ಗಂಡುಗಚ್ಚೆ  : ಅಕ್ಕ ಮಹಾದೇವಿ #31

 ಈ ವಚನ ಎರಡು ಕಾರಣಕ್ಕೆ ಗಮನ ಸೆಳೆಯುತ್ತದೆ. ಮೊದಲನೆಯದು ಪೌರುಷ, ಎರಡನೆಯದು ಭಕ್ತಿಯನ್ನು ಶೌರ್ಯ, ವೀರತ್ವಗಳೊಂದಿಗೆ ಹೋಲಿಸುವುದು… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ

ಆಳುತನದ ಮಾತನೇರಿಸಿ ನುಡಿದಡೆ
ಆಗಳೆ ಕಟ್ಟಿದೆನು ಗಂಡುಗಚ್ಚೆಯ
ತಿಗುರನೇರಿಸಿ ತಿಲಕವನಿಟ್ಟು
ಕೈದುವ ಕೊಂಡು ಕಳನೇರಿದ ಬಳಿಕ
ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ
ಕಾಣಾ ಚೆನ್ನಮಲ್ಲಿಕಾರ್ಜುನಾ. [೭೩]

[ಆಳುತನ=ಶೌರ್ಯ; ಮಾತನೇರಿಸಿ=ಮಾತನ್ನು ಹೆಚ್ಚು ಮಾಡಿ; ತಿಗುರು=ಲೇಪನ;  ಕೈದುವ=ಆಯುಧವ; ಕಳ=ರಣಾಂಗಣ, ಅಖಾಡ

[ಆಳುತನ=ಶೌರ್ಯ; ಮಾತನೇರಿಸಿ=ಮಾತನ್ನು ಹೆಚ್ಚು ಮಾಡಿ; ತಿಗುರು=ಲೇಪನ;  ಕೈದುವ=ಆಯುಧವ; ಕಳ=ರಣಾಂಗಣ, ಅಖಾಡ]

ಗಂಡುತನ, ಶೌರ್ಯವೇ ಮಿಗಿಲು ಎಂದು ಪೌರುಷವನ್ನೇ ಮೇಲೇರಿಸಿ ಮಾತಾಡಿದರೆ, ಆ ಕ್ಷಣವೇ ನಾನು ಗಂಡು-ಕಚ್ಚೆಯನ್ನು ಕಟ್ಟುವೆ, ಮೈಗೆ ಎಣ್ಣೆ ಲೇಪಿಸಿ ತಿಲಕವನ್ನು ಧರಿಸಿ, ಆಯುಧ ಹಿಡಿದು ರಣಭೂಮಿಗೆ/ಅಖಾಡಕ್ಕೆ ಏರಿದರೆ, ಕಟ್ಟಿದ ನಿರಿಗೆ ಸಡಿಲವಾಗದ ಹಾಗೆ ಹೋರಾಡುವೆ, ನಿರಿಗೆ ಸಡಿಲಿದರೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ.

ಈ ವಚನ ಎರಡು ಕಾರಣಕ್ಕೆ ಗಮನ ಸೆಳೆಯುತ್ತದೆ. ಮೊದಲನೆಯದು ʻಪೌರುಷʼ (ಪುರುಷನ ಗುಣವೇ ಪೌರುಷ ಅನ್ನುವ ಗುಣವಾಚಕ) ಶೌರ್ಯ, ವೀರತನ ಇವೆಲ್ಲ ಗಂಡಿಗೆ ಮಾತ್ರ ಸೀಮಿತವಲ್ಲ, ಹೆಣ್ಣೂ ಅದೆಲ್ಲ ಗುಣ ಪಡೆಯಬಲ್ಲಳು; ಗಂಡೇ ಆಗಲಿ ಹೆಣ್ಣೇ ಆಗಲಿ ವೀರತ್ವ, ಶೌರ್ಯಗಳು ಮನುಷ್ಯ ಜೀವಿಗಳೆಲ್ಲರಲ್ಲೂ ಬೆಳೆಯಬಹುದಾದ ಗುಣ ಅನ್ನುವುದನ್ನು ಈ ವಚನ ಎತ್ತಿ ತೋರುತ್ತದೆ. ಎರಡನೆಯ ಕಾರಣವೆಂದರೆ ಭಕ್ತಿಯನ್ನು ಶೌರ್ಯ, ವೀರತ್ವಗಳೊಂದಿಗೆ ಹೋಲಿಸುವುದು ಗಮನ ಸೆಳೆಯುತ್ತದೆ. ಈ ವಚನದಷ್ಟು ಖಚಿತವಾದ ಮಾತಿನ ರೀತಿ ಇರದ ʻಆಳುತನದ ಮಾತನಾಡದಿರೆಲವೊ [೭೧]ʼ ಅನ್ನುವ ಇನ್ನೊಂದು ವಚನದಲ್ಲಿರುವ ಅದರಲ್ಲಿರುವ ಎಲವೋ ಎಂಬ ಪ್ರಯೋಗ, ಮತ್ತು ವಾಕ್ಯರಚನೆ ಶಿಥಿಲವಾಗಿರುವುದನ್ನು ಕಂಡರೆ ಈ ವಚನ ಆನಂತರದ ಕಾಲದಲ್ಲಿ ರೂಪ ಬದಲುಗೊಂಡ ರಚನೆಯಂತೆ ಅನ್ನಿಸುತ್ತದೆ.

