಯಾವ ಹಸುವಿನ ಹಾಲು ಕುಡಿಯಲಿ ಅನ್ನುವ ತಬ್ಬಿಬ್ಬು ನೆಮ್ಮದಿಯನ್ನು ಕೆಡಿಸಿದೆ.  ಸಂಸಾರ ಅನ್ನುವುದು ವ್ಯಕ್ತಿತ್ವದ ಅರ್ಥಗಳನ್ನು ʻಖಂಡಿತʼಗೊಳಿಸುತ್ತದೆ-ತುಂಡು ತುಂಡು ಮಾಡುತ್ತದೆ, ಯಾವುದೋ ಒಂದು ತುಂಡು ಮಾತ್ರ ನಾನು ಎಂದು ಖಚಿತ ಮಾಡುತ್ತದೆ. ಪರಮ (ಅಖಂಡ, absolute) ಅರ್ಥದಲ್ಲಿ ನಾನು ಅನ್ನುವುದರ ಅರ್ಥ ಮುಕ್ಕಾಗದೆ, ತುಂಡಾಗದೆ ಅಖಂಡವಾಗಿರುತ್ತದೆ.

ತನ್ನನ್ನು ತಾನು ಇಡಿಯಾಗಿ ಉಳಿಸಿಕೊಳ್ಳಲು ಬಯಸುವ ಮನಸಿನ ತೊಳಲಾಟ ಈ ವಚನದಲ್ಲಿದೆ. ಸುಮಾರಾಗಿ ಇದೇ ಅರ್ಥವನ್ನು ಹೊಳೆಯಿಸುವ, ʼಮುದ್ದ ನೋಡಿ, ಮುಖವ ನೋಡಿ, ಮೊಲೆಯ ನೋಡಿ, ಮುಡಿಯ ನೋಡಿ,
ಕರಗಿ ಕೊರಗುವುದೆನ್ನ ಮನ/ ಲಿಂಗದೇವನ ಧ್ಯಾನವೆಂದಡೆ ಕರಗಿ ಕೊರಗದೆನ್ನ ಮನ ಎಂಬ ಬಸವವಚನವನ್ನು ನೋಡಿ (ಸಂ೧, ವಚನ ೧೩೨೦). ಮನದ ಕಾಲತ್ತಲು ತನುವಿನ ಕಾಲಿತ್ತಲು (ಸಂ.೨, ವಚನ ೨೯೫)  ಎಂಬ ಅಲ್ಲಮ ವಚನವನ್ನು ನೋಡಿ. ಲ್ಯಾಟಿನ್‌ ಮೂಲದ Individual ಅನ್ನುವ ಮಾತಿನ ಅರ್ಥವೇ ಅವಿಭಜನೀಯ ಎಂದು. ಹಾಗೆ ಸಂತರು, ಅನುಭಾವಿಗಳು ಅವಿಭಜಿತ ವ್ಯಕ್ತಿಗಳಾಗಲು ಹಂಬಲಿಸಿ, ಹೆಣಗಿದವರೇ ಆಗಿದ್ದರು ಅನಿಸುತ್ತದೆ. ವ್ಯಕ್ತಿತ್ವ ಹಲವು ಹೋಳಾಗುವುದೇ ನಾವೆಲ್ಲ ಎದುರಿಸುವ ತೊಡಕು ಅನಿಸುತ್ತದೆ. ಪೂರ್ಣತೆಯ ಅಕಾಂಕ್ಷೆ, ವ್ಯಕ್ತಿ ಇಡಿಯಾಗಬೇಕೆಂಬ ಆಕಾಂಕ್ಷೆ ಎರಡೂ ಒಂದೇ ಮನಸಿನಲ್ಲಿ ಮೂಡುತ್ತದೆ ಅನ್ನುವುದು ಹಲವು ಭಾಷೆಗಳು ಕಂಡುಕೊಂಡಿರುವ ಸತ್ಯ. ʻತನುವೊಂದು ದ್ವೀಪ, ಮನವೊಂದು ದ್ವೀಪ, ಆಪ್ಯಾಯನವೊಂದು ದ್ವೀಪ, ವಚನವೊಂದು ದ್ವೀಪʼ ಎಂದು ಆರಂಭವಾಗುವ ಅಲ್ಲಮವಚನ (೨.೫೯೪) ನಮ್ಮ ವ್ಯಕ್ತಿತ್ವಗಳು ಮೈ, ಮನಸ್ಸು, ತೃಪ್ತಿ, ಮಾತು ಎಂದು ನಾಲ್ಕು ಹೋಳಾಗಿರುವುದನ್ನೂ ಆಳದಲ್ಲಿ ಒಂದೇ ಆಗಿರುವುದನ್ನೂ ಹೇಳುತ್ತದೆ.

ಅಕ್ಕಮಹಾದೇವಿಯವರ ʻಎನ್ನ ಕಾಯ ಮಣ್ಣುʼ ಎಂದು ಆರಂಭವಾಗುವ ಇನ್ನೊಂದು ವಚನ ಇದೇ ವಿಚಾರವನ್ನು ಬೇರೆಯ ರೀತಿಯಲ್ಲಿ ಹೇಳುತ್ತದೆ. [೫.೯೬]

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. ದಿವಾಕರ's avatar ದಿವಾಕರ

    ನಾ‌ನು ಬಿಡುತ್ತೇನೆ, ನಾನು ಹಿಡಿದುಕೊಳ್ಳುತ್ತೇನೆ ಎಂಬ ಕರ್ತೃತ್ವ ಭಾವ ತಳೆದರೆ, ಹಿಡಿ-ಬಿಡುಗಳ ದ್ವಂದ್ವ ಅತ್ತಿತ್ತ ಎಳೆದಾಡುತ್ತವೆ; “ನಾನು” ಜೇಡದ ಬಲೆಯಲ್ಲಿ ಬಲಿಯಾಗುತ್ತೇನೆ. ಹಿಡಿಯುವುದು ಹಿಡಿಯುತ್ತದೆ; ಬಿಡುವುದು ಬಿಡುತ್ತದೆ. ಅದು ನಾನೂ ಅಲ್ಲ; ನನ್ನನ್ನೂ ಅಲ್ಲ!

    Like

Leave a Reply

This site uses Akismet to reduce spam. Learn how your comment data is processed.