ನೀವು ಅದರೊಳಗೆ ಕಳೆದುಹೋಗಿ ಬಿಡಬಹುದಾದ ಹೆಚ್ಚಿನ ಸಂಗತಿಯೊಂದನ್ನ, ದೊಡ್ಡ ಸಂಗತಿಯೊಂದನ್ನ ಪ್ರೀತಿಸಿ. ಅದು ನಿಮ್ಮನ್ನು ಹೊಂದಬಹುದು ಆದರೆ ನೀವು ಅದನ್ನ ಹೊಂದುವಂತಿಲ್ಲ ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
ನಿಮಗೆ
ಇದು ಗೊತ್ತಿರಲಿ….
ಪ್ರೇಮಿಗಳಿಗೆ ಯಾವ ಧರ್ಮದಲ್ಲೂ
ಶೃದ್ಧೆಯಿರುವುದಿಲ್ಲ.
ಈ ಪ್ರೇಮ ಧರ್ಮದಲ್ಲಿ
ನಂಬಿಕೆಯಿಲ್ಲ, ದ್ರೋಹವಿಲ್ಲ,
ಗೆಳೆಯರಿಲ್ಲ, ಕಾಫೀರರಿಲ್ಲ,
ಕಾರಣವಿಲ್ಲ
ನಾನೆಂಬುದಿಲ್ಲ, ನೀನೆಂಬುದಿಲ್ಲ
ಹೃದಯ, ಆತ್ಮ
ಉಹೂಂ ಯಾವುದೂ ಇಲ್ಲ.
ಪ್ರೇಮಿಗಳೇ
ನಿಮ್ಮ ಪ್ರೇಮವನ್ನೊಮ್ಮೆ
ಖಾತ್ರಿ ಮಾಡಿಕೊಳ್ಳಿ.
– ರೂಮಿ
ಪ್ರೀತಿ, ಮಹಾ ಕಷ್ಟಗಳನ್ನು ಸೃಷ್ಟಿ ಮಾಡಬಲ್ಲದು ಹಾಗೆಯೇ ಮಹಾ ಸಂತೋಷವನ್ನು ಕೂಡ. ಈ ಬಗ್ಗೆ ತುಂಬ ತುಂಬ ಎಚ್ಚರಿಕೆಯಿಂದಿರಬೇಕು ಏಕೆಂದರೆ, ಪ್ರೀತಿ ನಮ್ಮ ಬೇಸಿಕ್ ಕೆಮಿಸ್ಟ್ರಿ. ಯಾವಾಗ ನೀವು ನಿಮ್ಮ ಪ್ರೀತಿಯ ಸಾಮರ್ಥ್ಯದ ಬಗ್ಗೆ ಎಚ್ಚರಿಕೆಯಿಂದಿರುವಿರೋ ಆಗ ಎಲ್ಲವೂ ಸುಸೂತ್ರವಾಗಿ ಸಾಗುವುದು.
ಯಾವಾಗಲೂ ನಿಮಗಿಂತಲೂ ಹೆಚ್ಚಿನದನ್ನ ಪ್ರೀತಿಸಿ, ಆಗ ನೀವು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಎದುರಾಗುವುದಿಲ್ಲ, ಯಾವಾಗಲೂ ನಿಮಗಿಂತ ದೊಡ್ಡದನ್ನು ಪ್ರೀತಿಸಿ. ಜನರು ಬಹುತೇಕ ತಮಗಿಂತ ಚಿಕ್ಕದನ್ನ, ಕಡಿಮೆಯದನ್ನ ಪ್ರೀತಿಸುವ ಮನೋಭಾವವನ್ನು ಹೊಂದಿರುತ್ತಾರೆ. ಏಕೆಂದರೆ ಚಿಕ್ಕದನ್ನ ಕಂಟ್ರೋಲ್ ಮಾಡಬಹುದು, ಡಾಮಿನೇಟ್ ಮಾಡಬಹುದು, ಕಡಿಮೆಯವರೊಂದಿಗೆ ಹೋಲಿಸಿಕೊಂಡು ಸುಪೀರಿಯರ್ ಫೀಲ್ ಮಾಡಿಕೊಳ್ಳಬಹುದು, ನಿಮ್ಮ ಅಹಂ ನ ತೃಪ್ತಿಪಡಿಸಿಕೊಳ್ಳಬಹುದು. ಒಮ್ಮೆ ನೀವು ನಿಮ್ಮ ಪ್ರೀತಿಯನ್ನ ಬಳಸಿಕೊಂಡು ಅಹಂ ಕಟ್ಟಿಕೊಳ್ಳಲು ಶುರು ಮಾಡಿದಿರೆಂದರೆ, ನಿಮ್ಮ ನರಕದ ಪ್ರಯಾಣವನ್ನು ನೀವು ಖಚಿತಪಡಿಸಿಕೊಂಡು ಬಿಡುತ್ತೀರಿ.
