ನಿಮ್ಮ ಬದುಕಿನಲ್ಲಿ ಯಾವುದಾದರೂ ಮಹತ್ವದ ತಿರುವು (breakthrough) ಸಂಭವಿಸಿದಾಗ, ಅದನ್ನು ಮತ್ತೆ ಮತ್ತೆ ಬದುಕಲು ಪ್ರಯತ್ನ ಮಾಡಿ. ಸುಮ್ಮನೇ ಸಮಾಧಾನದಲ್ಲಿ ಅದನ್ನು ನೆನಪು ಮಾಡಿಕೊಳ್ಳಿ ; ನೆನಪು ಅಷ್ಟೇ ಅಲ್ಲ ಅದನ್ನು ಮತ್ತೆ ಬದುಕಿ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಆ ಮಹತ್ವದ ತಿರುವು ಸಂಭವಿಸಿದಾಗ ನಿಮ್ಮೊಳಗೆ ಯಾವ ಭಾವಗಳು ಹುಟ್ಚಿಕೊಂಡವೋ, ಆ ಭಾವನೆಗಳನ್ನೇ ಮತ್ತೆ ಮತ್ತೆ ಫೀಲ್ ಮಾಡಿಕೊಳ್ಳಿ. ಆ ಕಂಪನ ಗಳೇ ನಿಮ್ಮನ್ನು ಸುತ್ತುವರೆಯಲಿ. ನೀವು ಅದೇ ಜಾಗಕ್ಕೆ ಹೋಗಿ, ಅದೇ ಅನುಭವ ನಿಮಗೆ ಸಹಜ ಅನಿಸುಷ್ಟು ಬಾರಿ ಆ ಮಹತ್ವದ ತಿರುವನ್ನು ಬದುಕಿ. ಯಾವ ಕ್ಷಣದಲ್ಲಾದರೂ ಆ ಮಹತ್ವದ ತಿರುವನ್ನ ಪುನರ್ಸೃಷ್ಟಿ ಮಾಡಿಕೊಳ್ಳುವಷ್ಟು ಸಾಮರ್ಥ್ಯ ನಿಮ್ಮದಾಗಲಿ.
ಆಗ ಎಷ್ಟೋ ಒಳನೋಟಗಳು ದೊರಕಬಹುದು ಆದರೆ ನೀವು ಅವುಗಳನ್ನ ಮತ್ತೆ ಮತ್ತೆ ಹಿಂಬಾಲಿಸಬೇಕು. ಇಲ್ಲವಾದರೆ ಅವು ಕೇವಲ ನೆನಪುಗಳಾಗಿ ಉಳಿದುಬಿಡುತ್ತವೆ. ಮತ್ತು ನೀವು ಅವುಗಳ ಸಂಪರ್ಕ ಕಳೆದುಕೊಂಡುಬಿಟ್ಟರೆ, ಆ ಜಗತ್ತನ್ನು ಮತ್ತೆ ಪ್ರವೇಶಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಹೀಗಾದಾಗ ಮುಂದೆ ನೀವೇ ಅವುಗಳಲ್ಲಿ ನಂಬಿಕೆ ಕಳೆದುಕೊಂಡು ಬಿಡುತ್ತೀರ. ಆಗ ಅವು ನಿಮಗೆ ಯಾವುದೋ ಕನಸು, ಯಾವುದೋ ಸಮ್ಮೋಹಿನಿ, ಯಾವುದೋ ತಂತ್ರ ಅನಿಸಿಬಿಡಬಹುದು. ಹೀಗೆಯೇ ಮಾನವ ಜನಾಂಗ ಎಷ್ಟೋ ಅದ್ಭುತ ಅನುಭವಗಳನ್ನ ಕಳೆದುಕೊಂಡುಬಿಟ್ಟಿದೆ.
ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಒಮ್ಮೆಯಾದರೂ ಅದ್ಭುತ ಜಾಗಗಳನ್ನು ಮುಟ್ಟೇ ಮುಟ್ಟಿರುತ್ತಾರೆ. ಆದರೆ ಅವರು ಆ ಜಾಗೆಗಳಿಗೆ ದಾರಿಯನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗಿ, ತಮಗೆ ಊಟ,ನಿದ್ರೆಯಷ್ಟೇ ಸಹಜವಾಗಿ ಬಿಡಬಹುದಾಗಿದ್ದ, ಕಣ್ಣು ಮುಚ್ಚಿದರೆ ಸಾಕು ಆ ಜಾಗಗಳನ್ನು ತಲುಪಿಬಿಡಬಹುದಾದ ಅವಕಾಶಗಳಿಂದ ವಂಚಿತರಾಗಿ ಬಿಡುತ್ತಾರೆ.
ಒಮ್ಮೆ ಶಿಷ್ಯ , ಒಂದು ಮೆಥೊಡಿಸ್ಟ್ ಚರ್ಚ ದಾಟಿ ಮನೆಗೆ ವಾಪಸ್ಸಾಗುತ್ತಿದ್ದಾಗ, ಚರ್ಚ್ ನ ಅಂಗಳದಲ್ಲಿ ಝೆನ್ ಮಾಸ್ಟರ್ ಚಿತ್ರಕ್ಕೆ ಬಣ್ಣ ತುಂಬುತ್ತಾ ಕುಳಿತದ್ದನ್ನು ಕಂಡ. ಹತ್ತಿರ ಹೋಗಿ ನೋಡಿ ಆಶ್ಚರ್ಯಚಕಿತನಾದ. ಮಾಸ್ಟರ್, ಚರ್ಚ ನ ಚಿತ್ರ ಬಿಡಿಸುತ್ತಿರಲಿಲ್ಲ, ಬದಲಾಗಿ ಚೀನಾ ದೇಶದ ಪ್ರಕೃತಿ ಚಿತ್ರ ಬಿಡಿಸುತ್ತಿದ್ದ.
ಅಲ್ಲಿ ದೊಡ್ಡ ಪರ್ವತ ಶ್ರೇಣಿ, ನದಿ, ಸುಂದರ ಜಲಪಾತ ಮತ್ತು
ತನ್ನ ಪುಟ್ಟ ಗುಡಿಸಲಿನ ಮುಂದೆ ಕಸ ಗುಡಿಸುತ್ತಿದ್ದ ಗೂನು ಬೆನ್ನಿನ ಹಸನ್ಮುಖಿ ಮುದುಕ.
ಶಿಷ್ಯ : ಏನು ಚಿತ್ರ ಇದು ಮಾಸ್ಚರ್ ?
ಮಾಸ್ಟರ್ : ಕೆಲವು ಕ್ಷಣಗಳ ಹಿಂದೆಯಷ್ಟೆ ಈ ಮುದುಕನಿಗೆ ಜ್ಞಾನೋದಯವಾಗಿದೆ.
ಶಿಷ್ಯ : ಮುಂದೆ ಏನು ಮಾಡುತ್ತಾನೆ ಮುದುಕ?
ಮಾಸ್ಟರ್ : ಅದನ್ನೆ ನೋಡುತ್ತಿದ್ದೆ, ಕಸ ಗುಡಿಸುವುದನ್ನು ಮುಂದುವರೆಸಿದ್ದಾನೆ.

