ಈ ವಚನವು ಭಕ್ತಿ ಮತ್ತು ಶೌರ್ಯವನ್ನು ಒಟ್ಟಿಗೆ ನೋಡುವ ರೀತಿ ಗಮನ ಸೆಳೆಯುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ಮುಂಗೈಯಲ್ಲಿ ವೀರಗಂಕಣವಿಕ್ಕಿ
ಮುಂಗಾಲಲ್ಲಿ ತೊಡರುಬಾವುಲಿಯ ಕಟ್ಟಿದೆ
ಗಂಡುಡಿಗೆಯನುಟ್ಟೆನೆಂಬ ಮಾತಿನ ಬಿರಿದ ನುಂಗಿದೆನು
ಚೆನ್ನಮಲ್ಲಿಕಾರ್ಜುನಾ
ನಿಮ್ಮಾಣೆಗೆ ಊಣೆಯವ ತಂದೆನಾದಡೆ
ನಿಮ್ಮ ತೊತ್ತಿನ ಮಗಳಲ್ಲಯ್ಯಾ. [೩೩೭]
[ಬಾವುಲಿ= ವೀರರ ಬಿರುದು ಕೆತ್ತಿದ ಕಾಲು ಕಡಗ, ತೊಡರು ಬಾವುಲಿ=ಓಡುವುದು ಅಸಾಧ್ಯವಾಗಿಸುವ ಹಾಗೆ ಇರುವ ಕಡಗ, ದನ ಎಮ್ಮೆ ತುಂಟಾಟ ಮಾಡದಿರಲೆಂದು ಮುಂಗಾಲುಗಳ ಮಧ್ಯೆ ದೊಂಟೆ ಅಥವಾ ಮರದ ತುಂಡು ಕಟ್ಟುವ ಹಾಗೆ, ಯುದ್ಧ ಭೂಮಿಯಿಂದ ಪಾರಾಗಲು ಓಡಿಹೋಗುವ ಅವಕಾಶ ಇಲ್ಲದ ಹಾಗೆ ಮಾಡುವ ತೊಡರು ಕಡಗ; ಬಿರಿದು=ಬಿರುದು; ಊಣೆಯ=ಊನವುಂಟುಮಾಡು; ತೊತ್ತು=ಸೇವಕಿ, ಗುಲಾಮಗಳು]
ಮುಂಗೈಯಲ್ಲಿ ವೀರ ಕಂಕಣ ಕಟ್ಟಿ ಮುಂಗಾಲಲ್ಲಿ ತೊಡರು ಬಾವುಲಿಯನ್ನು ಧರಿಸಿ, ಗಂಡುಡುಗೆಯನ್ನು ಉಟ್ಟ ವೀರ ಎಂಬ ಮಾತಿನ ಬಿರುದನ್ನು ನುಂಗಿದೆ. ನಾನು ಕಾದಾಟದಲ್ಲಿ ನಿಮ್ಮ ಆಜ್ಞೆಗೆ ಒಂದಿಷ್ಟು ಭಂಗ ಬರುವ ಹಾಗೆ ಮಾಡಿದರೆ ನಿಮ್ಮ ಮನೆಯ ಸೇವಕಿಯ ಮಗಳು ಕೂಡ ಅಲ್ಲ ನಾನು.
ಈ ವಚನವು ಭಕ್ತಿ ಮತ್ತು ಶೌರ್ಯವನ್ನು ಒಟ್ಟಿಗೆ ನೋಡುವ ರೀತಿ ಗಮನ ಸೆಳೆಯುತ್ತದೆ. ಬಸವವಚನದಲ್ಲಿ ಭಕ್ತಿಯು ಜೋಳವಾಳಿಯಲ್ಲ, ವೇಳೆವಾಳಿ [೧.೬೬೯], ಹೊಟ್ಟೆಯ ಪಾಡಿಗೆ ಸೈನಿಕ ಆದಂತಲ್ಲ, ಒಡೆಯನಿಗಾಗಿ ಆಯುಷ್ಯಪೂರ್ತಿ ಹೋರಾಡುವವನ ಹಾಗೆ ಭಕಿ ಅನ್ನುವ ಮಾತು ಬರುತ್ತದೆ. ಅಂಕ ಕಂಡಾ [೧.೭೨೯] ಎಂಬ ಬಸವ ವಚನದಲ್ಲಿ ಭಕ್ತನು ಯುದ್ಧಭೂಮಿಗೆ ಇಳಿದ ಸೈನಿಕನ ಹಾಗೆ ಎಂಬ ಮಾತಿದೆ. ಅಲಗಲಗು ಮೋಹಿಸಿದಲ್ಲದೆ [೧.೬೬೮] ಎಂಬ ಬಸವ ವಚನ ಭಕ್ತಿಯುದ್ಧದಲ್ಲಿ ದೇವರು ಭಕ್ತನ ಮೈಯ ಎಲುಬು ಕಾಣುವ ಹಾಗೆ ಸರಸವಾಡುತ್ತಾನೆ, ಸೈರಿಸಬೇಕು, ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು ಬೊಬ್ಬಿಟ್ಟಾಗ ಒಲಿಯುತ್ತಾನೆ ಕೂಡಲಸಂಗಮದೇವ [೧.೭೬೪] ಅನ್ನುವ ಇನ್ನೊಂದು ವಚನವಿದೆ. ಹೆಣ್ಣು ತಾನೇನೂ ಇಂಥ ಭಕ್ತಿ “ಪೌರುಷ”ಕ್ಕೆ ಕಡಮೆಯಲ್ಲ ಎಂದು ಹೇಳುವಂತೆ ಈ ವಚನವಿದೆ.
ʻಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದುʼ,ಬಸವವಚನ (೧.೩೭೫) ಉರಿಲಿಂಗದೇವ ಮತ್ತು ಗಜೇಶಮಸಣಯ್ಯನವರ ಅನೇಕ ವಚನಗಳಲ್ಲಿ ಮಾತನಾಡುತ್ತಿರುವ ಗಂಡು ನಿರೂಪಕರು ಹೆಣ್ಣಾಗಿ ಭಾವಿಸಿ ನುಡಿಯುವುದನ್ನು ಕೇಳುತ್ತದೆ. ಗಂಡು-ಹೆಣ್ಣು ಎಂಬ ಐಡೆಂಟಿಟಿಗಳನ್ನು ಪ್ರಶ್ನಿಸುವ ಧೋರಣೆ, ಅರ್ಧಗಂಡು ಅರ್ಧ ಹೆಣ್ಣು ಆಗಿರುವ ಅರ್ಧನಾರೀಶ್ವರ ಕಲ್ಪನೆ ಇವೆಲ್ಲ ಅಪರೂಪದ ಸಂಗತಿಗಳಾಗಿ, ನಮ್ಮ ದಿನ ನಿತ್ಯದ ಬದುಕಿನಲ್ಲಿ ನ್ನು ನಿಜವಾಗಿಲ್ಲದ ಆದರ್ಶವಾಗಿಯೇ ಉಳಿದಿವೆ.

