ಬದಲಾಗುತ್ತಿರುವ ಹವಾಮಾನ ( Changing Climates ) ಓಶೋ 365 #Day 132

ಋತುಗಳು ಬದಲಾಗುತ್ತವೆ. ಒಮ್ಮೆ ಚಳಿಗಾಲವಾದರೆ ಇನ್ನೊಮ್ಮೆ ಬೇಸಿಗೆ. ಯಾವಾಗಲೂ ಒಂದೇ ಹವಾಮಾನ ಇದ್ದರೆ ನಿಮಗೆ ಕಾಲ ನಿಂತು ಹೋದಂತೆ ಅನಿಸುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಬದುಕಿನಲ್ಲಿ ಏನೇ ಘಟಿಸಿದರೂ,
ಎಂಥ ಸಂಕಟದ ಸಮಯಗಳು ಎದುರಾದರೂ,
ದಯವಿಟ್ಟು
ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ.

ಎಲ್ಲ ಬಾಗಿಲುಗಳು
ಸಂಪೂರ್ಣವಾಗಿ ಮುಚ್ಚಿದ್ದರೂ,
ಭಗವಂತ
ಕೇವಲ ನಿನಗಾಗಿ ಎಂದೇ
ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ.

ಅವನ ಅಪಾರ ಕರುಣೆಯನ್ನು ಸ್ಮರಿಸು !

ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ
ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ.

ಆದರೆ ತನಗೆ
ಕೊಡಲಾಗಿರುವುದರ ಬಗ್ಗೆ ಮಾತ್ರ ಅಲ್ಲ
ನಿರಾಕರಿಸಿದ್ದರ ಬಗ್ಗೆ ಕೂಡ
ಸೂಫಿ ಕೃತಜ್ಞ.

~ ಶಮ್ಸ್ ತಬ್ರೀಝಿ

ಹವಾಮಾನ ಏನಿದೆಯೋ ಅದನ್ನು ಇಷ್ಟಪಡಲು ಕಲಿಯಬೇಕು. ಇದನ್ನೇ ನಾನು ಪ್ರಬುದ್ಧತೆ ಎನ್ನುವುದು. ಇರುವುದನ್ನ ಇಷ್ಟಪಡಬೇಕು. ಇರುವುದನ್ನ ಬಿಟ್ಚು ಇರದಿರುವುದನ್ನ ಬಯಸುವುದು ಅಪ್ರಬದ್ಧತೆ.

ಇರುವ ಪರಿಸ್ಥಿತಿ ಅದೇನೇ ಇದ್ದರೂ ಒಳ್ಳೆಯದು. ಅದನ್ನ ಪ್ರೀತಿಸಿ, ಇಷ್ಟಪಡಿ, ಅದರಲ್ಲಿ ಪ್ರಶಾಂತತೆಯನ್ನು ಅನುಭವಿಸಿ. ತೀವ್ರತೆ ಆಗಮಿಸಿದಾಗ ಅದನ್ನೂ ಪ್ರೀತಿಸಿ. ಅದು ನಿಮ್ಮನ್ನು ಬಿಟ್ಟು ತೆರಳಿದಾಗ ಶುಭವಿದಾಯ ಹೇಳಿ. ಸಂಗತಿಗಳು ಬದಲಾಗುತ್ತಲೇ ಇರುತ್ತವೆ….. ಬದುಕು ಒಂದು ಹರಿವು. ಯಾವುದೂ ಒಂದೇ ರೀತಿ ಇರುವುದಿಲ್ಲ, ಒಮ್ಮೊಮ್ಮೆ ಹರಿದಾಡಲು ವಿಪರೀತ ಅವಕಾಶಗಳಿದ್ದರೆ ಇನ್ನೊಮ್ಮೆ, ಒಂದು ಹೆಜ್ಜೆಯೂ ಮುಂದಿಡಲಾಗದಂಥ ಪರಿಸ್ಥಿತಿ ಇರುತ್ತದೆ. ಎರಡೂ ಒಳ್ಳೆಯದೇ. ಎರಡೂ ಕೂಡ ಅಸ್ತಿತ್ವದ ಕೊಡುಗೆಗಳೇ.
ಅದೇನೇ ಇದ್ದರೂ ಕೃತಜ್ಞರಾಗಿರಿ, ಸುಮ್ಮನೇ ಪರಿಸ್ಥಿತಿಯನ್ನು ಎಂಜಾಯ್ ಮಾಡಿ. ಈಗ ಸಂಭವಿಸುತ್ತಿರುವುದು ನಾಳೆ ಇರದಿರಬಹುದು. ನಾಡಿದ್ದು ಇನ್ನೂ ಏನೋ ಆಗುವ ಸಾಧ್ಯತೆ ಇರುತ್ತದೆ. ಎಲ್ಲವನ್ನೂ ಎಂಜಾಯ್ ಮಾಡಿ. ಹಳೆಯದನ್ನು ಭವಿಷ್ಯದ ವ್ಯರ್ಥ ಕಲ್ಪನೆಗಳಿಗೆ ಹೋಲಿಸಬೇಡಿ. Live in the moment. ಕೆಲವೊಮ್ಮೆ ಅದು ಬಿಸಿಯಾಗಿರಬಹುದು ಮತ್ತು ಇನ್ನೂ ಕೆಲವೊಮ್ಮೆ ತಂಪು. ಎರಡೂ ಸಹ ನಮಗೆ ಅವಶ್ಯಕ; ಇಲ್ಲವಾದರೆ ಬದುಕು ಕಾಣೆಯಾಗುತ್ತಿತ್ತು. ಬದುಕು ಇರುವುದೇ ವೈರುಧ್ಯಗಳಲ್ಲಿ.

