ನಾವು ಯಾವಾಗಲೂ ಇನ್ನೊಬ್ಬರನ್ನು ಪ್ರೀತಿಸುವ ಬಗ್ಗೆ ಯೋಚಿಸುತ್ತಿರುತ್ತೇವೆ. ಗಂಡು, ಹೆಣ್ಣನ್ನು ಪ್ರೀತಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಹೆಣ್ಣು, ಗಂಡನ್ನು ಪ್ರೀತಿಸುವ ಕುರಿತು ವಿಚಾರಮಗ್ನಳಾಗಿರುತ್ತಾಳೆ. ತಾಯಿ ಮಗುವಿನ ಬಗ್ಗೆ ಮತ್ತು ಮಗು ತಾಯಿಯನ್ನು ಪ್ರೀತಿಸುವ ಬಗ್ಗೆ ಆಲೋಚನೆಯಲ್ಲಿ ಮಗ್ನ. ಗೆಳೆಯರು ಪರಸ್ಪರರನ್ನು ಪ್ರೀತಿಸುವ ಬಗ್ಗೆ ಯೋಚನೆಮಾಡುತ್ತಿರುತ್ತಾರೆ. ಆದರೆ ನಿಮ್ಮನ್ನು ನೀವು ಪ್ರೀತಿಸಿಕೊಳ್ಳದೇ ಹೋದರೆ, ಬೇರೆ ಯಾರನ್ನು ಪ್ರೀತಿಸುವುದೂ ನಿಮಗೆ ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
‘ಪ್ರೇಮದ ಹುಡುಕಾಟ’ ಕ್ಕೆ
ನಮ್ಮನ್ನು ಪೂರ್ಣವಾಗಿ ಪರಿವರ್ತನೆ ಮಾಡುವ ಶಕ್ತಿಯಿದೆ.
ಈ ಹುಡುಕಾಟದ ಹಾದಿಯಲ್ಲಿ ಪಕ್ವಗೊಳ್ಳದ
ಯಾವ ಸಾಧಕನ ಬಗ್ಗೆಯೂ
ನನಗೆ ಗೊತ್ತಿಲ್ಲ.
ಪ್ರೇಮದ ದಾರಿಯಲ್ಲಿ ನೀವು
ಮೊದಲ ಹೆಜ್ಜೆ ಇಟ್ಟ ಕ್ಷಣದಲ್ಲಿಯೇ
ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ
ನಿಮ್ಮ ಒಳಗೂ ಮತ್ತು ಹೊರಗೂ.
~ ಶಮ್ಸ್
ನಿಮ್ಮೊಳಗೆ ಪ್ರೀತಿ ಇದ್ದಾಗ ಮಾತ್ರ ನೀವು ಇನ್ನೊಬ್ಬರನ್ನು ಪ್ರೀತಿಸಬಹುದು. ನಿಮ್ಮ ಬಳಿ ಇದ್ದಾಗ ಮಾತ್ರ ನೀವು ಇನ್ನೊಬ್ಬರಿಗೆ ಹಂಚಬಹುದು. ಆದರೆ ಇಡೀ ಮಾನವ ಜನಾಂಗ, ತಾನು ತನ್ನನ್ನು ಪ್ರೀತಿಸಿಯೇ ಪ್ರೀತಿಸುತ್ತೇನೆ, ಈಗ ನಾವು ಇನ್ನೊಬ್ಬರನ್ನು ಪ್ರೀತಿಸುವತ್ತ ಯೋಚನೆ ಮಾಡಬೇಕು ಎನ್ನುವ ತಪ್ಪು ತಿಳುವಳಿಕೆಯಲ್ಲಿ ಮುಳುಗಿದೆ. ನಮ್ಮ ನೆರೆಯವರನ್ನು ಪ್ರೀತಿಸುವುದು ಮಾತ್ರ ನಮ್ಮ ಜವಾಬ್ದಾರಿ ಎನ್ನುವ ತಿಳುವಳಿಕೆಯನ್ನು ನಾವು ತಲೆಯಲ್ಲಿ ತುಂಬಿಕೊಂಡುಬಿಟ್ಟಿದ್ದೇವೆ. ಆದರೆ ನಮ್ಮನ್ನು ನಾವು ಪ್ರೀತಿಸಿಕೊಳ್ಳದೇ ಇನ್ನೊಬ್ಬರನ್ನು ಪ್ರೀತಿಸುವುದು ಅಸಾಧ್ಯ. ಆದ್ದರಿಂದಲೇ ಪ್ರೀತಿಯ ಬಗ್ಗೆ ಜಗತ್ತಿನಲ್ಲಿ ಇಷ್ಟೆಲ್ಲ ಮಾತುಗಳು, ಮತ್ತು ಜಗತ್ತಿನ ತುಂಬ ದ್ವೇಷ, ಯುದ್ಧ, ಹಿಂಸೆ ಮತ್ತು ಕ್ರೋಧ.
