ಯಾವಾಗ ಅರಿವು ಬೆಳೆಯುತ್ತ ಹೋಗಿ ನೀವು ಸ್ಪಷ್ಟವಾಗಿ ಜಾಗೃತರಾಗುತ್ತೀರೋ ಆಗ ಸ್ವೀಕೃತಿ ( acceptance) ಎನ್ನುವುದು ಒಂದು ಸಹಜ ಫಲಿತಾಂಶ ಮಾತ್ರ… ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಸ್ವೀಕೃತಿ ಎನ್ನುವುದು ನಿಮ್ಮೊಳಗೆ ಅರಿವು ಹುಟ್ಟಿಕೊಂಡಿರುವುದರ ಪರಿಣಾಮ. ಅಸೂಯೆ ಇದೆ….. ಸುಮ್ಮನೇ ಗಮನಿಸಿ. ಮಹತ್ವಾಕಾಂಕ್ಷೆ ಇದೆ; ಸುಮ್ಮನೇ ಗಮನಿಸಿ. ಅಧಿಕಾರದ ಲಾಲಸೆ ಇದೆ; ಸುಮ್ಮನೇ ಗಮನಿಸಿ. ಈ ಪರಿಸ್ಥಿತಿಯಲ್ಲಿ ಸ್ವೀಕೃತಿ ಎಂದೆಲ್ಲ ತಲೆ ಕೆಡಿಸಿಕೊಂಡು ಸಂಗತಿಗಳನ್ನ ಕಾಂಪ್ಲಿಕೇಟ್ ಮಾಡಬೇಡಿ. ಏಕೆಂದರೆ ನೀವು ಸ್ವೀಕಾರ ಮಾಡುವ ಪ್ರಯತ್ನ ಮಾಡಿ ಅಕಸ್ಮಾತ್ ನಿಮಗೆ ಸ್ವೀಕಾರ ಮಾಡುವುದು ಆಗಲಿಲ್ಲವಾದರೆ, ಆಗ ನೀವು ಆ ಸಂಗತಿಗಳನ್ನು ನಿಮ್ಮೊಳಗೆ ಹತ್ತಿಕ್ಕಿಡಲು ಶುರು ಮಾಡುತ್ತೀರ. ಜನ ಸಂಗತಿಗಳನ್ನು ತಮ್ಮೊಳಗೆ ಹತ್ತಿಕ್ಕುವ ಪ್ರಕ್ರಿಯೆ ಶುರುವಾಗುವುದು ಹೀಗೆಯೇ. ತಮಗೆ ಸ್ವೀಕರಿಸಲು ಸಾಧ್ಯವಾಗದ ಸಂಗತಿಗಳನ್ನು ಅವರು ಕತ್ತಲಲ್ಲಿ ಮುಚ್ಚಿಡುತ್ತ ಹೋಗುತ್ತಾರೆ. ಆಗ ಅವರಿಗೆ ಸಮಾಧಾನವಾಗುತ್ತದೆ. ಆಗ ಅವರು ತಮ್ಮೊಳಗೆ ಯಾವ ಸಮಸ್ಯೆಯೂ ಇಲ್ಲ ಎಂದು ತಿಳಿದುಕೊಳ್ಳುತ್ತಾರೆ.
ಮೊದಲು, ಸ್ವೀಕೃತಿಯ ವಿಷಯ ಮರೆತುಬಿಡಿ. ಸುಮ್ಮನೇ ಆ ಸಂಗತಿಗಳ ಕುರಿತು ಅರಿವು ಬೆಳೆಸಿಕೊಳ್ಳಿ. ಯಾವಾಗ ಅರಿವು ಹೆಚ್ಚಾಗುತ್ತ ಹೋಗಿ ನೀವು ಸ್ಪಷ್ಟ ಜಾಗೃತಿಯನ್ನು ಹೊಂದುವಿರೋ ಆಗ, ಸ್ವೀಕಾರ ಎನ್ನುವುದು ಸಹಜ ಪರಿಣಾಮ ( consequence) ಮಾತ್ರ. ಒಮ್ಮೆ ಸಂಗತಿಯನ್ನು ಸ್ಪಷ್ಟವಾಗಿ ಗಮನಿಸಿದ ಮೇಲೆ ನೀವು ಅದನ್ನು ಸ್ವೀಕರಿಸಲ್ಬೇಕು. ಏಕೆಂದರೆ ಸ್ವೀಕೃತಿಯ ಹೊರತಾಗಿ ಬೇರೆ ಏನೂ ಸಾಧ್ಯವಿಲ್ಲ. ನೀವು ಬೇರೆ ಏನು ಮಾಡಬಹುದಿತ್ತು? ಸಂಗತಿ ನಿಮ್ಮ ಎದುರಿಗಿದೆ ನಿಮ್ಮ ಎರಡು ಕಣ್ಣುಗಳಂತೆ. ಅಲ್ಲಿ ನಾಲ್ಕು ಕಣ್ಣುಗಳಿಲ್ಲ, ಇರುವುದು ಎರಡೇ ಕಣ್ಣುಗಳು.
