ನಮ್ಮ ಮೊದಲ ಗೆಳೆತನ ಇರಬೇಕಾದದ್ದು ಸ್ವತಃ ನಮ್ಮ ಜೊತೆ. ಬಹಳ ಅಪರೂಪಕ್ಕೆ ಸ್ವತಃ ತಮ್ಮ ಜೊತೆ ಗೆಳೆತನ ಹೊಂದಿದವರನ್ನು ನೀವು ಕಾಣಬಹುದು. ನಾವೇ ನಮ್ಮ ಶತ್ರುಗಳು, ಪರಿಸ್ಥಿತಿ ಹೀಗಿರುವಾಗ ಬೇರೆಯವರ ಜೊತೆ ಗೆಳೆತನ ನಿರೀಕ್ಷಿಸುವದು ವ್ಯರ್ಥ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಗೆಳೆಯನ ಜೊತೆಗಿನ ಸಂಗಾತ
ಅತ್ಯಂತ ರಹಸ್ಯಮಯ ಮತ್ತು ನಾಜೂಕು.
ನಿನ್ನ ಪ್ರೇಮ ಹೇಗೋ
ಹಾಗೆಯೇ ಗೆಳೆತನದ ಚಿತ್ರ ಕೂಡ.
ಬೆಡಗು ಮತ್ತು ರುಚಿ,
ಕಾಲದ ಹಂಗಿಲ್ಲದೆ ನೆಲವನ್ನಪ್ಪಿ
ನಡೆಸುವ
ನವಿರಾದ ಆಪ್ತ ಸಂವಾದ.
ಆಗ ನೀನು
ನಿನ್ನ ಜೊತೆ ಇರುವವರ
ಉಗ್ರ ಸೌಜನ್ಯವನ್ನು ನೆನಪಿಸಿಕೋ
~ ರೂಮಿ
ನಮ್ಮನ್ನು ಖಂಡನೆ ಮಾಡಿಕೊಳ್ಳುವುದನ್ನ ನಮಗೆ ಮೊದಲಿನಿಂದಲೂ ಕಲಿಸಲಾಗಿದೆ. ಸ್ವ-ಪ್ರೇಮವನ್ನು ಪಾಪವೆಂದೇ ನಮ್ಮ ತಲೆಯಲ್ಲಿ ತುಂಬಲಾಗಿದೆ. ಆದರೆ ಇದು ತಪ್ಪು. ಸ್ವ-ಪ್ರೇಮ, ಬಾಕಿ ಎಲ್ಲ ಪ್ರೇಮಗಳ ಅಡಿಪಾಯ. ಸ್ವ-ಪ್ರೇಮದ ಮೂಲಕವೇ ಇನ್ನೊಬ್ಬರ ಜೊತೆಗಿನ ಪ್ರೇಮ ಸಾಧ್ಯ. ಸ್ವ-ಪ್ರೇಮವನ್ನು ಪಾಪವೆಂದು ಖಂಡಿಸಲಾಗಿರುವುದರಿಂದ, ಪ್ರೇಮದ ಬಾಕಿ ಎಲ್ಲ ಸಾಧ್ಯತೆಗಳು ಭೂಮಿಯಿಂದ ಕಣ್ಮರೆಯಾಗಿವೆ. ಪ್ರೇಮವನ್ನು ನಾಶಮಾಡಲು ಬಳಸಲಾಗಿರುವ ಅತ್ಯಂತ ಕಪಟಿ ತಂತ್ರ ಇದು. ಇದು ಹೇಗೆಂದರೆ, “ ಭೂಮಿಯ ಫಲವತ್ತತೆಯಿಂದ ನಿನ್ನನ್ನು ನೀನು ಪೋಷಿಸಿಕೊಳ್ಳಬೇಡ, ಇದು ಪಾಪ. ಸೂರ್ಯ, ಚಂದ್ರ, ನಕ್ಷತ್ರಗಳಿಂದ ನಿನ್ನನ್ನು ನೀನು ಪೋಷಿಸಿಕೊಳ್ಳಬೇಡ, ಇದು ಸ್ವಾರ್ಥ. ಪರೋಪಕಾರಿಯಾಗು ಬೇರೆ ಮರಗಳನ್ನು ಪೋಷಿಸು” ಎಂದು ಮರಕ್ಕೆ ಹೇಳಿದಂತೆ. ಇದು ಏನೋ ತರ್ಕಬದ್ಧ ಅನಿಸಬಹುದು ಆದರೆ ಮಹಾ ಅಪಾಯಕಾರಿ. ಇನ್ನೊಬ್ಬರನ್ನು ಸಲಹುವುದು ತ್ಯಾಗ ನಿಜ, ಆದರೆ ಮರ ತನ್ನನ್ನು ತಾನು ಪೋಷಿಸುಕೊಳ್ಳದೇ ಹೋದರೆ ಅದು ಹೇಗೆ ತಾನೆ ಇನ್ನೊಂದು ಮರವನ್ನು ಸಲಹಬಹುದು? ಇನ್ನೊಂದನ್ನು ಪೋಷಿಸುವ ಮೊದಲು ಅದು ತಾನು ಬದುಕಬೇಕಲ್ಲವೆ?