ನಿಮಗಿಂತ ಹೆಚ್ಚಿನದನ್ನು ಪ್ರೀತಿಸಿ, ನಿಮಗಿಂತ ದೊಡ್ಡದನ್ನು ಪ್ರೀತಿಸಿ, ಯಾವುದನ್ನ ನಿಯಂತ್ರಣ ಮಾಡುವುದು ನಿಮಗೆ ಸಾಧ್ಯವಿಲ್ಲವೋ, ಯಾವುದರಲ್ಲಿ ನೀವು ಕಳೆದು ಹೋಗಿಬಿಡಬಹುದೋ , ಯಾವುದು ನಿಮ್ಮನ್ನು ಹೊಂದಬಹುದೋ, ಯಾವುದನ್ನ ಹೊಂದುವುದು ನಿಮಗೆ ಸಾಧ್ಯವಿಲ್ಲವೋ ಅಂಥ ಸಂಗತಿಯನ್ನು ಪ್ರೀತಿಸಿ. ಆಗ ನಿಮ್ಮ ಅಹಂ ಮಾಯವಾಗುತ್ತದೆ ಮತ್ತು ಯಾವಾಗ ಪ್ರೀತಿಯಲ್ಲಿ ಅಹಂ ಇರುವುದಿಲ್ಲವೋ ಅಥ ಪ್ರೀತಿ ಪ್ರಾರ್ಥನೆಯಾಗಿಬಿಡುತ್ತದೆ.
ಊರಿನಲ್ಲಿ ಜ್ಞಾನಿ ಎಂದು ಹೆಸರುವಾಸಿಯಾಗಿದ್ದ ನಸ್ರುದ್ದೀನ್ ನ ಹತ್ತಿರ ಒಬ್ಬಳು ಯುವತಿ ಬಂದು ತನ್ನ ತಳಮಳವನ್ನು ಹೇಳಿಕೊಂಡಳು.
“ ಮಾನ್ಯರೇ, ನಿನ್ನೆ ನೀವು ಪ್ರವಚನದಲ್ಲಿ ಅಹಂಕಾರ ಬಹಳ ಕೆಟ್ಟದ್ದು ಅದು ನಮ್ಮನ್ನು ನಾಶ ಮಾಡುತ್ತದೆ ಎಂದು ಹೇಳಿದಿರಿ. ಆದರೆ ನಾನು ಕನ್ನಡಿಯ ಮುಂದೆ ನಿಂತಾಗಲೆಲ್ಲ ನನ್ನ ಸೌಂದರ್ಯವನ್ನು ಕಂಡು, ಈ ಊರಿನಲ್ಲಿ ನನ್ನಷ್ಟು ಚೆಲುವೆ ಯಾರೂ ಇಲ್ಲ ಎನ್ನುವ ಸೊಕ್ಕು ಆವರಿಸಿಕೊಂಡುಬಿಡುತ್ತದೆ. ಈ ಅಹಂಕಾರವನ್ನು ದೂರಮಾಡಿಕೊಳ್ಳುವ ಉಪಾಯ ಸೂಚಿಸಿರಿ “
“ ಮಗಳೇ, ನಿಜವಾದ ಅಹಂಕಾರವಿದ್ದರೆ ಏನಾದರೂ ಉಪಾಯ ಹೇಳಬಹುದೇ ಹೊರತು ತಪ್ಪು ತಿಳುವಳಿಕೆಗಲ್ಲ “
ನಸ್ರುದ್ದೀನ್ ಗಂಭೀರವಾಗಿ ಉತ್ತರಿಸಿದ.
*******************************

