ಕತ್ತಲೆಯಲ್ಲಿ ಕನ್ನಡಿಯ ಕಂಡು ಕಳವಳ : ಅಕ್ಕ ಮಹಾದೇವಿ #37

ವಚನಗಳಲ್ಲೂ ಕತ್ತಲು ಎಂಬ ಮಾತನ್ನು ಹಾಗೆ ಧಾರ್ಮಿಕ, ಆಧ್ಯಾತ್ಮಿಕ ಅರ್ಥದಲ್ಲಿ ವ್ಯಾಖ್ಯಾನಿಸುವ ಪರಂಪರೆಯೇ ಇದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ ; ಭಾಗ 3, ಬದುಕೆಂಬ ಪ್ರಸಾದ

ಹಗಲೆನ್ನೆ ಇರುಳೆನ್ನೆ
ಉದಯವೆನ್ನೆ ಅಸ್ತಮಾನವೆನ್ನೆ ;
ಹಿಂದೆನ್ನ ಮುಂದೆನ್ನೆ
ನೀನಲ್ಲದೆ ಪೆರತೊಂದಹುದೆನ್ನೆ.
ಮನ ಘನವಾದುದಿಲ್ಲವಯ್ಯಾ
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ
[ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ]
ಆನಿನ್ನೆಂದು ಕಾಂಬೆನು ಹೇಳಾ, ಚೆನ್ನಮಲ್ಲಿಕಾರ್ಜುನಾ. [೪೦೯]

[ಪೆರತೊಂದಹುದೆನ್ನ=ಪೆರತೊಂದು ಅಹುದು ಎನ್ನೆ, ಬೇರೆಯಾವುದನ್ನೂ ಒಪ್ಪುವುದಿಲ್ಲ; ಆನಿನ್ನೆಂದು=ನಾನು ಇನ್ನು ಯಾವಾಗ]

ಹಗಲು-ಇರುಳು, ಸೂರ್ಯೋದಯ-ಸೂರ್ಯಾಸ್ತ, ನಿನ್ನೆ ಎಂಬ ಗತಕಾಲ-ನಾಳೆ ಎಂಬ ಭವಿಷ್ಯದ ಕಾಲ ಇವು ಯಾವುದೂ ಇಲ್ಲ. ಅನ್ನು ಅನ್ನುವುದು ಬಿಟ್ಟರೆ ಬೇರೆ ಏನನ್ನೂ ಕುರಿತು ಹೇಳುವುದಿಲ್ಲ. ಆದರೂ ಮನಸ್ಸು ಚಂಚಲವಾಗಿದೆ, ಘನವಾಗಿಲ್ಲ. ಕನ್ನಡಿಯನ್ನು  ಕತ್ತಲೆಯಲ್ಲಿ ನೋಡಿ ಮುಖ ಕಾಣದೆ ಕವಳಗೊಂಡೆ. ನಿನ್ನನ್ನು ಇನ್ನು ಯಾವಾಗ ಕಾಣಲಿ ಹೇಳು.

ಹಗಲು-ಇರುಳು, ಉದಯಾಸ್ತಮಾನ, ಹಿಂದೆ ಮುಂದೆ, ನಾನು ಇನ್ನೆಂದು ಎಂಬ ಸೂಚನೆ ಇರುವ ಪದಗಳನ್ನು ಸಮತೋಲಗೊಳಿಸುವಂತೆ ನೀನಲ್ಲದೆ ಮತ್ತೆ ಬೇರೆ ಏನನ್ನೂ  ಎನ್ನೆ-ಎನ್ನುವುದಿಲ್ಲ, ನುಡಿಯುವುದಿಲ್ಲ ಅನ್ನುವ ಮಾತು ಇದೆ,  ಇಡೀ ವಚನವು ವರ್ತಮಾನದ ಈ ಕ್ಷಣದಲ್ಲಿ ಬದುಕು ಅನ್ನುವುದು  ತಾನು ಇಲ್ಲವಾಗುವ ಸ್ಥಿತಿಯನ್ನು ಹೊಂದಲು ನಡೆಸಿದ ಪ್ರಯತ್ನ, ನಾನೆಂಬುದು ಇಲ್ಲವಾಗಲು  ಸಾಧ್ಯವಾಗಿಲ್ಲವೆಂಬ ಕಳವಳವನ್ನು ವಚನ ವ್ಯಕ್ತಪಡಿಸುತ್ತದೆ. ಕಾಲದ ಕಲ್ಪನೆಯನ್ನು ಮೀರುವ ಅಥವಾ ಮೀರಿದ್ದೇನೆಂದು ಭಾವಿಸಿ ಅದಕ್ಕೆ ಸಾಕ್ಷಿ ದೊರೆಯದ ಕಳವಳದ ಸ್ಥಿತಿ ಎಂದೂ ಇದನ್ನು ವಿವರಸಿಬಹುದು. ನಾನು ಇಲ್ಲ, ಈ ಲೋಕದ ವಸ್ತುಗಳಿಲ್ಲ, ಜನರಿಲ್ಲ,, ಯಾವುದೂ ಇಲ್ಲ, ನೀನು ಮಾತ್ರ ಇದ್ದೀಯೆ ಎನ್ನುತ್ತೇನೆ. ಆದರೂ ಮನಸ್ಸು ಘನವಾಗದೆ ಚಂಚಲವಾಗಿದೆ. ಕತ್ತಲಲಲ್ಲಿ ಕನ್ನಡಿಯನ್ನು ನೋಡಿ, ನನ್ನ ಮುಖವೂ ಕಾಣದೆ, ನಿನ್ನ ಮುಖವೂ ಕಾಣದೆ ಕಳವಳವಾಗಿದೆ. ನಿನ್ನನ್ನು ಯಾವಾಗ ಕಾಣುವೆ?

