ತಾಯಿ ಒಂದು ಮಗುವನ್ನ ಹೆಚ್ಚು, ಒಂದು ಮಗುವನ್ನ ಕಡಿಮೆ ಪ್ರೀತಿಸಬಹುದು. ಆಕೆ ತನ್ನ ಇಬ್ಬರೂ ಮಕ್ಕಳನ್ನು ಸಮವಾಗಿ ಪ್ರೀತಿಸಬೇಕೆಂದು ನಿರೀಕ್ಷಿಸಲಾಗದು ; ಇದು ಸಾಧ್ಯವಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮಕ್ಕಳ ಗ್ರಹಿಸುವ ಶಕ್ತಿ ತುಂಬ ತೀಕ್ಷ್ಣವಾಗಿರುತ್ತದೆ. ಒಬ್ಬರನ್ನು ಹೆಚ್ಚು ಇಷ್ಟಪಡಲಾಗುತ್ತಿದೆ, ಇನ್ನೊಬ್ಬರನ್ನು ಕಡಿಮೆ ಇಷ್ಟಪಡಲಾಗುತ್ತಿದೆ ಎನ್ನುವುದನ್ನ ಮಕ್ಕಳು ತಕ್ಷಣ ಗ್ರಹಿಸುತ್ತಾರೆ. ತನ್ನ ಇಬ್ಬರೂ ಮಕ್ಕಳನ್ನು ಸಮವಾಗಿ ಪ್ರೀತಿಸುತ್ತೇನೆ ಎನ್ನುವ ತಾಯಿಯ ಮಾತು ತೋರಿಕೆಯದು ಎನ್ನುವುದು ಮಕ್ಕಳಿಗೆ ಗೊತ್ತು. ಆದ್ದರಿಂದ ಮಕ್ಕಳ ಒಳಗೆ ಆಂತರಿಕ ಬಿಕ್ಕಟ್ಟು, ದ್ವಂದ್ವ, ಜಗಳ, ಹೆಬ್ಬಯಕೆ ಹುಟ್ಟಿಕೊಳ್ಳುತ್ತವೆ.
ಪ್ರತಿ ಮಗುವೂ ವಿಭಿನ್ನ. ಕೆಲವರಿಗೆ ಸಂಗೀತದಲ್ಲಿ ಪ್ರತಿಭೆ ಇದ್ದರೆ ಕೆಲವರಿಗೆ ಇರುವುದಿಲ್ಲ. ಕೆಲವರಿಗೆ ಗಣಿತದಲ್ಲಿ ಪ್ರತಿಭೆ ಇದ್ದರೆ ಕೆಲವರಿಗೆ ಇರುವುದಿಲ್ಲ. ಕೆಲವೊಬ್ಬರು ದೈಹಿಕವಾಗಿ ಇನ್ನೊಬ್ಬರಿಗಿಂತ ಸುಂದರರಾಗಿರುತ್ತಾರೆ ಅಥವಾ ಒಬ್ಬರಿಗೆ ಇರುವ ವ್ಯಕ್ತಿತ್ವದ ಚಾರ್ಮ ಇನ್ನೊಬ್ಬರಿಗೆ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಹೆಚ್ಚು ಸಮಸ್ಯೆಗಳು ಉದ್ಭವವಾಗುತ್ತವೆ, ಮತ್ತು ನಮಗೆ ಸತ್ಯ ಹೇಳಿ ಕಠಿಣರಾಗುವುದಕ್ಕಿಂತ ಸುಳ್ಳಿನಿಂದ ಎಲ್ಲರನ್ನು ಮೆಚ್ಚಿಸುವುದು ಒಳ್ಳೆಯದು ಎಂದು ಕಲಿಸಲಾಗುತ್ತದೆ.
ಮಕ್ಕಳಿಗೆ ತಮ್ಮ ಮನಸ್ಸಿನಂತೆ ನಡೆದುಕೊಳ್ಳುವುದನ್ನು ನಾವು ಕಲಿಸುವೆವಾದರೆ, ಮಕ್ಕಳು ಜಗಳಾಡಿ ತಮ್ಮ ಸಮಸ್ಯೆಗಳನ್ನ ತಾವೇ ಪರಿಹರಿಸಿಕೊಳ್ಳುತ್ತವೆ. ಮಕ್ಕಳಲ್ಲಿ ಆ ಗಳಿಗೆಯಲ್ಲಿ ಕೋಪ ಇರಬಹುದು ಆದರೆ ಮುಂದಿನ ಗಳಿಗೆಯಲ್ಲಿ ಅವರು ಎಲ್ಲ ಮರೆತು ಕೈ ಕೈ ಹಿಡಿದುಕೊಂಡು ಆಟವಾಡುತ್ತಿರುತ್ತಾರೆ. ಮಕ್ಕಳು ಬಹಳ ಸರಳ ಆದರೆ ನಾವು ಅವರಿಗೆ ಸರಳವಾಗಿರಲು ಬಿಡುವುದಿಲ್ಲ. ತಮ್ಮ ಮನಸ್ಸಿನ ಕಹಿಯನ್ನೆಲ್ಲ ಹೊರ ಹಾಕದೇ ಇನ್ನೊಬ್ಬರ ಜೊತೆ ನಗು ನಗುತ್ತ ಇರಲು ನಾವು ಅವರಿಗೆ ಹೇಳಿಕೊಡುತ್ತೇವೆ. ಇವನು ನಿನ್ನ ತಮ್ಮ, ಇವಳು ನಿನ್ನ ತಂಗಿ ಇವರ ಜೊತೆ ನೀನು ಜಗಳಾಡಬಾರದು, ಕೋಪ ಮಾಡಿಕೊಳ್ಳಬಾರದು ಎಂದು ಒತ್ತಾಯ ಮಾಡಿ, ಅವರ ಮನಸಿನ ಮಾತನ್ನ ಅವರ ಒಳಗೆಯೇ ಹೂತು ಹಾಕಿ ಬಿಡುತ್ತೇವೆ.
