ನಾವು ಸೀಮಿತ (limited ) ಎಂದುಕೊಂಡರೆ, ನಾವು ಸೀಮಿತ ರೀತಿಯಲ್ಲಿಯೇ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತೇವೆ. ಒಮ್ಮೆ ನಾವು ಈ ಮೂರ್ಖ ನಂಬಿಕೆಯನ್ನು ತೃಜಿಸಿಬಿಟ್ಟರೆ, ನಮ್ಮ ಕ್ರಿಯೆಗಳೆಲ್ಲವೂ ಅನಿಯಮಿತ ( unlimited) ಗೊಳ್ಳುತ್ತವೆ ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
ಹಕ್ಕಿಗಳ ಅತ್ಯಂತ ಇಷ್ಟದ ಹಾಡುಗಳನ್ನ
ನೀವು ಯಾವತ್ತೂ ಕೇಳಿರಲಾರಿರಿ.
ಹಕ್ಕಿಗಳ ಎದೆಯಾಳದ ಹಾಡು
ಕೇವಲ ಅಕಾಶದಲ್ಲಿ ನಿರಾಳವಾಗಿ ರೆಕ್ಕೆ ಬಿಚ್ಚಿದಾಗ,
ಬಿಡುಗಡೆಯ ಆಫೀಮು
ಒಳಕ್ಕಿಳಿದಾಗ ಮಾತ್ರ.
ಕೈದಿಗಳಿಗಂತೂ ಇರಲೇಬೇಕು
ಈ ಒಂದು ನಂಬಿಕೆ;
ಒಂದಿಲ್ಲೊಂದು ದಿನ ನಾವೂ
ನಮ್ಮ ಇಷ್ಟದ ಜಾಗ ತಲುಪುತ್ತೇವೆ,
ಬದುಕಿನ ನಿಯಮಾತೀತ
ಅದ್ಭುತ ಹತೋಟಿಗೆ ಎದುರಾಗುತ್ತೇವೆ,
ಎಲ್ಲ ಗಾಯ, ಬಾಕಿಗಳಿಂದ
ಮುಕ್ತರಾಗುತ್ತೇವೆ.
ಒಮ್ಮೆ ಹಕ್ಕಿಯನ್ನು ನಿಲ್ಲಿಸಿ ಮಾತನಾಡಿಸಿದೆ.
ಈ ಕತ್ತಲ ಗುರುತ್ವದಿಂದ ಪಾರಾಗಿ
ಹೇಗೆ ಹಾರುತ್ತೀ ನೀನು ?
ಹಕ್ಕಿ ನಕ್ಕು ಹೇಳಿತು ;
ಪ್ರೇಮ, ನನ್ನ ಎತ್ತರಕ್ಕೇರಿಸುತ್ತದೆ .
