~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮಕ್ಕೆ ತನ್ನ ಖ್ಯಾತಿಯ ಬಗ್ಗೆ
ಅಂಥ ಕಾಳಜಿ ಏನಿಲ್ಲ,
ಬರುವಾಗ ಹರಿತ ಚೂರಿಯೊಂದಿಗೆ
ಬರುತ್ತದೆಯೇ ಹೊರತು
ಸಂಕೋಚದ ಪ್ರಶ್ನೆಗಳ ಜೊತೆಗಲ್ಲ.
ಈ ಮಾತುಗಳನ್ನ ಹೇಳಿ
ನಿಮ್ಮನ್ನು ಬೆಚ್ಚಿ ಬೀಳಿಸಬೇಕು ಎನ್ನುವ
ಯಾವ ಆಸಕ್ತಿಯೂ ನನಗಿಲ್ಲ,
ದಯವಿಟ್ಟು ಅಂತಃಕರಣದಿಂದ
ಒಪ್ಪಿಸಿಕೊಳ್ಳಿ.
ಬೆತ್ತಲಾಗಿ, ವಿಷ ಕುಡಿದು,
ಈಗ ತಣ್ಣಗೆ ಸರ್ವನಾಶಕ್ಕೆ ಸಿದ್ಧವಾಗಿ,
ತನ್ನ ಹುಚ್ಚು ಯೋಜನೆಗಳನ್ನು
ಕಾರ್ಯರೂಪಕ್ಕೆ ತರಲು
ಎಲ್ಲ ತಂತ್ರಗಳನ್ನೂ ಬಳಸುತ್ತಿದೆ
ಚಾಣಾಕ್ಷ ಉನ್ಮಾದಿ ಪ್ರೇಮ.
ಪುಟ್ಟ ಜೇಡ
ಭಯಂಕರ ಚೇಳನ್ನು ಕಟ್ಟಿ ಹಾಕುತ್ತದೆ.
ಪ್ರವಾದಿ ಮಲಗಿದ ಗುಹೆಯ ಸುತ್ತ ಹೆಣೆಯಲಾದ
ಜೇಡರ ಬಲೆಯನ್ನು ನೆನಪಿಸಿಕೊಳ್ಳಿ.
ಪ್ರೇಮದಲ್ಲಿ ಹೇಗೆ
ಮುದ ನೀಡುವ ಕಥೆಗಳಿವೆಯೋ
ಹಾಗೆಯೇ ಗುರುತು ಕೂಡ ಇರದಂತೆ
ಒರೆಸಿ ಹಾಕುವ ಅನಾಹುತಗಳೂ ಉಂಟು.
ಒದ್ದೆಯಾಗಬಾರದೆಂದು
ಧರಿಸಿದ ಅರಿವೆಗಳನ್ನು
ಮೊಣ ಕಾಲವರೆಗೆ ಎತ್ತಿಕೊಂಡು
ಸಮುದ್ರದ ತೀರದಲ್ಲಿ ಪ್ರಯಾಣ ಮಾಡುತ್ತಿದ್ದೀರಿ.
ಆಳಕ್ಕೆ ಧುಮುಕಬೇಕು ನೀವು
ಸಾವಿರ ಪಟ್ಟು ಆಳಕ್ಕೆ.
~ ರೂಮಿ
ತಂಗಾಳಿ, ಹೇಗೆ ಬರುತ್ತದೆಯೋ ಹಾಗೆಯೇ ಹೋಗಿಬಿಡುತ್ತದೆ ; ಇದನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಿಲ್ಲ, ಇದಕ್ಕೆ ಅಂಟಿಕೊಳ್ಳುವುದು ಸಾಧ್ಯವಿಲ್ಲ. ತಂಗಾಳಿ, ಪಿಸುಮಾತಿನಂತೆ ಆಗಮಿಸುತ್ತದೆ, ಸದ್ದು ಮಾಡುವುದಿಲ್ಲ, ಘೋಷಣೆಗಳನ್ನು ಕೂಗುವುದಿಲ್ಲ; ಅದು ಸೈಲೆಂಟಾಗಿ ಪ್ರವೇಶ ಮಾಡುತ್ತದೆ, ಅದನ್ನು ಕೇಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ – ಅದು ಥಟ್ಟನೇ ಪ್ರತ್ಯಕ್ಷವಾಗುತ್ತದೆ. ಮತ್ತು ದೇವರು – ಸತ್ಯ – ಆನಂದ – ಮತ್ತು ಪ್ರೇಮ ಕಾಣಿಸಿಕೊಳ್ಳುವುದೂ ಹೀಗೆಯೇ. ಈ ಎಲ್ಲವೂ ಪಿಸುಮಾತಿನ ಮಾದರಿಯಲ್ಲಿ ಆಗಮಿಸುತ್ತವೆ, ಕಹಳೆ, ನಗಾರಿ, ತುತ್ತೂರಿಗಳ ಜೊತೆಯಲ್ಲಿ ಅಲ್ಲ. ಇವು ಯಾವ ಒಪ್ಪಿಗೆಗಾಗಿಯೂ ಕಾಯದೇ ಯಾವ ಅಪೊಯಿಂಟಮೆಂಟ್ ಇಲ್ಲದೇ ಥಟ್ಟನೇ ಬರುತ್ತವೆ. ಮತ್ತು ಹೀಗೆಯೇ ತಂಗಾಳಿಯ ಆಗಮನವಾಗುತ್ತದೆ ; ಒಂದು ಕ್ಷಣದಲ್ಲಿ ಇದ್ದದ್ದು ಇನ್ನೊಂದು ಕ್ಷಣದಲ್ಲಿ ಮಾಯವಾಗಿಬಿಟ್ಟಿರುತ್ತದೆ.