ಒಮ್ಮೆ ನೀವು ಸಂಗತಿಯನ್ನು ಸ್ವೀಕರಿಸಿದ ಮೇಲೆ, ಅದು ನಿಜವಾಗಿದ್ದರೆ ಮಾತ್ರ ಆ ಸ್ವೀಕೃತಿ ನಿಮ್ಮೊಳಗೆ ಉಳಿದುಕೊಳ್ಳುತ್ತದೆ. ಅದು ಸುಳ್ಳಾಗಿದ್ದರೆ ಕರಗಿ ಹೋಗಿಬಿಡುತ್ತದೆ. ಪ್ರೇಮ ಉಳಿದುಕೊಳ್ಳುತ್ತದೆ; ದ್ವೇಷ ಕರಗಿ ಹೋಗುತ್ತದೆ. ಅಂತಃಕರಣ ಉಳಿದುಕೊಳ್ಳುತ್ತದೆ; ಕ್ರೋಧ ಕರಗಿ ಹೋಗುತ್ತದೆ.
ಈ ಝೆನ್ ಕಥೆ ಗಮನಿಸಿ.
ಮೇಲಿನ ಸ್ಥಾನಕ್ಕೆ ಏರುತ್ತ ಡೋಜನ್ ಝೆಂಜಿ ಒಂದು ಘಟನೆಯ ಬಗ್ಗೆ ಹೇಳಿದರು,
ಝೆನ್ ಮಾಸ್ಟರ್ ಹೋಜನ್, ಮಾಸ್ಟರ್ ಕೈಶಿನ್ ಝೆಂಜಿಯ ಹತ್ತಿರ ಅಭ್ಯಾಸ ಮಾಡಿದ್ದ. ಒಮ್ಮೆ ಮಾಸ್ಟರ್ ಕೈಶಿನ್, ಹೋಜನ್ ನ ಕೇಳಿದ,
“ ಜೋಝಾ, ಎಲ್ಲಿಗೆ ಹೋಗುತ್ತಿದ್ದೀಯ? “
“ ನಾನು ತೀರ್ಥಯಾತ್ರೆ ಮಾಡುತ್ತಿದ್ದೇನೆ ಗೊತ್ತು ಗುರಿಯಿಲ್ಲದೆ. “ ಹೋಜನ್ ಉತ್ತರಿಸಿದ.
“ ನಿನ್ನ ತೀರ್ಥಯಾತ್ರೆಯ ಕಾರಣ ಏನು? “ ಮಾಸ್ಟರ್ ಕೈಶಿನ್ ಝೆಂಜಿ ಮತ್ತೆ ಕೇಳಿದ.
“ ನನಗೆ ಗೊತ್ತಿಲ್ಲ “ ಹೋಜನ್ ನ ಉತ್ತರ.
“ ಗೊತ್ತಿಲ್ಲ ಅನ್ನೋದು ಅತ್ಯಂತ ಆಪ್ತ ಕಾರಣ” ಮಾಸ್ಟರ್ ಕೈಶಿನ್ ಝೆಂಜಿಗೆ ತುಂಬ ಖುಶಿಯಾಯ್ತು.
ಕೈಶಿನ್ ಝೆಂಜಿಯ ಮಾತು ಕೇಳುತ್ತಿದ್ದಂತೆಯೇ, ಹೋಜನ್ ಗೆ ಜ್ಞಾನೋದಯವಾಯಿತು.

