ಹೃದಯದಲ್ಲಿ, ಒಳಗೆ ನೆಲೆಯಾಗಿರುವ ಶುದ್ಧತೆಯನ್ನು ಭ್ರಷ್ಟಗೊಳಿಸುವುದು ಸಾಧ್ಯವಿಲ್ಲ ; ಹೊರಗೆ ನೀವು ಏನೇ ಮಾಡಿದರೂ ಒಳಗೆ ಅದರ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತ
ಸದಾ ನಮ್ಮ ಕೆಲಸದಲ್ಲಿಯೇ ಮಗ್ನ.
ಮನುಷ್ಯನ ವಿಕಾಸ ಯಾವತ್ತಿದ್ದರೂ
ಪ್ರಗತಿಯಲ್ಲಿರುವ ಪ್ರಕ್ರಿಯೆ.
ಕೆಲಸ ನಿಧಾನವಾಗಿರಬಹುದು
ಆದರೆ ಮುಂದುವರೆಯುತ್ತಿದೆ ನಿರಂತರವಾಗಿ.
ಪ್ರತಿಯೊಬ್ಬ ಮನುಷ್ಯನೂ
ಪೂರ್ಣವಾಗಲು
ಕಾಯುತ್ತಿರುವ, ತಹತಹಿಸುತ್ತಿರುವ
ಅಪೂರ್ಣ ಕಲಾಕೃತಿಗಳು.
ಭಗವಂತ
ಪ್ರತೀ ಮನುಷ್ಯನನ್ನು
ಪ್ರತ್ಯೇಕ ಕಲಾಕೃತಿಯಂತೆ
ಅನನ್ಯವಾಗಿ ಚಿತ್ರಿಸುತ್ತಾನೆ.
ಮನುಷ್ಯತ್ವ
ಒಂದು ಸೂಕ್ಷ್ಮ ಕಲಾಪ್ರಕಾರ,
ಪ್ರತೀ ಚುಕ್ಕೆಯೂ
ಪೂರ್ಣ ಚಿತ್ರದ ಅತ್ಯಂತ ಮುಖ್ಯ ಭಾಗ.
~ ಶಮ್ಸ್
ಅತ್ಯಂತ ಪರಮ ಪಾಪಿಗಳೂ ತಮ್ಮ ಅಸ್ತಿತ್ವದ ಆಳದಲ್ಲಿ ಶುದ್ಧರಾಗಿಯೇ ಉಳಿದುಕೊಂಡಿರುತ್ತಾರೆ. ಆದ್ದರಿಂದ ಪರಮ ಪಾಪಿಯೂ ಸಂತನಾಗಿಯೇ ಇರುತ್ತಾನೆ; ಪಾಪ ಅವನ ಮೇಲ್ಮೈಯನ್ನು ಮಾತ್ರ ಮುಟ್ಟಿರುತ್ತದೆ. ಅದು ಅವನ ಆಳ ತಿರುಳನ್ನು ಪ್ರವೇಶ ಮಾಡುವುದಿಲ್ಲ, ಏಕೆಂದರೆ ಅವನ ಮಾಡುವಿಕೆಯೆಲ್ಲ ಮೇಲ್ಮೈ ಮಟ್ಟದಲ್ಲಿ ಮಾತ್ರ ಉಳಿದುಕೊಂಡಿರುತ್ತದೆ; ಅಸ್ತಿತ್ವ ನೆಲೆಯಾಗಿರುವುದು ಅವನ ಆಳ ತಿರುಳಿನಲ್ಲಿ.
