ಅಪ್ರಜ್ಞೆ, ಪ್ರಜ್ಞೆಗಿಂತ ಹತ್ತು ಪಟ್ಟು ಅಪಾರವಾದದ್ದು, ಆದ್ದರಿಂದಲೇ ಅಪ್ರಜ್ಞೆಯಿಂದ ಹೊರಹೊಮ್ಮುವ ಎಲ್ಲವೂ overwhelming ಆಗಿರುತ್ತವೆ. ಆದ್ದರಿಂದಲೇ ಜನರಿಗೆ ತಮ್ಮ ಫೀಲಿಂಗ್ ಗಳ ಬಗ್ಗೆ, ಎಮೋಷನ್ ಗಳ ಬಗ್ಗೆ ಭಯ. ಆದ್ದರಿಂದಲೇ ಎಲ್ಲಿ ತಮ್ಮ ಭಾವನೆಗಳು ಅಸ್ತವ್ಯಸ್ತತೆಯನ್ನು ಹುಟ್ಟುಹಾಕುತ್ತವೋ ಎಂದು ಅವರು ತಮ್ಮ ಭಾವನೆಗಳನ್ನ ಹಿಡಿದಿಟ್ಟುಕೊಳ್ಳುತ್ತಾರೆ. ಹೌದು ಖಂಡಿತ ಹಾಗಾಗುತ್ತದೆ ಆದರೆ, chaos ಬಹಳ ಸುಂದರವಾದದ್ದು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಖಂಡಿತ ವ್ಯವಸ್ಥೆ ( order ) ಬೇಕು ಹಾಗೆಯೇ ಅವ್ಯವಸ್ಥೆಯೂ ( chaos) ಬೇಕು. ಯಾವಾಗ ವ್ಯವಸ್ಥೆಯ ಅವಶ್ಯಕತೆ ಇದೆಯೋ ಆಗ ವ್ಯವಸ್ಥೆಯನ್ನು ಬಳಸಿ, ಪ್ರಜ್ಞಾಪೂರ್ಣ ಮೈಂಡ್ ನ ಬಳಸಿ ; ಯಾವಾಗ ಅವ್ಯವಸ್ಥೆಯ ಅವಶ್ಯಕತೆ ಇದೆಯೋ ಆಗ ಅವ್ಯವಸ್ಥೆಯನ್ನು ಬಳಸಿ, ಅಪ್ರಜ್ಞೆಯನ್ನ ಬಳಸಿ. ಯಾರು ವ್ಯವಸ್ಥೆ ಮತ್ತು ಅವ್ಯವಸ್ಥೆ ಎರಡನ್ನೂ ಯಶಸ್ವಿಯಾಗಿ ಬಳಕೆ ಮಾಡಬಲ್ಲರೋ ಅವರು ಇಡಿಯಾದ (whole) ಮನುಷ್ಯರು, ಪೂರ್ಣ ( total) ಮನುಷ್ಯರು. ಅವರು ಪ್ರಜ್ಞೆಗೆ ಅಪ್ರಜ್ಞೆಯೊಂದಿಗೆ ಮತ್ತು ಅಪ್ರಜ್ಞೆಗೆ ಪ್ರಜ್ಞೆಯೊಂದಿಗೆ ಹಸ್ತಕ್ಷೇಪ ಮಾಡಲು ಬಿಡುವುದಿಲ್ಲ. ಕೆಲ ಸಂಗತಿಗಳನ್ನು ಕೇವಲ ಪ್ರಜ್ಞೆಯೊಂದಿಗೆ ಮಾಡಲು ಸಾಧ್ಯ. ಉದಾಹರಣೆಗೆ, ನೀವೇನಾದರೂ ವೈಜ್ಞಾನಿಕ ಅಥವಾ ಗಣಿತದ ಕೆಲಸ ಮಾಡುತ್ತಿರುವಿರಾದರೆ, ಇದು ಪ್ರಜ್ಞೆಯಿಂದ ಮಾತ್ರ ಸಾಧ್ಯ. ಆದರೆ ಪ್ರೇಮ ಹಾಗಲ್ಲ, ಕಾವ್ಯ ಹಾಗಲ್ಲ ; ಅವು ಅಪ್ರಜ್ಞೆಯಿಂದ ಹೊರಹೊಮ್ಮುವಂಥವು. ಆಗ ನೀವು ಪ್ರಜ್ಞೆಯನ್ನು ಪಕ್ಕಕ್ಕೆ ಇಡಲೇ ಬೇಕಾಗುತ್ತದೆ.