ಈ ಕೋಪಗಳು, ಈ ಅಸೂಯೆಗಳು, ಸಾವಿರಾರು ಗಾಯಗಳು ಅವರ ಒಳಗೆಯೇ ಸಂಗ್ರಹಿತವಾಗುತ್ತ ಹೋಗುತ್ತವೆ. ಆದರೆ ನಾವು ಹೀಗೆ ಮಾಡದೇ ಅವರಿಗೆ ಕೋಪ, ಅಸೂಯೆ ಹೊರ ಹಾಕಲು ಅವಕಾಶ ಮಾಡಿಕೊಟ್ಟರೆ, ಅವರ ಕೋಪಕ್ಕೊಂದು ಹೊರದಾರಿ ಮಾಡಿಕೊಟ್ಟರೆ, ಜಗಳ ಏನೋ ಭೀಕರವಾದರೂ ನಂತರ ಅವರ ನಡುವೆ ಆಳವಾದ ಪ್ರೀತಿ ಮತ್ತು ಅಂತಃಕರಣ ಹುಟ್ಟಿಕೊಳ್ಳುತ್ತದೆ. ಮತ್ತು ಈ ಭಾವ ನೈಜವಾಗಿರುತ್ತದೆ.
ಒಂದು ದಿನ ನಸ್ರುದ್ದೀನ್ ಆರೋಗ್ಯ ಇಲಾಖೆಗೆ ಹೋಗಿ ತನ್ನ ಅಣ್ಣ ತಮ್ಮಂದಿರ ವಿರುದ್ಧ ದೂರು ಸಲ್ಲಿಸಿದ.
“ ನಾವು ಆರು ಜನ ಅಣ್ಣ ತಮ್ಮಂದಿರು ಇರೋದು ಒಂದೇ ಕೋಣೆಯ ಮನೆಯಲ್ಲಿ. ಈ ಒಂದು ಕೋಣೆಯ ಮನೆಯಲ್ಲಿ ನನ್ನ ಅಣ್ಣ ತಮ್ಮಂದಿರೆಲ್ಲ ಪ್ರಾಣಿಗಳನ್ನ ಸಾಕಿದ್ದಾರೆ. ಕೋತಿ, ನಾಯಿ, ಕುರಿ, ಕೋಳಿಗಳಿಂದ ನಮ್ಮ ಕೋಣೆ ತುಂಬಿ ಹೋಗಿದೆ. ಮನೆಯಲ್ಲಿ ಗಾಳಿಯಾಡಲು ಜಾಗವೇ ಇಲ್ಲ , ನೀವು ನನ್ನ ಅಣ್ಣ ತಮ್ಮಂದಿರ ಮೇಲೆ ಏನಾದರೂ ಕ್ರಮ ತೆಗೆದುಕೊಂಡು ಕೋಣೆಯಲ್ಲಿ ಗಾಳಿಯಾಡುವಂತೆ ಮಾಡಬೇಕು, ಇಲ್ಲವಾದರೆ ನಾನು ಸತ್ತೇ ಹೋಗುತ್ತೇನೆ. “
“ ನಿಮ್ಮ ಮನೆಯಲ್ಲಿ ಕಿಟಕಿ ಇಲ್ಲವೆ? ಆರೋಗ್ಯ ಇಲಾಖೆಯ ಅಧಿಕಾರಿ ಪ್ರಶ್ನೆ ಮಾಡಿದ.
“ ಕಿಟಕಿ ಇದೆ “ ನಸ್ರುದ್ದೀನ್ ಉತ್ತರಿಸಿದ.
“ ಹಾಗಾದರೆ ಯಾಕೆ ನೀನು ಕಿಟಕಿ ಓಪನ್ ಮಾಡಿ ಕೋಣೆಯಲ್ಲಿ ಗಾಳಿಯಾಡಲು ಅವಕಾಶ ಮಾಡಿಕೊಡಬಾರದು ? “
ಅಧಿಕಾರಿ ಮತ್ತೆ ಪ್ರಶ್ನೆ ಮಾಡಿದ.
“ ಏನು? ಕಿಟಕಿ ಓಪನ್ ಮಾಡೋದಾ? ನನ್ನ ಪಾರಿವಾಳಗಳೆಲ್ಲ ಹಾರಿ ಹೋಗುವುದಿಲ್ಲವೆ? “
ನಸ್ರುದ್ದೀನ್ ಗಾಬರಿಯಾದ.

