ನಿಜವಾದ ಸಂತೃಪ್ತಿ ಇರುವುದು ಬುದ್ಧತ್ವದಲ್ಲಿ ಮಾತ್ರ ; ಬಾಕಿ ಎಲ್ಲ ಸಂತೃಪ್ತಿಗಳು ಕೇವಲ ನಮ್ಮ ಮೈಂಡ್ ಸೃಷ್ಟಿಸಿರುವ ಭ್ರಮೆಗಳು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭೂತ ಕಾಲದ ವಿಷಯ
ವ್ಯಾಖ್ಯಾನಕ್ಕೆ ಮಾತ್ರ ಯೋಗ್ಯ ,
ಭವಿಷ್ಯದ ನಿರೀಕ್ಷೆಗಳು
ಭ್ರಮೆಯ ಭಾಗ.
ಭೂತದಿಂದ ಭವಿಷ್ಯಕ್ಕೆ
ಕಾಲದ ಮೂಲಕ ಸಾಗುವ
ಜಗತ್ತಿನ ಪಯಣ
ಸರಳ ರೇಖೆಯಲ್ಲಲ್ಲ
ಬದಲಾಗಿ
ಕಾಲದ ಚಲನೆ
ನಮ್ಮ ಮೂಲಕ, ನಮ್ಮೊಳಗೆ
ಕೊನೆಯಿಲ್ಲದ ಸುರುಳಿಯಾಕಾರದ
ದಿವ್ಯ ಪಥದಲ್ಲಿ.
ಶಾಶ್ವತ ಎಂದರೆ ಅನಂತ ಕಾಲವಲ್ಲ,
ಬದಲಾಗಿ ಶಾಶ್ವತ
ಕಾಲದ ಪರಿವೆಯೇ ಇಲ್ಲದ್ದು.
ಭೂತ, ಭವಿಷ್ಯಗಳನ್ನು
ಬುದ್ಧಿಯ ಪರೀಧಿಯಿಂದ ಹೊರಗಿಟ್ಟು
ವರ್ತಮಾನದ ಕ್ಷಣಗಳಲ್ಲಿ
ಬದುಕು ಸಾಧ್ಯವಾದಾಗ
ಶಾಶ್ವತದ ಬೆಳಕು
ಒಳಗೆ ಇಳಿಯುವುದು
~ ಶಮ್ಸ್
ನಿರಂತರವಾಗಿ ಅತೃಪ್ತಿಯಲ್ಲಿ ಬದುಕುವುದು ಬಹಳ ಕಷ್ಟಕರ ಎಂದೇ ನಮ್ಮ ಮೈಂಡ್ ಸಂತೃಪ್ತಿಯ ಭ್ರಮೆಗಳನ್ನು ಸೃಷ್ಟಿಸುತ್ತದೆ ; ಈ ಭ್ರಮೆಗಳು ಜನರನ್ನು ಸಂತೈಸುತ್ತ ಮುಂದೆ ಕರೆದುಕೊಂಡು ಹೋಗುತ್ತವೆ. ಎಲ್ಲ ಭ್ರಮೆಗಳನ್ನು ತೆಗೆದುಹಾಕಿಬಿಟ್ಟರೆ ಮನುಷ್ಯನಿಗೆ ಒಂದು ಕ್ಷಣ ಕೂಡ ಹೆಚ್ಚು ಬದುಕುವ ಕಾರಣ ಸಿಗುವುದಿಲ್ಲ. ಇವು ಬೇಕು. ಅರಿವಿನ ಅನುಪಸ್ಥಿತಿಯಲ್ಲಿ ನಮಗೆ ಭ್ರಮೆಗಳು ಬೇಕು, ಏಕೆಂದರೆ ಇವುಗಳ ಮೂಲಕವೇ ನಾವು ಬದುಕಿಗೆ ಸುಳ್ಳು ಅರ್ಥಗಳನ್ನು ಆರೋಪಿಸುತ್ತ ನಮಗೆ ನಿಜವಾದ ಅರಿವು ಸಿಗುವ ತನಕ ಬದುಕನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಈ ಸುಳ್ಳು ಅರ್ಥಗಳನ್ನು ನಾವು ಸೃಷ್ಟಿಸಿಕೊಳ್ಳದೇ ಹೋದರೆ ಅರಿವು ಸಿಗುವ ತನಕ ನಾವು ಬದುಕುವುದು ಕಷ್ಟವಾಗಿಬಿಡುತ್ತದೆ. ಒಂದು ಸುಳ್ಳು ಅರ್ಥದಿಂದ ನಮಗೆ ತೃಪ್ತಿಯಾಗದೇ ಹೋದರೆ ನಾವು ಇನ್ನೊಂದು ಸುಳ್ಳು ಅರ್ಥವನ್ನು ಕಟ್ಟಿಕೊಳ್ಳುತ್ತೇವೆ. ನಮಗೆ ಹಣ ಬೇಸರ ಮೂಡಿಸಿದಾಗ, ನಾವು ರಾಜಕೀಯಕ್ಕೆ ಬರುತ್ತೇವೆ. ರಾಜಕೀಯ ಸಾಕು ಎನಿಸಿದಾಗ ಇನ್ನೊಂದನ್ನು ಅಪ್ಪಿಕೊಳ್ಳುತ್ತೇವೆ. ಸೋ ಕಾಲ್ಡ್ ಧರ್ಮ ಕೂಡ ಒಂದು ಬಗೆಯ ಸೂಕ್ಷ್ಮ ಭ್ರಮೆ.