ನಸ್ರುದ್ದೀನ್ ನ ಅಮ್ಮ ಅವನನ್ನ ಹಾಸಿಗೆಯಿಂದ ಎಬ್ಬಿಸುವ ಪ್ರಯತ್ನ ಮಾಡಿದಳು.

“ನಸ್ರುದ್ದೀನ್, ಬೇಗ ಏಳು ಸ್ಕೂಲಿಗೆ ಹೋಗಬೇಕು “

“ ಮೂರು ಕಾರಣಗಳಿಂದ ನನಗೆ ಸ್ಕೂಲ್ ಇಷ್ಟ ಇಲ್ಲ.
ಒಂದು, ಸ್ಕೂಲ್ ವಾತಾವರಣ ಡಲ್ ಆಗಿದೆ, ಎರಡನೇಯದು ಸ್ಕೂಲ್ ಲ್ಲಿ ಮಕ್ಕಳು ನನ್ನ ಅಣಕಿಸ್ತಾರೆ, ಮೂರನೇ ಕಾರಣ ನನಗೆ ಸ್ಕೂಲ್ ಅಂದ್ರೆ ಬೇಸರ. “

ನಸ್ರುದ್ದೀನ್ ಹಾಸಿಗೆಯಿಂದ ಏಳದೇ ಅಮ್ಮನಿಗೆ ಸಮಜಾಯಿಷಿ ಹೇಳಿದ.

“ ನಸ್ರುದ್ದೀನ್, ನೀನು ಸ್ಕೂಲ್ ಗೆ ಯಾಕೆ ಹೋಗಲೇ ಬೇಕು ಅನ್ನುವುದಕ್ಕೂ ಮೂರು ಕಾರಣಗಳಿವೆ. ಒಂದು ಅದು ನಿನ್ನ ಕರ್ತವ್ಯ, ಎರಡನೇಯ ಕಾರಣ ನಿನಗೆ ಈಗ 50 ವರ್ಷ ವಯಸ್ಸು ಮತ್ತು ಮೂರನೇಯದು ನೀನು ಸ್ಕೂಲಿನ ಹೆಡ್ ಮಾಸ್ಟರ್. “

ಅಮ್ಮ , ನಸ್ರುದ್ದೀನ್ ಹೊದ್ದುಕೊಂಡಿದ್ದ ಬೆಡ್ ಶೀಟ್ ಕಿತ್ತೆಸೆದಳು.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.