“ನಿಮ್ಮನ್ನು ನೀವು ಪ್ರೀತಿಕೊಳ್ಳಬೇಡಿ” ಎಂದೇ ನಿಮಗೆ ಕಲಿಸಲಾಗಿದೆ. ಇದು ಜಗತ್ತಿನ ಬಹುತೇಕ ಎಲ್ಲ ಸಂಘಟಿತ ಧರ್ಮಗಳ ಸಾರ್ವತ್ರಿಕ ಮೆಸೇಜ್. ಜೀಸಸ್ ಹೀಗೆ ಹೇಳಿಲ್ಲ ಆದರೆ ಕ್ರಿಶ್ಚಿಯಾನಿಟಿ ಹೀಗೆ ಹೇಳುತ್ತದೆ. ಬುದ್ಧ ಹೀಗೆ ಹೇಳಿಲ್ಲ ಆದರೆ, ಬುದ್ಧಿಸಂ ಹೀಗೆ ಹೇಳುತ್ತದೆ. ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವಿರಾದರೆ ನೀವು ಪಾಪಿಗಳು, ಸ್ವಾರ್ಥಿಗಳು, ಅ-ಯೋಗ್ಯರು ಎಂದೆಲ್ಲ.
ಈ ಸ್ವ-ನಿಂದನೆಯ ಕಾರಣವಾಗಿಯೋ ಮಾನವ ಜನಾಂಗದ ಮರ ಬಾಡಿ ಹೋಗಿದೆ, ತನ್ನ ತೇಜಸ್ಸನ್ನು ಕಳೆದುಕೊಂಡಿದೆ, ಖುಶಿಯ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಜನ ಏನೋ ಮಾಡಿ ತಮ್ಮ ಬದುಕನ್ನು ಎಳೆದಾಡುತ್ತ ಬದುಕುತ್ತಿದ್ದಾರೆ. ಜನ ಅಸ್ತಿತ್ವದಲ್ಲಿನ ತಮ್ಮ ಬೇರುಗಳನ್ನು ಕಳೆದುಕೊಂಡಿದ್ದಾರೆ. ಅವರು ಇನ್ನೊಬ್ಬರಿಗೆ ಸಹಾಯ ಮಾಡಲು ಬಯಸಿದರೂ ಅದು ಸಾಧ್ಯವಾಗುತ್ತಿಲ್ಲ ಏಕೆಂದರೆ ಅವರು ತಮ್ಮನ್ನು ತಾವು ಪ್ರೀತಿಸಿಕೊಳ್ಳದ ಕಾರಣ ಅವರೊಳಗಿನ ಗೆಳೆತನ- ಮತ್ತು ಪ್ರೇಮದ ಎಳೆಯೇ ನಾಶವಾಗಿದೆ.
ಒಮ್ಮೆ ಗೆಳೆಯ ಸಾಲ ಕೇಳಿಕೊಂಡು ನಸ್ರುದ್ದೀನ್ ನ ಬಳಿ ಬಂದ. ತನಗೆ ಈಗ ಹಣದ ಬಹಳ ಅವಶ್ಯಕತೆಯಿದೆ ಎಂದೂ ಎರಡು ವಾರಗಳ ಬಳಿಕ ಹಣ ವಾಪಸ್ಸು ಕೊಡುವುದಾಗಿಯೂ ಕೇಳಿಕೊಂಡ.
ಗೆಳೆಯ, ಸಾಲ ವಾಪಸ್ಸು ಕೊಡುವ ಮಾತನ್ನ ನಂಬಲು ನಸ್ರುದ್ದೀನ್ ಗೆ ಸುತರಾಂ ಸಾಧ್ಯವಾಗಲಿಲ್ಲ, ಆದರೂ ಗೆಳೆಯನಿಗೆ ಹಣ ಕೊಟ್ಟು ಕಳುಹಿಸಿದ.
ಎರಡು ವಾರಗಳ ಬಳಿಕ ಗೆಳೆಯ, ನಸ್ರುದ್ದೀನ್ ನ ಸಾಲ ವಾಪಸ್ಸು ಮಾಡಿದ. ನಸ್ರುದ್ದೀನ್ ಗೆ ಬಹಳ ಆಶ್ಚರ್ಯವಾಯಿತು.
ಕೆಲ ದಿನಗಳ ನಂತರ, ಗೆಳೆಯ ಮತ್ತೆ ಬಂದು ನಸ್ರುದ್ದೀನ್ ನ ಹತ್ತಿರ ಸಾಲ ಕೇಳಿದ, ಕಳೆದ ಬಾರಿ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ಸು ಮಾಡಿದ್ದನ್ನ ನಸ್ರುದ್ದೀನ್ ಗೆ ನೆನಪಿಸಿದ.
“ ಈ ಸಲ ನಿನಗೆ ಸಾಲ ಕೊಡುವುದು ಸಾಧ್ಯವಿಲ್ಲ. ಕಳೆದ ಬಾರಿ ನೀನು ಸಾಲ ವಾಪಸ್ ಮಾಡುವುದಿಲ್ಲ ಎಂದು ನಾನು ನಂಬಿದ್ದೆ. ಆದರೆ ಸಾಲ ವಾಪಸ್ ಮಾಡಿ ನೀನು ನನ್ನ ನಂಬಿಕೆಗೆ ದ್ರೋಹ ಮಾಡಿದ್ದೀಯ. ಇನ್ನೊಮ್ಮೆ ಮೋಸ ಹೋಗಲು ನಾನು ತಯಾರಿಲ್ಲ “
ನಸ್ರುದ್ದೀನ್, ಗೆಳೆಯನಿಗೆ ಸಾಲ ಕೊಡಲು ಖಡಾಖಂಡಿತವಾಗಿ ನಿರಾಕರಿಸಿದ.