.ಹಿಂದೂ, ಬೌದ್ಧ, ಕ್ರಿಶ್ಚಿಯನ್‌, ಇಸ್ಲಾಂ ಹೀಗೆ ಪ್ರಮುಖ ಧರ್ಮಗಳಲ್ಲೆಲ್ಲ ಅರಿವಿನ ಬೆಳಕು ಮೂಡುವ ಮುನ್ನ ಆವರಿಸುವ ಕತ್ತಲೆಯ ರೂಪಕವನ್ನು ಕುರಿತ ಮಾತುಗಳಿವೆ. ವಚನಗಳಲ್ಲೂ ಕತ್ತಲು ಎಂಬ ಮಾತನ್ನು ಹಾಗೆ ಧಾರ್ಮಿಕ, ಆಧ್ಯಾತ್ಮಿಕ ಅರ್ಥದಲ್ಲಿ ವ್ಯಾಖ್ಯಾನಿಸುವ ಪರಂಪರೆಯೇ ಇದೆ. ಕನ್ನಡದಲ್ಲಿ ಮಧುರಚೆನ್ನರು ಬರೆದಿರುವ ʻಕಾಳರಾತ್ರಿʼ ಎಂಬ ಆಧ್ಯಾತ್ಮಿಕ ಆತ್ಮಚರಿತ್ರೆಯನ್ನು ಆಸಕ್ತ ಓದುಗರು ಗಮನಿಸಬಹುದು.

*

ಬದುಕನ್ನು ಪ್ರಸಾದವೆಂದು ಭಾವಿಸುವ ನಿಲುವಿನ ವಚನಗಳೆಂದು ಸಾಂಪ್ರದಾಯಿಕವಾಗಿ ಸುಮಾರು ಮೂವತ್ತು ವಚನಗಳನ್ನು ಕನ್ನಡ ಪರಂಪರೆ ಗುರುತಿಸುತ್ತ ಬಂದಿದೆ. ಇವು ಮುಖ್ಯವಾಗಿ ಹಲವು ಶೂನ್ಯಸಂಪಾದನೆಗಳಲ್ಲಿ, ಮತ್ತು ಅಂಥ ಇತರ ಮತಧರ್ಮ ತತ್ವಚಿಂತನೆಯ ಕೃತಿಗಳಲ್ಲಿ ಸೇರ್ಪಡೆಯಾಗಿರುವ ವಚನಗಳು. ಇವುಗಳಲ್ಲಿ ಬಹಳಷ್ಟರಲ್ಲಿ ಅಕ್ಕಮಹಾದೇವಿಯವರದು ಅನ್ನಿಸುವಂಥ ಕೆಲವು ಸಾಲುಗಳೊಡನೆ ಪಾರಿಭಾಷಿಕ ಪದಗಳು, ಸಂಸ್ಕೃತ ಶ್ಲೋಕ, ಕೆಲವು ತಾತ್ವಿಕ ವಿವರಣೆಗಳನ್ನು ಸೇರ್ಪಡೆ ಮಾಡಿ ವಿಸ್ತರಿಸಿದಂತೆ ಕಾಣುತ್ತದೆ. ಅನುಭವ ಮುಖ್ಯವಾದ ವಚನಗಳು ಧರ್ಮದ ಪಠ್ಯವಾಗಿ ಬೆಳೆದು ಅಥವ ವಿಸ್ತರಿಸಿಕೊಳ್ಳುವ ಹಂತದಲ್ಲಿ ಕನ್ನಡ ಮನಸ್ಸು ಹೀಗೆ ವಚನಗಳ ಪರಿಷ್ಕರಣೆ ಮಾಡಿರಬಹುದು ಎಂಬ ಊಹೆಯನ್ನು ಮಾತ್ರ ಇಂದು ಮಾಡಬಹುದು. ಅಂಥ ವಚನಗಳಿಗೆ ಧರ್ಮದ ಸಾಧನೆಯಲ್ಲಿ ತೊಡಗುವವರಿಗೆ ಬಹಳ ಮುಖ್ಯವಾದ ಮಾರ್ಗದರ್ಶಕ ನುಡಿಗಳೂ ಸಿಗುವುದುಂಟು. ಆದರೆ ಈ ಸರಣಿಯ ಉದ್ದೇಶಕ್ಕೆ ಅವು ಹೊಂದುವುದಿಲ್ಲವೆಂದು ಇಲ್ಲಿ ಗಮನಿಸಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.