ಬದುಕು ಸದ್ದು ಗದ್ದಲದಿಂದ ತುಂಬಿಕೊಂಡಿದೆ, ಮತ್ತು ಜಗತ್ತು ಅಪಾರ ಜನಜಂಗುಳಿಯಿಂದ. ಸದ್ದು ಗದ್ದಲದ ವಿರುದ್ಧ ಹೋರಾಡುವುದೆಂದರೆ ಅದರಿಂದ ಹೊರತಾಗುವುದಲ್ಲ, ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸದ್ದು ಗದ್ದಲದ ವಿರುದ್ಧ ಹೆಚ್ಚು ಹೋರಾಡಿದಂತೆಲ್ಲ ನೀವು ಹೆಚ್ಚು ನರ್ವಸ್ ಆಗುತ್ತ ಹೋಗುತ್ತಿರಿ. ಏಕೆಂದರೆ ನೀವು ಹೆಚ್ಚು ಹೋರಾಡಿದಂತೆಲ್ಲ ಅದು ನಿಮ್ಮನ್ನು ಹೆಚ್ಚು ಡಿಸ್ಟರ್ಬ್ ಮಾಡುತ್ತದೆ. ನಿಮ್ಮನ್ನು ನೀವು ತೆರೆದುಕೊಂಡು, ಮುಕ್ತವಾಗಿ ಗದ್ದಲವನ್ನು ಸ್ವೀಕರಿಸಿ ; ಸದ್ದು ಗದ್ದಲ ಕೂಡ ಬದುಕಿನ ಭಾಗವೇ. ಮತ್ತು ಒಮ್ಮೆ ನೀವು ಅದನ್ನು ಸ್ವೀಕರಿಸಲು ಶುರು ಮಾಡಿದಂತೆಲ್ಲ ನಿಮಗೆ ಆಶ್ಚರ್ಯವಾಗುವಂತೆ ಅದು ನಿಮ್ಮನ್ನು ಡಿಸ್ಟರ್ಬ್ ಮಾಡುವದನ್ನು ನಿಲ್ಲಿಸುತ್ತದೆ. ಈ ಡಿಸ್ಟರ್ಬನ್ಸ್ ಗೆ ಕಾರಣ ಸದ್ದು ಗದ್ದಲವಲ್ಲ, ಅದು ಸಾಧ್ಯವಾಗಿರುವುದು ಸದ್ದು ಗದ್ದಲದ ಕುರಿತಾದ ನಿಮ್ಮ ಮನೋಭಾವದಿಂದ. ಸದ್ದು ಗದ್ದಲ, ಡಿಸ್ಟರ್ಬನ್ಸ್ ಅಲ್ಲ ; ಅದರ ಕುರಿತಾದ ನಿಮ್ಮ ಮನೋಭಾವ (attitude) ಡಿಸ್ಟರ್ಬನ್ಸ್. ನೀವು ಸದ್ದುಗದ್ದಲಕ್ಕೆ ವಿರೋಧಿಯಾಗಿದ್ದಾಗ ಅದು ನಿಮ್ಮನ್ನು ಡಿಸ್ಟರ್ಬ ಮಾಡುತ್ತದೆ, ವಿರೋಧಿಯಾಗಿಲ್ಲದಾಗ ಅದು ನಿಮ್ಮನ್ನು ಡಿಸ್ಟರ್ಬ ಮಾಡುವುದಿಲ್ಲ.
ಎಲ್ಲಿಗೆ ತಾನೇ ಹೋಗುತ್ತೀರಿ ನೀವು? ನೀವು ಎಲ್ಲೇ ಹೋದರೂ ಒಂದಲ್ಲ ಒಂದು ರೀತಿಯ ಸದ್ದುಗದ್ದಲ ಅಲ್ಲಿ ಇದ್ದೇ ಇರುತ್ತದೆ ; ಇಡೀ ಜಗತ್ತೇ ಸದ್ದುಗದ್ದಲದಿಂದ ತುಂಬಿಕೊಂಡಿದೆ. ಸದ್ದುಗದ್ದಲದಿಂದ ತಪ್ಪಿಸಿಕೊಳ್ಳಲು ನೀವು ಹಿಮಾಲಯದ ಗುಹೆಯಲ್ಲಿ ಹೋಗಿ ಕುಳಿತುಕೊಳ್ಳುವಿರಾದರೆ, ಬದುಕನ್ನು ಮಿಸ್ ಮಾಡಿಕೊಳ್ಳುತ್ತೀರಿ. ಅಲ್ಲಿ ನಿಮಗೆ ಸದ್ದುಗದ್ದಲ ಕೇಳಿಸದಿದ್ದರೂ ಬದುಕು ಸಾಧ್ಯಮಾಡುವ ಎಲ್ಲ ಬೆಳವಣಿಗೆಯ ಅವಕಾಶಗಳು ನಿಮಗೆ ಲಭ್ಯವಾಗುವುದಿಲ್ಲ ಮತ್ತು ನಿಧಾನವಾಗಿ ಇಂಥ ಶಾಂತಿ ನಿಮಗೆ ಡಲ್ ಎನಿಸತೊಡಗುತ್ತದೆ, ಜೀವಂತಿಕೆಯಿಂದ ಹೊರತಾದದ್ದು ಎಂದು ಅನಿಸತೊಡಗುತ್ತದೆ.
