ನಿಮ್ಮ ಮತ್ತು ನಿಮ್ಮ ವ್ಯಕ್ತಿತ್ವದ ನಡುವೆ ಅಂತರವನ್ನು ಇಟ್ಟುಕೊಳ್ಳಿ.
ನಿಮ್ಮ ಎಲ್ಲ ಸಮಸ್ಯೆಗಳು ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದವು, ನಿಮಗಲ್ಲ.
ನಿಮಗೆ ಯಾವ ಸಮಸ್ಯೆಗಳಿಲ್ಲ ; ಯಾರಿಗೂ ಯಾವ ನಿಜವಾದ ಸಮಸ್ಯೆಗಳಿಲ್ಲ.
ಎಲ್ಲ ಸಮಸ್ಯೆಗಳೂ ವ್ಯಕ್ತಿತ್ವಕ್ಕೆ ಸಂಬಂಧಿಸಿದವು ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ಒಂದು ಕೆಲಸವನ್ನು ನೀವು ಮಾಡಲೇಬೇಕು, ಯಾವಾಗಲಾದರೂ ನಿಮಗೆ ಆತಂಕ ಅನಿಸುತ್ತಿದೆಯೆಂದರೆ, ನೆನಪಿಟ್ಟುಕೊಳ್ಳಿ ಅದು ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು. ನಿಮಗೆ ಆಯಾಸವಾಗುತ್ತಿದೆಯೆಂದರೆ, ನೆನಪಿರಲಿ ಅದು ನಿಮ್ಮ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು. ನೀವು ಗಮನಿಸುತ್ತಿರುವವರು ಮಾತ್ರ, ಕೇವಲ ಸಾಕ್ಷಿ. ನಿಮ್ಮ ಮತ್ತು ನಿಮ್ಮ ವ್ಯಕ್ತಿತ್ವದ ನಡುವೆ ಅಂತರ ಕಾಯ್ದುಕೊಳ್ಳಿ, ನೀವು ಬೇರೇನೂ ಮಾಡಬೇಕಿಲ್ಲ.
ಒಮ್ಮೆ ನಿಮ್ಮ ಮತ್ತು ನಿಮ್ಮ ವ್ಯಕ್ತಿತ್ವದ ನಡುವೆ ಅಂತರ ಇದೆಯೆಂದಾದರೆ, ಆತಂಕ ತಾನೇ ಕಾಣೆಯಾಗುತ್ತದೆ. ಯಾವಾಗ ಅಂತರ ಮರೆಯಾಗುತ್ತದೆಯೋ, ಯಾವಾಗ ನೀವು ಮತ್ತೇ ನಿಮ್ಮ ವ್ಯಕ್ತಿತ್ವಕ್ಕೆ ಹತ್ತಿರವಾಗುತ್ತೀರೋ ಆಗ ಆತಂಕ ಮತ್ತೆ ಕಾಣಿಸಿಕೊಳ್ಳುತ್ತದೆ. ಆತಂಕ, ನಿಮ್ಮ ವ್ಯಕ್ತಿತ್ವದ ಸಮಸ್ಯೆಗಳೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿದೆ. ಪ್ರಶಾಂತತೆ ಇಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ, ಅದು ನಿಮ್ಮ ವ್ಯಕ್ತಿತ್ವದ ಸಮಸ್ಯೆಗಳೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುತ್ತಿಲ್ಲ.
ಒಂದು ತಿಂಗಳು ಸುಮ್ಮನೇ ಗಮನಿಸಿ. ಏನೇ ಆದರೂ ದೂರ ನಿಲ್ಲಿ. ಉದಾಹರಣೆಗೆ, ನಿಮಗೆ ತಲೆನೋವು ಇದೆ. ಸುಮ್ಮನೇ ದೂರ ನಿಂತು ಈ ತಲೆನೋವನ್ನು ಗಮನಿಸುವ ಪ್ರಯತ್ನ ಮಾಡಿ. ಅದು ಎಲ್ಲೋ ನಿಮ್ಮ ದೇಹದ ಮೆಕ್ಯಾನಿಸಂ ನಲ್ಲಿ ಸಂಭವಿಸುತ್ತಿದೆ. ನೀವು ಎಲ್ಲೂ ದೂರ ಬೆಟ್ಟದ ಮೇಲೆ ಈ ಆಗುವಿಕೆಯನ್ನು (ತಲೆನೋವನ್ನು) ಗಮನಿಸುತ್ತಿದ್ದೀರಿ. ನಿಮ್ಮ ಮತ್ತು ತಲೆನೋವಿನ ನಡುವೆ ಜಾಗವನ್ನು ಸೃಷ್ಟಿಮಾಡಿಕೊಳ್ಳಿ. ಮತ್ತು ನಿಧಾನವಾಗಿ ಈ ಜಾಗವನ್ನು ವಿಸ್ತಾರ ಮಾಡಿಕೊಳ್ಳುತ್ತ ಹೋಗಿ. ಆಗ ಒಂದು ಬಿಂದುವಿನಲ್ಲಿ ಥಟ್ಟನೇ, ತಲೆನೋವು ಈ ಅಂತರದಲ್ಲಿ ಕಾಣೆಯಾಗಿ ಹೋಗಿದ್ದು ನಿಮ್ಮ ಅರಿವಿಗೆ ಬರುತ್ತದೆ.