ನಮ್ಮನ್ನು ನಾವು ಪ್ರೀತಿಸುವುದಿಲ್ಲ ಎನ್ನುವುದು ದೊಡ್ಡ ತಿಳುವಳಿಕೆ. ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು ಬಹಳ ಕಷ್ಟ ಏಕೆಂದರೆ, ನಮ್ಮನ್ನು ಖಂಡಿಸಿಕೊಳ್ಳುವುದನ್ನ ನಮಗೆ ಮೊದಲಿನಿಂದಲೂ ಕಲಿಸಲಾಗಿದೆ. ನಾವು ಪಾಪಿಗಳು ಎನ್ನುವುದನ್ನ ಮುಂಚಿನಿಂದಲೂ ನಮ್ಮ ತಲೆಯಲ್ಲಿ ತುಂಬಲಾಗಿದೆ. ಆದ್ದರಿಂದ ನಮ್ಮನ್ನು ಪ್ರೀತಿಸಿಕೊಳ್ಳುವುದು ಬಹಳ ಕಷ್ಟ. ನಮಗೆ ಬೆಲೆಯಿಲ್ಲ ಎಂದು ನಾವು ತಿಳಿದುಕೊಂಡಿರುವಾಗ, ಬೆಲೆಯಿಲ್ಲದವರನ್ನು ನಾವು ಪ್ರೀತಿಸುವುದಾದರೂ ಹೇಗೆ?
ಆದರೆ ಆ ದಿನ ಬಂದೇ ಬರುತ್ತದೆ. ನಮ್ಮನ್ನು ನಾವು ಪ್ರೀತಿಸುವುದಿಲ್ಲ ಎನ್ನುವ ಒಳನೋಟ ನಮಗೆ ಪ್ರಾಪ್ತವಾದಾಗ, ಗಾಬರಿಯಾಗುವ ಕಾರಣವಿಲ್ಲ, ಆಗ ಕಿಟಕಿಯ ಒಂದು ಬಾಗಿಲು ತೆರೆದಂತೆ. ಇನ್ನು ಬಹಳ ಸಮಯ ನೀವು ಕೋಣೆಯಲ್ಲಿರುವುದು ಸಾಧ್ಯವಿಲ್ಲ. ನೀವು ಕಿಟಕಿ ಹಾರಿ ಹೊರಗೆ ಬರುತ್ತೀರಿ. ಮುಕ್ತ ಆಕಾಶದ ಬಗ್ಗೆ ನಿಮಗೆ ಒಮ್ಮೆ ಗೊತ್ತಾಯಿತೆಂದರೆ, ನೀವು ನಿರಸ ಜಗತ್ತಿನ ಬಂಧನದಲ್ಲಿ ಬಹುಕಾಲ ಇರುವುದಿಲ್ಲ. ಎಲ್ಲ ಬಂಧನಗಳನ್ನು ಬಿಡಿಸಿಕೊಂಡು ನೀವು ಹೊರಗೆ ಬಂದು ಬಿಡುತ್ತೀರಿ.