ಯಾವಾಗ ನೀವು ಜನರ ಅಸ್ತಿತ್ವವನ್ನು ಗಮನಿಸಲು ಶುರು ಮಾಡುತ್ತೀರೋ ಆಗ ನಿಮಗೆ ಯಾರೂ ಪಾಪಿಗಳಲ್ಲ, ಯಾರೂ ಯಾವತ್ತೂ ಪಾಪಿಗಳಾಗಿರಲೇ ಇಲ್ಲ. ಇದು ಅಸಾಧ್ಯ. ಶುದ್ಧತೆ ಎನ್ನುವುದು ಎಷ್ಟು ಪರಿಪೂರ್ಣ ಎಂದರೆ ನಮ್ಮ ಮಾಡುವಿಕೆಯಲ್ಲಿರುವುದು ಕನಸುಗಳಿಗಿಂತ ಹೆಚ್ಚೇನಲ್ಲ ; ಇದು ಪೌರ್ವಾತ್ಯರ ಅಪ್ರೋಚ್. ನಿಮ್ಮ ಮಾಡುವಿಕೆಯ ಬಗ್ಗೆ ಪೌರ್ವಾತ್ಯರ ಅಪ್ರೋಚ್ ತಲೆಕೆಡಿಸಿಕೊಳ್ಳುವುದೇ ಇಲ್ಲ. ಅದರ ಪ್ರಕಾರ ನೀವು ಏನೇ ಮಾಡಿದರೂ, ನೀವು ನಿಮ್ಮ ಆಳವನ್ನು ತಲುಪಿ ನಿಮ್ಮ ಅಸ್ತಿತ್ವದೊಂದಿಗೆ ಸಂಪರ್ಕ ಇಟ್ಟುಕೊಳ್ಳಬಹುದು., ಅದು ಯಾವಾಗಲೂ ಸ್ಫಟಿಕದಷ್ಟು ಸ್ಪಷ್ಟವಾಗಿಯೇ ಇರುತ್ತದೆ, ಯಾವಾಗಲೂ ಶುದ್ಧ, ಯಾವತ್ತೂ ಮಾಲಿನ್ಯರಹಿತವಾಗಿರುತ್ತದೆ. ಆದರೆ ನಿಮ್ಮ ಮೇಲ್ಮೈಯಲ್ಲಿ ಮಾತ್ರ ಸಂತ-ಪಾಪಿ, ಒಳ್ಳೆಯವ-ಕೆಟ್ಟವ ಮುಂತಾದ ಚೆಹರೆಗಳು, ನಾಟಕ ನಡೆಯುತ್ತಿದೆಯೇನೋ ಎನ್ನುವಂತೆ. ಯಾರೋ ಒಬ್ಬರು ಜೀಸಸ್ ಆಗಿದ್ದರೆ ಇನ್ನೊಬ್ಬರು ಯಾರೋ ಜುದಾಸ್ ಆಗಿದ್ದಾರೆ. ಇಬ್ಬರೂ ಬೇಕು : ಜೀಸಸ್ ಇಲ್ಲದೇ ಜುದಾಸ್ ಇರುವುದು ಸಾಧ್ಯವಿಲ್ಲ, ಮತ್ತು ಜುದಾಸ್ ತಾನೇ ಏನು ಮಾಡುತ್ತಾನೆ ಜೀಸಸ್ ಇಲ್ಲದೆ. ಕ್ರಿಸ್ತ ಕಥೆ ಸಂಭವಿಸಲು ಈ ಇಬ್ಬರೂ ಬೇಕೇ ಬೇಕು. ಆದರೆ ಪರದೆಯ ಹಿಂದೆ ಇಬ್ಬರೂ ಜೊತೆಯಾಗಿ ಕುಳಿತು ಚಹಾ ಕುಡಿಯುತ್ತಾರೆ, ಸಿಗರೇಟು ಸೇದುತ್ತಾರೆ.
ಇದು ವಾಸ್ತವ. ಇಡೀ ಜಗತ್ತು ಒಂದು ವಿಶಾಲ ರಂಗಮಂಚ, ಮತ್ತು ಇಲ್ಲಿ ಒಂದು ಮಹಾ ನಾಟಕವನ್ನು ಆಡಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಚಿಂತೆ ಮಾಡಬೇಡಿ. ನಿಮಗೆ ಯಾವ ಪಾತ್ರವನ್ನು ನೀಡಲಾಗಿದೆಯೇ ಆ ಪಾತ್ರವನ್ನು ಸಾಧ್ಯವಾದಷ್ಟು ಆನಂದದಲ್ಲಿ ಅಭಿನಯಿಸಿ ಮತ್ತು ನಿಮಗೆ ನೆನಪಿರಲಿ ಹೊರಗೆ ಏನೇ ಇದ್ದರೂ, ಆಳದಲ್ಲಿ ಮಾತ್ರ ನೀವು ಪರಮ ಪವಿತ್ರ.
