ದಿನದಲ್ಲಿ ಎಷ್ಟು ಬಾರಿ ಸಾಧ್ಯವೋ, ಯಾವಾಗೆಲ್ಲ ನೆನಪಾಗುತ್ತದೆಯೋ ಆಗೆಲ್ಲ, ಆಳ ವಿಶ್ರಾಂತಿಗೆ ಒಳಗಾಗಿ ಮತ್ತು ಶಾಂತಿಯನ್ನು ಫೀಲ್ ಮಾಡಿ. ಕೆಲ ದಿನಗಳ ನಂತರ ನೀವು ಏನೂ ಮಾಡದೆ ಕೂಡ ಶಾಂತಿ ನಿಮ್ಮಲ್ಲಿ ನೆಲೆಗೊಂಡಿರುವುದನ್ನು ನೀವು ಗಮನಿಸುವಿರಿ. ನಂತರ ಶಾಂತಿ ನಿಮ್ಮನ್ನು ನೆರಳುನಂತೆ ಹಿಂಬಾಲಿಸುತ್ತದೆ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನಾವು ಅವಸರದಲ್ಲಿರುವಂತೆ
ನಡೆಯುವಾಗ
ನೆಲದ ಮೇಲೆ ಮೂಡಿಸುತ್ತೇವೆ
ದುಗುಡ ಮತ್ತು ಆತಂಕದ ಹೆಜ್ಜೆಗಳನ್ನ.
ನಾವು ನಡೆಯುವುದು ಹೇಗಿರಬೇಕೆಂದರೆ
ಮೂಡಬೇಕು ನೆಲದ ಮೇಲೆ
ಕೇವಲ ಶಾಂತಿ
ಮತ್ತು ಸಮಾಧಾನದ ಹೆಜ್ಜೆಗಳು.
ಜಾಗರೂಕರಾಗಿರಿ
ನಿಮ್ಮ ಪಾದ ಮತ್ತು ನೆಲದ ನಡುವಿನ
ಸಂಪರ್ಕದ ಬಗ್ಗೆ .
ನಿಮ್ಮ ಪಾದ
ನೆಲವನ್ನು ಹೇಗೆ ಮುಟ್ಟಬೇಕೆಂದರೆ
ಮೊದಲಬಾರಿ ನಿಮ್ಮ ತುಟಿಗಳು
ನಿಮ್ಮ ಪ್ರೇಮಿಯ ತುಟಿಗಳನ್ನು
ಸ್ಪರ್ಶಿಸಿದಂತೆ
ಹಗುರಾಗಿ, ತನ್ಮಯತೆಯಲ್ಲಿ.
– Thich Nhat Hanh
ಶಾಂತಿ ಗೆ ಹಲವು ಲೆವೆಲ್ ಗಳಿವೆ. ಒಂದು ಲೆವಲ್ ನಲ್ಲಿಯಂತೂ ನೀವು ಕೇವಲ ಫೀಲ್ ಮಾಡಿಕೊಳ್ಳುವ ಮೂಲಕ, ಶಾಂತಿ ನಿಮ್ಮೊಳಗೆ ನೆಲೆಸಿದೆ ಎಂದು ನಿಮಗೆ ನೀವು ಆಳವಾದ ಸಜೇಷನ್ ನೀಡುವ ಮೂಲಕ ಶಾಂತಿಯನ್ನು ನಿಮ್ಮೊಳಗೆ ಸ್ಥಾಪಿಸಿಕೊಳ್ಳಬಹುದು ; ಇದು ಮೊದಲ ಲೆವಲ್. ಎರಡನೇಯ ಲೆವೆಲ್ ನಲ್ಲಿ ಥಟ್ಟನೇ ನಿಮಗೆ ನಿಮ್ಮೊಳಗಿನ ಶಾಂತಿಯ ಬಗ್ಗೆ ಅರಿವಾಗುತ್ತದೆ. ಇಲ್ಲಿ ನೀವು ಶಾಂತಿಯನ್ನು ಸೃಷ್ಟಿ ಮಾಡಿಕೊಳ್ಳುವುದಿಲ್ಲ. ಆದರೆ ಈ ಎರಡನೇಯ ಲೆವಲ್, ಮೊದಲನೇಯದು ನಿಮ್ಮೊಳಗೆ ಇದ್ದರೆ ಮಾತ್ರ ಸಾಧ್ಯವಾಗುವಂಥದು.
