ಬಳಲುವಿಕೆ ( Suffering ) ಓಶೋ : 365 #Day 129

ಯಾರೂ ಬಳಲಲು  ಬಯಸುವದಿಲ್ಲ. ಆದರೆ ಬಳಲಿಕೆಯ ಬೀಜಗಳನ್ನ ನಾವು ನಮ್ಮೊಳಗೆ ಕ್ಯಾರಿ ಮಾಡುತ್ತಿರುತ್ತೇವೆ. ನಮ್ಮ ಸಾಧನೆಯ ಇಡೀ ಉದ್ದೇಶವೇ ಈ ಬೀಜಗಳನ್ನು ಸುಟ್ಟು ನಾಶ ಮಾಡಿಬಿಡುವುದು. ಈ ಸುಡುವಿಕೆಯೇ ಕೊಂಚ ಬಳಲುವಿಕೆಯನ್ನ ಉಂಟು ಮಾಡುತ್ತದೆಯಾದರೂ ಇದು ಇಡೀ ಬದುಕಿನ ಸಂಕಟಗಳಿಗಿಂತ ಬಹಳ ಕಡಿಮೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ನನ್ನ ಕಣ್ಣುಗಳನ್ನ ಏನು ಮಾಡಲಿ?
ಕಿತ್ತು ಆಚೆಗೆ ಎಸೆ, ಎಂದ ಭಗವಂತ.

ನನ್ನೊಳಗಿನ ತುಡಿಯುತ್ತಿರುವ ಅನುರಕ್ತಿಯನ್ನ?
ಉರಿಸುತ್ತಿರು ನಿರಂತರವಾಗಿ, ಎಂದ ಭಗವಂತ.

ನನ್ನ ಹೃದಯವನ್ನೇನು ಮಾಡಲಿ?
ನಿನ್ನ ಹೃದಯದಲ್ಲಿ ಇರುವುದಾದರೂ ಏನು?
ತಿರುಗಿ ಪ್ರಶ್ನೆ ಮಾಡಿದ ಭಗವಂತ.

ನೋವು ಮತ್ತು ದುಃಖ ಬಿಟ್ಟರೆ ಬೇರಿನ್ನೇನಿಲ್ಲ ದೊರೆಯೆ,
ಸಂಕಟದಿಂದ ನುಡಿದೆ.

ನೋವು ಮತ್ತು ದುಃಖವನ್ನ ಜತನದಿಂದ ಕಾಯ್ದುಕೋ,
ನಿನ್ನ ಗಾಯದ ಜಾಗದಿಂದಲೇ ಬೆಳಕು
ನಿನ್ನೊಳಗೆ ದಾಖಲಾಗುವುದು,

ಅಕ್ಕರೆಯಿಂದ
ಸಮಾಧಾನ ಮಾಡಿದ ಭಗವಂತ.

~ ರೂಮಿ

ಒಮ್ಮೆ ಈ ಬಳಲಿಕೆಯ ಬೀಜಗಳನ್ನು ( seeds of suffering) ನಾಶ ಮಾಡಿಬಿಟ್ಟಿರಾದರೆ ನಿಮ್ಮ ಇಡೀ ಬದುಕು ಆನಂದೋತ್ಸಾಹಗಳಿಂದ ತುಂಬಿಕೊಳ್ಳುವುದು. ಆದ್ದರಿಂದ ನೀವು ಬಳಲುವಿಕೆಯನ್ನು ಅವಾಯ್ಡ್ ಮಾಡುತ್ತಿರುವಿರಾದರೆ, ನಿಮ್ಮೊಳಗಿನ ಬಳಲುವಿಕೆಯನ್ನು ಎದುರುಗೊಳ್ಳುವುದನ್ನ ತಪ್ಪಿಸಿಕೊಳ್ಳುತ್ತಿರುವಿರಾದರೆ, ನಿಮ್ಮ ಇಡೀ ಬದುಕು ಸಂಕಟಗಳಿಂದ ತುಂಬಿಕೊಂಡಿರುವಂಥ ಪರಿಸ್ಥಿತಿಯನ್ನ ನೀವೇ ಸೃಷ್ಟಿಮಾಡಿಕೊಳ್ಳುತ್ತಿದ್ದೀರಿ.

ಒಮ್ಮೆ ನೀವು ಕ್ಯಾರಿ ಮಾಡುತ್ತಿರುವ ಗಾಯಗಳು ಮೇಲ್ಮೈಗೆ ಬಂದವೆಂದರೆ ಅವು ವಾಸಿಯಾಗಲು ಶುರುವಾಗುತ್ತವೆ. ಇದು ಹೀಲಿಂಗ್ ಪ್ರಕ್ರಿಯೆ. ಆದರೆ ನನಗೆ ಗೊತ್ತು, ನಿಮ್ಮೊಳಗಿನ ಗಾಯವನ್ನು ಮುಟ್ಟಲು ನೀವು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ. ನಿಮ್ಮೊಳಗೆ ಗಾಯ ಇರುವುದನ್ನು ನೀವು ಒಪ್ಪಿಕೊಳ್ಳಲು ತಯಾರಾಗುವುದಿಲ್ಲ. ನೀವು ಆ ಗಾಯಗಳನ್ನು ಮುಚ್ಚಿಕೊಳ್ಳುತ್ತೀರಿ. ಆದರೆ ಗಾಯ ಮುಚ್ಚಿಕೊಳ್ಳುವುದರಿಂದ ಅವು ವಾಸಿಯಾಗುವುದಿಲ್ಲ. ಗಾಯ, ಗಾಳಿಗೆ, ಸೂರ್ಯನ ಕಿರಣಗಳಿಗೆ ತೆರೆದುಕೊಳ್ಳಬೇಕು.

ಮೊದಮೊದಲು ಇದು ಯಾತನಾಮಯವಾಗಿರಬಹುದು, ಆದರೆ ಒಮ್ಮೆ ಗಾಯ ವಾಸಿಯಾಯಿತೆಂದರೆ ನಿಮಗೆ ಅದರ ಸುಖ ಗೊತ್ತಾಗುವುದು. ಹೀಗಲ್ಲದೇ ಗಾಯ ವಾಸಿಯಾಗುವ ಇನ್ನೊಂದು ರೀತಿಯಿಲ್ಲ. ಗಾಯವನ್ನು ಪ್ರಜ್ಞೆಯ ಪರಿಧಿಗೆ ತರಲೇ ಬೇಕು. ಗಾಯವನ್ನು ಪ್ರಜ್ಞೆಯ ಹತ್ತಿರ ತರುವುದೆಂದರೆ, ಗಾಯ ವಾಸಿಯಾಗುವ ಪ್ರಕ್ರಿಯೆ ಶುರುವಾದಂತೆ.

*****************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.