-ಹಾಫಿಜ್
ನಿಮ್ಮ ಸಾಧ್ಯತೆಯ ವೃತ್ತವನ್ನು ನೀವೇ ಬರೆದುಕೊಳ್ಳುತ್ತೀರಿ. ಇದು ಜಿಪ್ಸಿಗಳೊಂದಿಗೆ ( ಅಲೆಮಾರಿ ) ಆಗುತ್ತದೆ. ಜಿಪ್ಸಿಗಳು ಅಲೆಮಾರಿ ಜನಾಂಗ, ಅವರು ಒಂದು ಜಾಗೆಯಿಂದ ಇನ್ನೊಂದು ಜಾಗೆಗೆ ನಿರಂತರವಾಗಿ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಊರ ಹೊರಗೆ ಬಿಡಾರ ಬಿಡುವ ಈ ಜನರಲ್ಲಿ, ಹಿರಿಯರು ಊರೊಳಗೆ ಹೋಗುವಾಗ, ತಮ್ಮ ಮಕ್ಕಳ ಸುತ್ತ ವೃತ್ತಗಳನ್ನು ಎಳೆದು ಆ ವೃತ್ತದಿಂದ ಹೊರಬರದಂತೆ ಅವರಿಗೆ ತಾಕೀತು ಮಾಡುತ್ತಾರೆ. ಇದು ಮ್ಯಾಜಿಕಲ್ ಸರ್ಕಲ್ ಎಂದೂ, ಅದರ ಹೊರಗೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿಯೆಂದೂ ಅವರಿಗೆ ಹೆದರಿಕೆ ಹಾಕುತ್ತಾರೆ. ಇಷ್ಟೆಲ್ಲ ಹಿರಿಯರು ಹೇಳಿದ ಮೇಲೆ ಜಿಪ್ಸಿ ಮಕ್ಕಳು ಆ ವೃತ್ತದಿಂದ ಹೊರಬರುವುದು ಅಸಾಧ್ಯ. ಆ ಮಗುವಿಗೆ ಮುಂದೆ ವಯಸ್ಸಾದರೂ, ಅದು ತಂದೆ ಹಾಕಿದ ವೃತ್ತವನ್ನು ದಾಟುವುದಿಲ್ಲ. ಯಾವಾಗ ಇದು ನಂಬಿಕೆಯ ಭಾಗವಾಗಿಬಿಡುತ್ತದೆಯೋ ಆಗ ಇದನ್ನು ದಾಟುವುದು ಯಾರಿಗೂ ಸಾಧ್ಯವಾಗುವುದಿಲ್ಲ.
ಆದರೆ ನಿಮ್ಮ ಜೊತೆ ಹೀಗಾಗುವುದಿಲ್ಲ ಎಂದು ನೀವು ತಿಳಿದುಕೊಂಡಿರುತ್ತೀರಿ. ಯಾರಾದರೂ ನಿಮ್ಮ ಸುತ್ತ ವೃತ್ತ ಬರೆದರೆ ನೀವು ಸುಲಭವಾಗಿ ಅದನ್ನು ದಾಟುತ್ತೀರಿ ಎಂದು ತಿಳಿದುಕೊಂಡಿರುತ್ತೀರಿ. ಆದರೆ ಬಾಲ್ಯದಿಂದಲೂ ಈ ಜಿಪ್ಸಿ ಹುಡುಗ ಕಂಡಿಷನ್ ಗೆ ಒಳಪಟ್ಟಿದ್ದಾನೆ. ಅವನು ಈ ನಂಬಿಕೆಯ ವೃತ್ತದಿಂದ ಹೊರಬರುವುದು ಅಸಾಧ್ಯ. ಯಾವುದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆಯೋ ಅದು ವಾಸ್ತವ. ವಾಸ್ತವಕ್ಕೆ ಇದನ್ನು ಬಿಟ್ಟು ಬೇರೆ ಮಾನದಂಡಗಳಿಲ್ಲ.
ಆದ್ದರಿಂದ ಸೀಮಿತತೆ ಎನ್ನುವುದು ಒಂದು ಪರಿಕಲ್ಪನೆ. ಜನರಿಗೆ ತಪ್ಪು ನಂಬಿಕೆಗಳಿರುವುದರಿಂದ ಅವರು ತಪ್ಪು ಕೆಲಸ ಮಾಡುತ್ತಾರೆ. ಯಾಕೆ ಕೆಲಸ ತಪ್ಪಾಯಿತು ಎಂದು ಕಾರಣವನ್ನು ಹುಡುಕಿದಾಗ ಅವರಿಗೆ ಅವರ ನಂಬಿಕೆಯೇ ಕಾರಣ ಎನ್ನುವುದು ಗೊತ್ತಾಗುತ್ತದೆ. ಆಗ ಅವರು ಮತ್ತಷ್ಟು ಲಿಮಿಟೇಶನ್ ಗೆ ಒಳಗಾಗುತ್ತಾರೆ. ಈ ಐಡಿಯಾವನ್ನೇ ಸಂಪೂರ್ಣವಾಗಿ ತ್ಯಜಿಸಿಬಿಡಿ. ಇದು ನೀವೇ ಅಥವಾ ಇನ್ನೊಬ್ಬರು ನಿಮ್ಮ ಸುತ್ತ ಎಳೆದ ವೃತ್ತ ಅಷ್ಟೇ. ಇದು ನಿಮ್ಮ ಸಾಧನೆಗಳಿಗೆ ಯಾವತ್ತೂ ಮಾನದಂಡವಾಗಲಾರದು.