ಎರಡನೇಯದ್ದು ನಿಜವಾದದ್ದು, ಆದರೆ ಮೊದಲನೇಯದು, ಎರಡನೇಯದಕ್ಕೆ ದಾರಿ ಸಿದ್ಧ ಮಾಡಿ ಕೊಡುತ್ತದೆ. ಶಾಂತಿ ಆಗಮಿಸುತ್ತದೆ – ಆದರೆ, ಅದು ಬರುವ ಮೊದಲು ಪೂರ್ವಸಿದ್ಧತೆ ಎಂಬಂತೆ ಮೊದಲು ನೀವು ನಿಮ್ಮ ಸುತ್ತ ಮಾನಸಿಕ ಶಾಂತಿಯನ್ನು ಸೃಷ್ಟಿ ಮಾಡಿಟ್ಟುಕೊಂಡಿರಬೇಕು. ಮೊದಲನೇಯ ಶಾಂತಿ, ಕೇವಲ ಮಾನಸಿಕವಾದದ್ದು; ಅದು ಸ್ವಯಂ ಸಮ್ಮೋಹಿನಿಯಂತೆ (auto hypnotic); ಇದು ನೀವೇ ಹುಟ್ಟಿಸಿಕೊಂಡದ್ದು. ಮುಂದೆ ಒಂದು ದಿನ, ನಿಮಗೆ ಎರಡನೇಯ ಶಾಂತಿ ನಿಮ್ಮೊಳಗೆ ನೆಲೆಯಾಗಿರುವುದು ಅರಿವಿಗೆ ಬರುವುದು. ಇಲ್ಲಿ ನೀವು ಮಾಡಬೇಕಾದದ್ದು, ನಿಮಗೆ ಮಾಡಬೇಕಾದದ್ದು ಏನೂ ಇಲ್ಲ. ಹಾಗೆ ನೋಡಿದರೆ ಇದು ನಿಮಗಿಂತಲೂ ಆಳ. ಇದು ನಿಮ್ಮ ಇರುವಿಕೆಯ ಮೂಲದಿಂದಲೇ ಬರುವಂಥದು, ಅನಾಮಿಕ ಇರುವಿಕೆ, ಅವಿಭಜಿತ ಇರುವಿಕೆ, ಅಜ್ಞಾತ ಇರುವಿಕೆಯಿಂದ.
ನಮಗೆ ನಮ್ಮ ಕುರಿತಾದ ಮೇಲು ಮೇಲಿನದು ಮಾತ್ರ ಗೊತ್ತು. ‘ನೀವು’ ಎನ್ನುವ ಪುಟ್ಟ ಜಾಗೆ ಮಾತ್ರ ಗುರುತಿಸಲ್ಪಟ್ಟಿದೆ. ಒಂದು ಸಣ್ಣ ಅಲೆಗೆ ‘ನೀವು’ ಎಂದು ಲೇಬಲ್ ಮಾಡಿ ಹೆಸರಿಡಲಾಗಿದೆ. ಈ ಒಂದು ಸಣ್ಣ ಅಲೆಯ ಆಳದಲ್ಲಿಯೇ ಮಹಾ ಸಾಗರವಿದೆ. ಆದ್ದರಿಂದ ನೀವು ಏನೇ ಮಾಡಿದರೂ ಅದರ ಸುತ್ತ ಶಾಂತಿಯನ್ನ ಸೃಷ್ಟಿಸಿಕೊಳ್ಳುವುದನ್ನ ಮರೆಯಬೇಡಿ. ಇದು ಗುರಿ ಅಲ್ಲ ಕೇವಲ ದಾರಿ ಮಾತ್ರ. ಒಮ್ಮೆ ನೀವು ಶಾಂತಿಯನ್ನು ಸೃಷ್ಟಿಮಾಡಿಕೊಂಡುಬಿಟ್ಟರೆ, ಅದನ್ನು ಮೀರಿದ ಸಂಗತಿ ಆ ಜಾಗವನ್ನು ತುಂಬಿಕೊಳ್ಳುವುದು. ಇದು ನಿಮ್ಮ ಪ್ರಯತ್ನದಿಂದ ಸಾಧ್ಯವಾಗುವಂಥದ್ದಲ್ಲ.
ಒಬ್ಬ ರೈತ ತಾನು ಹುಟ್ಟಿದ ಹಳ್ಳಿ ಬಿಟ್ಟು ಹತ್ತಿರದ ಇನ್ನೊಂದು ಊರಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋದ. ಹೊಸ ಊರು ಹೇಗೋ ಏನೋ ಎಂದು ಚಿಂತೆಗೊಳಗಾದ ಆ ಮನುಷ್ಯ, ಈ ಬಗ್ಗೆ ವಿಚಾರಿಸಲು ಅಲ್ಲೇ ವಾಸವಾಗಿದ್ದ ಝೆನ್ ಮಾಸ್ಟರ್ ಬಳಿ ಹೋದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಕೆಟ್ಚ ಜನ ಮಾಸ್ಟರ್, ಹೊಟ್ಟೆ ಕಿಚ್ಚಿನವರು, ಮೋಸಗಾರರು, ಕಳ್ಳರು.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.
ಕೆಲ ದಿನಗಳ ನಂತರ ಇನ್ನೊಬ್ಬ ರೈತ, ಇನ್ನೊಂದು ಊರಿನಿಂದ ಅದೇ ಊರಿಗೆ ಬಂದು, ಝೆನ್ ಮಾಸ್ಟರ್ ಗೆ ಅದೇ ಪ್ರಶ್ನೆ ಕೇಳಿದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಒಳ್ಳೆ ಜನ ಮಾಸ್ಟರ್, ಒಬ್ಬರಿಗೊಬ್ಬರು ಬಹಳ ಸಹಾಯ ಮಾಡುತ್ತಾರೆ, ಸದಾ ತಮ್ಮ ತಮ್ಮ ಕೆಲಸ ಮಾಡುತ್ತ, ಹಾಡುತ್ತ, ಕುಣಿಯುತ್ತ ಖುಷಿಯಾಗಿರ್ತಾರೆ.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.