ಬಹುತೇಕ ಪ್ರಜ್ಞೆಯೇ ಎಲ್ಲವನ್ನೂ ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳಲು ಬಯಸುತ್ತದೆ ಏಕೆಂದರೆ ಅದಕ್ಕೆ ಭಯ. ಏನೋ ಒಂದು ದೊಡ್ಡ ಸವಾಲು ಎದುರಾಗಬಹುದು ಎಂದು ಅದಕ್ಕೆ ಅನಿಸುತ್ತಿರುತ್ತದೆ, ಬಹುಶಃ ಅಪ್ಪಳಿಸುತ್ತಿರುವಂತೆ ಅನಿಸುತ್ತಿದೆ ಯಾವುದೋ ಒಂದು ದೊಡ್ಡ ಸಮುದ್ರದ ತೆರೆ ; ಅದನ್ನು ತಡೆದುಕೊಳ್ಳುವ ಸಾಮರ್ಥ್ಯ ಅದಕ್ಕೆ ಇದೆಯಾ? ಗೊತ್ತಿಲ್ಲ, ಅದನ್ನು ಅವೊಯಿಡ್ ಮಾಡಲು, ಅದರಿಂದ ತಪ್ಪಿಸಿಕೊಳ್ಳಲು, ಎಲ್ಲೋ ಅಡಗಿಕೊಳ್ಳಲು ಅದು ಪ್ರಯತ್ನ ಮಾಡುತ್ತದೆ. ಆದರೆ ಇದು ಸರಿಯಲ್ಲ. ಆದ್ದರಿಂದಲೇ ಜನ ಡಲ್ ಆಗಿದ್ದಾರೆ, ತಮ್ಮ ಜೀವಂತಿಕೆಯನ್ನು ಕಳೆದುಕೊಂಡಿದ್ದಾರೆ. ಬದುಕಿನ ಎಲ್ಲ ಚಿಲುಮೆಗಳು ( springs) ಅಪ್ರಜ್ಞೆಯಲ್ಲೇ ಹುದುಗಿಕೊಂಡಿವೆ.
ಮಾಸ್ಟರ್ ಹೈಕೂಯಿನ್ ತನ್ನ ಬಹು ದಿನಗಳ ಪ್ರಯಾಣದ ನಂತರ ಆಶ್ರಮಕ್ಕೆ ಹಿಂತಿರುಗಿದ. ಅವನು ಆಶ್ರಮ ಪ್ರವೇಶಿಸಿದಾಗ ಅದು ಸಂಜೆಯ ಧ್ಯಾನದ ಸಮಯವಾಗಿತ್ತು. ಆಶ್ರಮದ ಎಲ್ಲ ಮಾಸ್ಟರ್ ಗಳು, ಸನ್ಯಾಸಿಗಳೂ ತೀವ್ರ ಝಾಝೆನ್ ಧ್ಯಾನದಲ್ಲಿ ಮಗ್ನರಾಗಿದ್ದರು. ಯಾರಿಗೂ ಹೈಕೂಯಿನ್ ಬಂದಿರುವ ವಿಷಯ ಗೊತ್ತೇ ಆಗಲಿಲ್ಲ.
ಆದರೆ ಆಶ್ರಮದೊಳಗೆ ಹೈಕೂಯಿನ್ ಕಾಲಿಡುತ್ತಿದ್ದಂತೆಯೇ ಆಶ್ರಮದ ನಾಯಿಗಳು ಬೊಗಳುತ್ತ ಮಾಸ್ಟರ್ ಸುತ್ತ ಓಡಾಡುತ್ತ ಗದ್ದಲ ಹಾಕತೊಡಗಿದವು, ಬೆಕ್ಕುಗಳು ಮಾಸ್ಟರ್ ನ ಕಾಲು ನೆಕ್ಕುತ್ತ ಚೀರತೊಡಗಿದವು, ಕೋಳಿಗಳು ಸದ್ದು ಮಾಡುತ್ತ ಓಡಾಡತೊಡಗಿದವು, ಮೊಲಗಳು ಆ ಕಡೆಯಿಂದ ಈ ಕಡೆ ಸುಮ್ಮನೇ ಜಿಗಿದಾಡತೊಡಗಿದವು. ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು.
ಮಾಸ್ಟರ್ ಹೈಕೂಯಿನ್, ಧ್ಯಾನಸ್ಥರಾಗಿದ್ದ ತನ್ನ ಶಿಷ್ಯರನ್ನೂ, ಗದ್ದಲ ಹಾಕುತ್ತಿದ್ದ ಈ ಪ್ರಾಣಿಗಳನ್ನು ಒಮ್ಮೆ ಗಮನಿಸಿ ಮಾತನಾಡಿದ,
“ ಪ್ರೀತಿಯ ಒಂದೇ ಒಂದು ಆಕ್ರಂದನ ಸಾವಿರ ವರ್ಷ ಕುಳಿತು ಧ್ಯಾನ ಮಾಡುವುದಕ್ಕಿಂತ ಮಹತ್ತರವಾದದ್ದು.