ಈ ವಚನದಲ್ಲಿ ಇನ್ನೊಂದು ಕುತೂಹಲಕರ ಪ್ರಶ್ನೆಗೆ ಅವಕಾಶವಿದೆ. ಈ ವಚನವನ್ನು ನುಡಿಯುತ್ತಿರುವ ಮನಸ್ಸು ಚೆನ್ನಮಲ್ಲಿಕಾರ್ಜುನನಿಗೆ ಎದುರಾಗಿ ಕಾದಾಟಕ್ಕೆ ಇಳಿದಿದೆಯೇ? ಅದು ಹೌದಾದರೆ, ಬಸವವಚನದಲ್ಲೂ ಕೂಡಲಸಂಗಮನು ಭಕ್ತನ ʻಎಲುಬು ಕಾಣುವಂತೆʼ ಹೋರಾಡಿ ಪರೀಕ್ಷಿಸುವ ಮಾತು ನೆನಪಾಗಿ ʻದೇವರೇ ಎದುರಾಳಿಯಾದರೂ ನಾನು ಲೆಕ್ಕಿಸುವುದಿಲ್ಲʼ ಅನ್ನುವ ಸ್ಥೈರ್ಯದ ಮಾತಾಗಿ ಈ ವಚನ ಕೇಳಿಸುತ್ತದೆ. ಅಥವಾ ಇದು  ಲೋಕದ ಸಂಕಷ್ಟಗಳನ್ನು ಎದುರಿಸಲು,ಭಕ್ತಿ ವೈರಾಗ್ಯಗಳ ಸಾಧನೆ ಮಾಡಲು  ಗಂಡು ಮಾತ್ರ ಸಮರ್ಥ, ಹೆಣ್ಣು ಕೇವಲ ಗಂಡನ್ನು ವಿಚಲಿತಗೊಳಿಸುವ ಮಾಯೆ, ಅಥವಾ  ಗಂಡಿನ ಆಶ್ರಯದಲ್ಲಿರುವವಳು ಅನ್ನುವ ಧೋರಣೆಯನ್ನು ಧಿಕ್ಕರಿಸುವ ಮಾತೋ?  ʼto take arms against a sea of troublesʼ ತೊಡರುಗಳ ಕಡಲ ತೆರೆಗಳಿಗೆ ಎದುರಾಗಿ ಆಯುಧ ಹಿಡಿದು ನಿಲ್ಲಲೇ ಅನ್ನುವ ಹ್ಯಾಮ್ಲೆಟ್‌ನ ಮಾತು ನೆನಪಾಗುತ್ತದೆ. ಹಾಗಾದರೆ ಈ ವಚನವು  ಗಂಡಿಗೆ ಮಾತ್ರ ಪೌರುಷ ಅನ್ನುವ ತಿಳಿವಳಿಕೆ ಸುಳ್ಳು, ಹೆಣ್ಣಾದ ನಾನೂ ಅಂಥ ಗುಣಗಳನ್ನು ಅವಾಹಿಸಿಕೊಂಡು ಬದುಕಿನ ಸಂಕಷ್ಟ ಎದುರಿಸಬಲ್ಲೆ ಅನ್ನುವ ದೃಢ ವಿಶ್ವಾಸದ ಮಾತೂ ಆಗುತ್ತದೆ.  ಅಕ್ಕನ ಇಂಥದೇ ಇನ್ನೊಂದು ವಚನ ʻಮುಂಗೈಯಲ್ಲಿ ವೀರಗಂಕಣʼದಲ್ಲೂ ಈ ವಚನದ ಭಾವ ಮುಂದುವರೆದಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.