ಒಂದು ದಿನ ಯಾರೋ ಒಬ್ಬ ಜುವಾಂಗ್ ತ್ಸು ನ ಹತ್ತಿರ ಬಂದು ಶಹರದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ವ್ಯಕ್ತಿಯ ಬಗ್ಗೆ ವಿಷಯ ತಿಳಿಸಿ ಅವನನ್ನು ಹಲವಾರು ಬಗೆಯಲ್ಲಿ ನಿಂದಿಸಿದ,
“ ಅವನೊಬ್ಬ ಪಾಪಿ, ಬಹಳ ಕೆಟ್ಟ ಮನುಷ್ಯ, ದೊಡ್ಡ ಕಳ್ಳ “
ಎಲ್ಲವನ್ನು ಕೇಳಿಸಿಕೊಂಡ ಮೇಲೆ ಜುವಾಂಗ್ ತ್ಸು ಉತ್ತರಿಸಿದ, “ ಅವ ಅದ್ಭುತವಾಗಿ ಕೊಳಲು ನುಡಿಸುತ್ತಾನೆ “
ಅಷ್ಟರಲ್ಲೇ ಇನ್ನೊಬ್ಬ ಮನುಷ್ಯ ಹೇಳಿದ, “ ಅವನು ಹಾಡು ಕೂಡ ಅದ್ಭುತವಾಗಿ ಹಾಡುತ್ತಾನೆ “
ಜುವಾಂಗ್ ತ್ಸು ತಕ್ಷಣ ಉತ್ತರಿಸಿದ, “ ಆದರೆ ಆ ಮನುಷ್ಯ ದರೋಡೆ ಖೋರ “
ಜುವಾಂಗ್ ತ್ಸು ನ ಪ್ರತಿಕ್ರಿಯೆ ಕೇಳಿ ಆ ಇಬ್ಬರೂ ಆಶ್ಚರ್ಯಚಕಿತರಾಗಿ ಕೇಳಿದರು “ ನೀನು ಏನನ್ನ ಹೇಳಲು ಬಯಸುತ್ತಿದ್ದೀಯ? “
“ ನಾವು ಕೇವಲ ಸಮತೋಲನ ಸಾಧಿಸುವ ಪ್ರಯತ್ನ ಮಾಡುತ್ತಿದ್ದೇನೆ – ಅವನ ಬಗ್ಗೆ ತೀರ್ಮಾನ ಹೇಳಲು ನಾನು ಯಾರು ? ಅವನು ಕಳ್ಳನೂ ಹೌದು, ಅದ್ಭುತ ಕೊಳಲುವಾದಕನೂ ಹೌದು. ನನಗೆ ಅವನು ಸ್ವೀಕಾರಾರ್ಹನೂ ಅಲ್ಲ ನಿರಾಕರಿಸಲು ಯೋಗ್ಯನೂ ಅಲ್ಲ. ಅವನ ಬಗ್ಗೆ ನನಗೆ ಆಯ್ಕೆಗಳಿಲ್ಲ. ಅವನ ಬಗ್ಗೆ ವಿಪರೀತದ ತೀರ್ಮಾನಗಳನ್ನು ಹೇಳುವುದು ನನಗೆ ಅಸಾಧ್ಯ. ನನಗೆ ಅವನು ಒಳ್ಳೆಯವನೂ ಅಲ್ಲ, ಕೆಟ್ಚವನೂ ಅಲ್ಲ. ಅವನು, ಅವನ ಹಾಗಿದ್ದಾನೆ ಮತ್ತು ಅದು ಅವನ ವ್ಯವಹಾರ. ನೀವು ಕೇಳಿದಾಗ ನಾನು ಏನೋ ಹೇಳಬೇಕಿತ್ತು ಹಾಗಾಗಿ ನಾನು ಸಮತೋಲನ ಸಾಧಿಸುವ ಪ್ರಯತ್ನ ಮಾಡಿದೆ “ ಜುವಾಂಗ್ ತ್ಸು ತನ್ನ ಪ್ರತಿಕ್ರಿಯೆಗೆ ಸಮಜಾಯಿಶಿ ನೀಡಿದ.
****************************