ಒಂದು ಆಶ್ರಮದಲ್ಲಿ, ಪ್ರತೀ ಸಂಜೆ ಅಧ್ಯಾತ್ಮಿಕ ಗುರುಗಳು ತಮ್ಮ ಶಿಷ್ಯರೊಂದಿಗೆ ಧ್ಯಾನಕ್ಕೆ ಕೂರುತ್ತಿದ್ದಂತೆಯೇ, ಅವರೇ ಸಾಕಿಕೊಂಡಿದ್ದ ಬೆಕ್ಕೊಂದು ತುಂಬಾ ಸದ್ದು ಮಾಡುತ್ತಾ, ಓಡಾಡುತ್ತ, ಧ್ಯಾನಕ್ಕೆ ಅಡಚಣಿ ಉಂಟು ಮಾಡುತ್ತಿತ್ತು.
ಇದರಿಂದ ಬೇಸತ್ತ ಗುರುಗಳು ಆ ಬೆಕ್ಕನ್ನು ಹೊರಗೆ ಕಂಬಕ್ಕೆ ಕಟ್ಟಿ ಹಾಕುವಂತೆ ಶಿಷ್ಯರಿಗೆ ಆಜ್ಞಾಪಿಸಿದರು.
ಆನಂತರ ಪ್ರತೀ ಸಂಜೆ ಧ್ಯಾನದ ಸಮಯಕ್ಕೆ ಸರಿಯಾಗಿ ಬೆಕ್ಕನ್ನು ಹೊರಗೆ ಕಂಬಕ್ಕೆ ಕಟ್ಟಿ ಹಾಕಲಾಗುತ್ತಿತ್ತು.
ಕೆಲ ವರ್ಷಗಳಾದ ಮೇಲೆ ಗುರುಗಳು ತೀರಿ ಹೋದರು. ಆದರೂ ಬೆಕ್ಕನ್ನು ಪ್ರತೀ ಸಂಜೆ ಕಟ್ಟಿ ಹಾಕುವ ಪರಿಪಾಠ ಮುಂದುವರೆಯಿತು.
ಕೊನೆಗೊಮ್ಮೆ ಬೆಕ್ಕೂ ತೀರಿಕೊಂಡಿತು. ಆಮೇಲಿಂದ ಶಿಷ್ಯರು ಇನ್ನೊಂದು ಬೆಕ್ಕನ್ನು ತಂದು ಪ್ರತೀ ಸಂಜೆ ಧ್ಯಾನದ ಸಮಯಕ್ಕೆ ಕಂಬಕ್ಕೆ ಕಟ್ಟಿ ಹಾಕತೊಡಗಿದರು.
ಕೆಲ ಶತಮಾನಗಳ ನಂತರ , ಆ ಆಶ್ರಮದ ಮುಂದಿನ ಪೀಳಿಗೆಯ ವಿದ್ವಾಂಸರು, ಧ್ಯಾನ ಮಾಡುವಾಗ ಬೆಕ್ಕನ್ನು ಕಂಬಕ್ಕೆ ಕಟ್ಟಿ ಹಾಕುವ ಸಂಪ್ರದಾಯದ ಧಾರ್ಮಿಕ ಮಹತ್ವದ ಬಗ್ಗೆ ಧರ್ಮಶಾಸ್ತ್ರಗಳನ್ನು ರಚಿಸಿದರು.