ಶಾಂತಿಯನ್ನು ಎಂಜಾಯ್ ಮಾಡಬೇಡಿ ಎಂದು ನಾನು ಹೇಳುತ್ತಿಲ್ಲ. ಶಾಂತಿಯನ್ನು ಖಂಡಿತ ಎಂಜಾಯ್ ಮಾಡಿ ; ಆದರೆ ನಿಮಗೆ ಗೊತ್ತಿರಲಿ ಶಾಂತಿ, ಸದ್ದುಗದ್ದಲಕ್ಕೆ ವಿರುದ್ಧ ಅಲ್ಲ. ಸದ್ದುಗದ್ದಲದಲ್ಲಿ ಶಾಂತಿ ನೆಲೆಯಾಗಿರಬಹುದು. ಹಾಗೆ ನೋಡಿದರೆ, ಯಾವಾಗ ಶಾಂತಿ, ಸದ್ದುಗದ್ದಲದಲ್ಲಿ ನೆಲೆಯಾಗಿರುತ್ತದೆಯೋ ಆಗಲೇ ಅದು ನಿಜವಾದ ಶಾಂತಿ. ಹಿಮಾಲಯದಲ್ಲಿ ನಿಮ್ಮ ಅನುಭವಕ್ಕೆ ಬರುವ ಶಾಂತಿ, ನಿಮ್ಮ ಶಾಂತಿ ಅಲ್ಲ ; ಅದು ಹಿಮಾಲಯಕ್ಕೆ ಸೇರಿದ್ದು. ಆದರೆ ಮಾರ್ಕೇಟಿನಲ್ಲಿ ನಿಮಗೆ ಶಾಂತಿಯ ಅನುಭವವಾಗಬಹುದಾದರೆ, ಅದು ನಿಮಗೆ ದಕ್ಕಬಹುದಾದ ನಿಜವಾದ ಶಾಂತಿ, ಅದು ನಿಮ್ಮದು. ಆಗ ಹಿಮಾಲಯ ನಿಮ್ಮ ಹೃದಯದಲ್ಲಿ ನೆಲೆಯಾಗುತ್ತದೆ, ಮತ್ತು ಇದು ನಿಜವಾದ ಸಂಗತಿ.
ಮಾಸ್ಟರ್ ಹೈಕೂಯಿನ್ ತನ್ನ ಬಹು ದಿನಗಳ ಪ್ರಯಾಣದ ನಂತರ ಆಶ್ರಮಕ್ಕೆ ಹಿಂತಿರುಗಿದ. ಅವನು ಆಶ್ರಮ ಪ್ರವೇಶಿಸಿದಾಗ ಅದು ಸಂಜೆಯ ಧ್ಯಾನದ ಸಮಯವಾಗಿತ್ತು. ಆಶ್ರಮದ ಎಲ್ಲ ಮಾಸ್ಟರ್ ಗಳು, ಸನ್ಯಾಸಿಗಳೂ ತೀವ್ರ ಝಾಝೆನ್ ಧ್ಯಾನದಲ್ಲಿ ಮಗ್ನರಾಗಿದ್ದರು. ಯಾರಿಗೂ ಹೈಕೂಯಿನ್ ಬಂದಿರುವ ವಿಷಯ ಗೊತ್ತೇ ಆಗಲಿಲ್ಲ.
ಆದರೆ ಆಶ್ರಮದೊಳಗೆ ಹೈಕೂಯಿನ್ ಕಾಲಿಡುತ್ತಿದ್ದಂತೆಯೇ ಆಶ್ರಮದ ನಾಯಿಗಳು ಬೊಗಳುತ್ತ ಮಾಸ್ಟರ್ ಸುತ್ತ ಓಡಾಡುತ್ತ ಗದ್ದಲ ಹಾಕತೊಡಗಿದವು, ಬೆಕ್ಕುಗಳು ಮಾಸ್ಟರ್ ನ ಕಾಲು ನೆಕ್ಕುತ್ತ ಚೀರತೊಡಗಿದವು, ಕೋಳಿಗಳು ಸದ್ದು ಮಾಡುತ್ತ ಓಡಾಡತೊಡಗಿದವು, ಮೊಲಗಳು ಆ ಕಡೆಯಿಂದ ಈ ಕಡೆ ಸುಮ್ಮನೇ ಜಿಗಿದಾಡತೊಡಗಿದವು. ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು.
ಮಾಸ್ಟರ್ ಹೈಕೂಯಿನ್, ಧ್ಯಾನಸ್ಥರಾಗಿದ್ದ ತನ್ನ ಶಿಷ್ಯರನ್ನೂ, ಗದ್ದಲ ಹಾಕುತ್ತಿದ್ದ ಈ ಪ್ರಾಣಿಗಳನ್ನು ಒಮ್ಮೆ ಗಮನಿಸಿ ಮಾತನಾಡಿದ,
“ ಪ್ರೀತಿಯ ಒಂದೇ ಒಂದು ಆಕ್ರಂದನ ಸಾವಿರ ವರ್ಷ ಕುಳಿತು ಧ್ಯಾನ ಮಾಡುವುದಕ್ಕಿಂತ ಮಹತ್ತರವಾದದ್ದು.
*********************************