ನಿಜವಾದ ಧರ್ಮಕ್ಕೂ ಈ ಸೋಕಾಲ್ಡ್ ಧರ್ಮಗಳಾದ, ಹಿಂದೂ, ಮುಸ್ಲೀಂ, ಕ್ರಿಶ್ಚಿಯಾನಿಟಿಗೂ ಯಾವ ಸಂಬಂಧವಿಲ್ಲ. ನಿಜವಾದ ಧರ್ಮ ಎಲ್ಲ ಥರದ ಭ್ರಮೆಗಳನ್ನ ಒಡೆದು ನುಚ್ಚು ನೂರು ಮಾಡುತ್ತದೆ. ನಿಜದ ಧರ್ಮ, ನಮಗೆ ಅತೃಪ್ತಿಯಲ್ಲಿ ಬದುಕುವುದನ್ನ, ಆಳವಾದ ನೋವನ್ನ, ತೀವ್ರವಾದ ಬಳಲಿಕೆಯನ್ನ ಬದುಕುತ್ತ ನಿಜದ ಸತ್ಯವನ್ನು ಅನ್ವೇಷಿಸುವುದನ್ನ ಕಲಿಸುತ್ತದೆ.
ಸತ್ಯದ ಹುಡುಕಾಟದ ಹಾದಿ ಅಪಾರ ಯಾತನಾಮಯವಾದದ್ದು, ಕೆಲವರಿಗೆ ಮಾತ್ರ ಸಾಧ್ಯ ಈ ದಾರಿಯ ಪಯಣ. ಮೊಟ್ಟ ಮೊದಲು ಜನ ತಮ್ಮ ಬದುಕಿನ ಹಾದಿಯಲ್ಲಿ ಯಾತನೆಯನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ, ಆದರೆ ಈ ಯಾತನೆಯೇ ಬೆಳವಣಿಗೆಯ ಮೂಲ ಸ್ರೋತ. ಎಲ್ಲದರ ಬೆತ್ತಲೆ ಸತ್ಯವನ್ನು ಅದನ್ನು ಅವೊಯಿಡ್ ಮಾಡದೇ, ಅದರಿಂದ ತಪ್ಪಿಸಿಕೊಳ್ಳದೇ, ಆಳವಾಗಿ ಗಮನಿಸುವುದು ಜ್ಞಾನಪ್ರಾಪ್ತಿಯ ಶುರುವಾತು, ಮೈಂಡಫುಲ್ ನೆಸ್ ನ ಶುರುವಾತು, ಅರಿವಿನ ಹಾದಿಯ ಶುರುವಾತು.
ಅಪ್ಪನೊಬ್ಬ ಮಗಳ ಪೇಂಟಿಂಗ್ ಸ್ಕಿಲ್ ಬಗ್ಗೆ ತುಂಬ ಬಡಿವಾರದಿಂದ ಮಾತನಾಡುತಿದ್ದ.
“ ಇದು ನನ್ನ ಮಗಳು ಮಾಡಿದ ಸೂರ್ಯಾಸ್ತದ ಪೇಂಟಿಂಗ್ ನಸ್ರುದ್ದೀನ್, ಆಕೆ ಪ್ಯಾರಿಸ್ ಲ್ಲಿ ಪೇಂಟಿಂಗ್ ಕಲಿತಿದ್ದು. “
“ ಅದೇ ಅಂದ್ಕೊಂಡೆ, ಈ ಥರದ ಸೂರ್ಯಾಸ್ತ ಈ ದೇಶದಲ್ಲಿ ನಾನೆಂದೂ ನೋಡಿಲ್ಲ “
ನಸ್ರುದ್ದೀನ್ ಉತ್ತರಿಸಿದ.