ಎರಡನೇಯ ವಿಷಯವೆಂದರೆ : ಹೇಗೆ ಬರುತ್ತದೆಯೋ ಹಾಗೆಯೇ ಹೋಗಿಬಿಡುತ್ತದೆ ; ಇದನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಿಲ್ಲ, ಇದಕ್ಕೆ ಅಂಟಿಕೊಳ್ಳುವುದು ಸಾಧ್ಯವಿಲ್ಲ. ಇದು ಇರುವಾಗ ಆನಂದಿಸಿ, ಮತ್ತು ಹೊರಟು ನಿಂತಾಗ, ಹೋಗಲು ಅವಕಾಶ ಮಾಡಿಕೊಡಿ. ಅದು ಆಗಮಿಸಿದ್ದರ ಕುರಿತು ಕೃತಜ್ಞರಾಗಿರಿ. ಅದು ಹೊರಟು ನಿಂತಾಗ ಯಾವ ಸೇಡೂ ಇಟ್ಟುಕೊಳ್ಳಬೇಡಿ, ಯಾವ ತಕರಾರೂ ಮಾಡಬೇಡಿ. ಅದು ಹೋಗಬೇಕಾದಾಗ ಹೋಗೇ ಹೋಗುತ್ತದೆ, ಏನೂ ಮಾಡಲಿಕ್ಕಾಗುವುದಿಲ್ಲ.
ಆದರೆ ನಾವು ಅಂಟು ಜೀವಿಗಳು. ಯಾವಾಗ ಪ್ರೇಮದ ಅವತಾರವಾಗುತ್ತದೆಯೋ ಆಗ ನಮಗೆಲ್ಲ ಖುಶಿ, ಆದರೆ ಅದು ಹೊರಟು ನಿಂತಾಗ ನಮಗೆ ನೋವಾಗುತ್ತದೆ. ನಾವು ಹೀಗೆ ವರ್ತಿಸುವುದು, ಅಪ್ರಜ್ಞೆಯ, ಕೃತಘ್ನತೆಯ ಮತ್ತು ತಿಳುವಳಿಕೆಗೇಡಿತನದ ಪ್ರತೀಕ. ನೆನಪಿರಲಿ, ಅದು ಬಂದ ದಾರಿಯಲ್ಲಿಯೇ ವಾಪಸ್ಸಾಗುತ್ತಿದೆ. ಬರುವಾಗ ಅದು ನಿಮ್ಮ ಒಪ್ಪಿಗೆ ಕೇಳಲಿಲ್ಲ ಆದ್ದರಿಂದ ಹೋಗುವಾಗ ನಿಮ್ಮ ಅನುಮತಿಯ ಅವಶ್ಯಕತೆ ಯಾಕೆ ಅದಕ್ಕೆ?
ಅದು ನಮಗೆ ಅತೀತ, ರಹಸ್ಯ, ಕೊಡಮಾಡಿದ ಬಳುವಳಿ, ಮತ್ತು ಅದರ ನಿರ್ಗಮನ ಅದೇ ರಹಸ್ಯಮಯ ಮಾದರಿಯಲ್ಲಿ. ನಾವು ಬದುಕನ್ನು ತಂಗಾಳಿಯಂತೆ ಎಂದುಕೊಂಡಾಗ, ಅಲ್ಲಿ ಯಾವ ಹಿಡಿದಿಟ್ಟುಕೊಳ್ಳುವಿಕೆ, ಯಾವ ಅಂಟಿಕೊಳ್ಳುವಿಕೆ, ಯಾವ ಗೀಳು ಇಲ್ಲ – ನಾವು ಅದರ ಅನುಭವಕ್ಕೆ ಲಭ್ಯವಿರಬೇಕು ಮಾತ್ರ, ಮತ್ತು ಮುಂದೆ ಏನಾಗುತ್ತದೆ ಅದು ಒಳ್ಳೆಯದಕ್ಕಾಗಿ.

