ಖಂಡಿತವಾದಿ ಪದಗಳನ್ನು ಬಳಸಲು ಹಿಂಜರಿಯಿರಿ. ಹೆಚ್ಚು ಹೆಚ್ಚು “ ಪ್ರಾಯಶಃ, ಬಹುಶಃ “ ಇಂಥ ಪದಗಳನ್ನು ಬಳಸಿ, ಮತ್ತು ಇತರರಿಗೆ ಅವರು ಅವರ ಸ್ವಾತಂತ್ರ್ಯವನ್ನು ಬಳಸಿಕೊಂಡು ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಉತ್ತೇಜಿಸಿ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನೀವು ಬಳಸುವ ಪ್ರತೀ ಪದವನ್ನು ಗಮನವಿಟ್ಟು ನೋಡಿ. ನಮ್ಮ ಭಾಷೆ, ನಾವು ಮಾತನಾಡುವ ರೀತಿ ಹೇಗಿದೆಯೆಂದರೆ ನಾವು ನಮ್ಮ ಮಾತಿನಲ್ಲಿ ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಖಂಡಿತವಾದಿ ಪದಗಳನ್ನು ( absolute statements) ಬಳಸುತ್ತೇವೆ. ಯಾವತ್ತೂ ಹಾಗೆ ಮಾಡಬೇಡಿ. “ಬಹುಶಃ” ಎನ್ನುವ ಪದವನ್ನು ಹೆಚ್ಚಾಗಿ ಬಳಸಿ. ಖಂಡಿತವಾದಿ ಪದಗಳನ್ನು ಬಳಸಲು ಹಿಂಜರಿಯಿರಿ. “ಪ್ರಾಯಶಃ” ಎನ್ನುವ ಪದವನ್ನ ಹೆಚ್ಚಾಗಿ ಬಳಸಿ ಮತ್ತು ಇತರರಿಗೆ ಅವರು ಅವರ ಸ್ವಾತಂತ್ರ್ಯವನ್ನು ಬಳಸಿಕೊಂಡು ತಮ್ಮ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಉತ್ತೇಜಿಸಿ.
ಕನಿಷ್ಟ ಒಂದು ತಿಂಗಳು ಈ ಪ್ರಯತ್ನ ಮಾಡಿ. ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಏಕೆಂದರೆ, ಖಂಡಿತವಾದಿ ಪದಗಳನ್ನು ಬಳಸಿ ಮಾತನಾಡುವುದು ನಮಗೆ ಹುಟ್ಟಿನಿಂದ ಬಂದಿರುವ ಪರಿಪಾಠ. ಆದರೆ ಈ ಕುರಿತು ಎಚ್ಚರಿಕೆಯಿಂದಿದ್ದರೆ, ಈ ಪರಿಪಾಠವನ್ನು ನಾವು ತ್ಯಜಿಸಬಹುದು. ಆಗ ನೋಡಿ ಹೇಗೆ ವಾದ ವಿವಾದಗಳು ಕಡಿಮೆಯಾಗುತ್ತವೆ ಮತ್ತು ಯಾರೂ ಯಾರನ್ನೂ ಡಿಫೆಂಡ್ ಮಾಡಿಕೊಳ್ಳುವ ಸಮಸ್ಯೆ ಎದುರಾಗುವುದಿಲ್ಲ.
ಒಂದು ಮುಂಜಾನೆ ಒಬ್ಬ ಶಿಷ್ಯ ಝೆನ್ ಮಾಸ್ಟರ್ ನನ್ನು ಪ್ರಶ್ನೆ ಮಾಡಿದ.
“ ಮಾಸ್ಟರ್ ದೇವರಿದ್ದಾನೆಯೆ ? “
“ಹೌದು ಇದ್ದಾನೆ “ ಮಾಸ್ಟರ್ ಉತ್ತರಿಸಿದ.
ಮಧ್ಯಾಹ್ನದ ಊಟ ಆದ ಮೇಲೆ ಇನ್ನೊಬ್ಬ ಶಿಷ್ಯ ಅದೇ ಪ್ರಶ್ನೆ ಕೇಳಿದ.
“ ಮಾಸ್ಟರ್ ದೇವರಿದ್ದಾನೆಯೆ ? “
“ ಇಲ್ಲ, ದೇವರಿಲ್ಲ “ ಮಾಸ್ಟರ್ ಉತ್ತರಿಸಿದ.
ಸಂಜೆ ಮತ್ತೊಬ್ಬ ಶಿಷ್ಯ ಅದೇ ಪ್ರಶ್ನೆ ಕೇಳಿದ.
“ ಮಾಸ್ಟರ್ ದೇವರಿದ್ದಾನೆಯೆ ? “
“ ಅದು ನೀನು ನಿರ್ಧರಿಸಬೇಕಾದ ವಿಷಯ “ ಮಾಸ್ಟರ್ ಉತ್ತರಿಸಿದ.
ಬೆಳಿಗ್ಗೆಯಿಂದ ಮಾಸ್ಟರ್ ನನ್ನು ಗಮನಿಸುತ್ತಿದ್ದ ಶಿಷ್ಯನೊಬ್ಬ ಸಿಟ್ಟಿನಿಂದ ಕೇಳಿದ.
“ ಎಂಥ ಅಸಂಗತ ಇದು ಮಾಸ್ಟರ್? ಒಂದೇ ಪ್ರಶ್ನೆಗೆ ಯಾಕೆ ಮೂರು ಬೇರೆ ಬೇರೆ ಉತ್ತರ ಕೊಟ್ಟಿರಿ ? “
ಮಾಸ್ಟರ್ ಉತ್ತರಿಸಿದ.
“ ಏಕೆಂದರೆ ಆ ಮೂವರೂ ಒಬ್ಬರಿಗಿಂತ ಒಬ್ಬರು ಭಿನ್ನ.
ಮೂದಲನೇಯವ, ನಾನು ಹೇಳಿದ್ದನ್ನು ನಂಬುತ್ತಾನೆ.
ಎರಡನೇಯವ, ಏನಾದರೂ ಮಾಡಿ ನಾನು ಹೇಳಿದ್ದು ಸುಳ್ಳು ಎನ್ನುವುದನ್ನ ಸಿದ್ಧ ಮಾಡುತ್ತಾನೆ.
ಮೂರನೇಯವ , ತನಗೆ ದೊರಕಿರುವ ಆಯ್ಕೆಯ ಅಧಿಕಾರದ ಬಗ್ಗೆ ಮಾತ್ರ ನಂಬಿಕೆ ಇಟ್ಟುಕೊಳ್ಳುತ್ತಾನೆ.

