ನಿಶ್ಚಿಂತೆ : ಅಕ್ಕ ಮಹಾದೇವಿ #36

 ಕಂಸದಲ್ಲಿರುವ ಮಾತು ತಾವು ವರ್ಣಿಸುತ್ತಿರುವ ಸಂದರ್ಭಕ್ಕೆ ಹೊಂದುವ ಹಾಗೆ ಶೂನ್ಯಸಂಪಾದನೆಕಾರರು ಸೇರಿಸಿರುವ ಮಾತು ಅನ್ನಿಸುತ್ತದೆ. ಆ ಮಾತು ಇಲ್ಲದೆಯೂ ವಚನದ ಅರ್ಥ ಸ್ಪಷ್ಟವಾಗುತ್ತದೆ... ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ ; ಭಾಗ 3, ಬದುಕೆಂಬ ಪ್ರಸಾದ

ಹೆದರದಿರು ಮನವೆ
ಬೆದರದಿರು ತನುವೆ
ನಿಜವನರಿತು ನಿಶ್ಚಿಂತನಾಗಿರು
ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ
ಎಲವದಮರನ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬೈವರೊಂದುಕೋಟಿ,
ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ
[ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ]
ಚೆನ್ನಮಲ್ಲಿಕಾರ್ಜುನಾ [೪೩೦]

[ಹೆದರು=ಸನ್ನಿವೇಶವೊಂದಕ್ಕೆ ತೋರುವ ಪ್ರತಿಕ್ರಿಯೆ, (ಫಿಯರ್);‌ ಬೆದರು=ಅಪಾಯವಾದೀತೆಂಬ ನಿರೀಕ್ಷೆಯಲ್ಲಿ ಹುಟ್ಟುವ ಭಾವ, ಮನಸ್ಸು ಚೆದುರಿ ಹೋಗುವ ಸ್ಥಿತಿ; ಎಲವ=ಬೂರುಗದ ಮರ;]

ಮನಸು ಹೆದರಬಾರದು, ದೇಹ ಬೆದರಬಾರದು. ಯಾಕೆಂದರೆ ನಿಜವನ್ನು ಅರಿತು ನಿಶ್ಚಿಂತವಾಗಿರಬೇಕು. ನಿಜವೇನೆಂದರೆ ಹಣ್ಣಿರುವ ಮರಕ್ಕೆ ಕಲ್ಲಿನಲ್ಲಿ ಹೊಡೆಯುತ್ತಾರೆ, ಹಣ್ಣು ಬಿಡದ ಬೂರುಗದ ಮರಕ್ಕೆ ಯಾರೂ ಹೊಡೆಯುವುದಿಲ್ಲ. ಭಕ್ತಿ ಇರುವವರನ್ನು ಕೋಟಿ ಜನ ಬಹಳ ಜನ ಬೈಯುತ್ತಾರೆ, ಭಕ್ತಿ ಇಲ್ಲದವರನ್ನು ಬೈಯುವವರು ಒಬ್ಬರೂ ಕಾಣುವುದಿಲ್ಲ. ಹೀಗಿರುವಾಗ ಲೋಕದ ಸತ್ಯ ಗೊತ್ತಾದ ಮೇಲೆ ಹೆದರಿಕೆ, ಬೆದರಿಕೆ ಇರಬಾರದು.

ಲೋಕ ಹೀಗಿರುವುದು ನಮಗೆ ದೊರೆತಿರುವ ಪ್ರಸಾದ. ಅದು ಇರುವ ಹಾಗೆ ಒಪ್ಪಬೇಕು. ಹೆದರುವುದು, ನಿಂದೆ ಬರುತ್ತದೆಂಬ ನಿರೀಕ್ಷೆಯಲ್ಲಿ ಬೆದರುವುದು ಬೇಕಿಲ್ಲ. ಹಣ್ಣು ಕೊಡುವ ಮರಕ್ಕೆ ಕಲ್ಲು ಎಸೆಯುವುದು, ಭಕ್ತರನ್ನು ಬೈಯುವುದು ಸಹಜವಾಗಿ ನಡೆಯುವ ಕೆಲಸ. ಅಂದರೆ ಸ್ವಾರ್ಥದ ಅಪೇಕ್ಷೆ ಎಲ್ಲೆಲ್ಲೂ ಇರುವುದರಿಂದ ಇಂಥ ವರ್ತನೆ ಹೀಗೇ ಇರುತ್ತದೆ. ಹೆದರಿದರೆ, ಬೆದರಿದರೆ ಸತ್ಯ ಬದಲಾಗದು. ಈ ವಚನವನ್ನು ಹೇಳುತ್ತಿರುವ ಮನಸ್ಸು ಸತ್ಯವನ್ನು ಒಪ್ಪಿದ, ಆ ಕಾರಣದಿಂದಲೇ ನಿಶ್ಚಿಂತವಾದ ಮನಸ್ಸು ಅನ್ನಿಸುತ್ತದೆ.

ಕಂಸದಲ್ಲಿರುವ ಮಾತು ತಾವು ವರ್ಣಿಸುತ್ತಿರುವ ಸಂದರ್ಭಕ್ಕೆ ಹೊಂದುವ ಹಾಗೆ ಶೂನ್ಯಸಂಪಾದನೆಕಾರರು ಅಥವಾ ಕೆಲವು ಶತಮಾನಗಳ ನಂತರ ವಚನಗಳನ್ನು  ಧಾರ್ಮಿಕ ಪಠ್ಯಗಳಾಗಿ ನೋಡುವ ಮನಸುಗಳು ಸೇರಿಸಿರುವ ಮಾತು ಅನ್ನಿಸುತ್ತದೆ. ಯಾಕೆಂದರೆ ಭಕ್ತಿ, ಶರಣ ಇಂಥ ಪಾರಿಭಾಷಿಕ ಅನಿಸುವಂಥ ಮಾತುಗಳನ್ನು ಅಕ್ಕ ಬಳಸಿ ಮಾತಾಡಿರಬಹುದು ಅನಿಸದು. ಒಲುಮೆಯ ಬಗ್ಗೆ ಮತಾಡವು ಮನಸು ಇದ್ದಕಿದ್ದಂತೆ ಭಕ್ತಿ, ಶರಣ ಅನ್ನುವ ತತ್ವಗಳ ಬಗ್ಗೆ ಮಾತಾಡುವುದು ಅಸಾಧ್ಯವಲ್ಲದಿದ್ದರೂ ಸಂಭವನೀಯ ಅನಿಸದು.  ಆ ಮಾತುಗಳಿಲ್ಲದೆಯೂ ವಚನದ ಅರ್ಥ ಸ್ಪಷ್ಟವಾಗುತ್ತದೆ. ಆ ಸಾಲುಗಳನ್ನು ಸೇರಿಸಿ ಓದಿದರೆ ಶಿವನ ಶರಣರ ನುಡಿಯೇ ನನಗೆ ಗತಿ, ಅದೇ ನಾನು ಏರಬೇಕಾದ ಮೆಟ್ಟಿಲು ಅನ್ನುವ ಅರ್ಥ ಬರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.