ಚೆನ್ನಮಲ್ಲಿಕಾರ್ಜುನನನ್ನು ಬೆರೆಸಿದ ಮೇಲೆ ಅರಿಯಬೇಕಾದ ಇನ್ನೊಂದು ನಿಜತತ್ವ ಅನ್ನುವುದು ಇದೆ ಎಂಬ ಮಾತೂ ಇಲ್ಲ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 4, ನೀನೇ ನನ್ನ ಉಸಿರು
ತನುವ ಮೀರಿತ್ತು
ಮನವ ಮೀರಿತ್ತು
ಘನವ ಮೀರಿತ್ತು
ಅಲ್ಲಿಂದತ್ತ ಭಾವುಕರಿಲ್ಲವಾಗಿ ತಾರ್ಕಣೆಯಿಲ್ಲ
ಚೆನ್ನಮಲ್ಲಿಕಾರ್ಜುನಯ್ಯನ
ಬೆರಸಲಿಲ್ಲದ ನಿಜತತ್ವವು ॥ ೨೨೪ ॥
[ಭಾವುಕ=ಭಾವಿಸುವವನು, ಭಾವದ ಪರಿಣಾಮಕ್ಕೆ ಒಳಗಾದ; ತಾರ್ಕಣೆ=ಅರಸುವಿಕೆ, ಹುಡುಕಾಟ, ಗ್ರಹಿಕೆ; ಬೆರಸಲಿಲ್ಲದ=ಒಂದಾಗಲು ಪ್ರತ್ಯೇಕವಾಗಿ ಬೇರೇನೂ ಇರದ]
ಆಗುತ್ತಿರುವುದನ್ನು ಅನುಭವ ಅನ್ನಬಹುದಾದರೆ ಅದು ದೇಹ, ಮನಸ್ಸು, ಸಾಲಿಡ್ ಆದ ಅರ್ಥ ಎಲ್ಲವನ್ನೂ ಮೀರಿದ್ದು. ಇಲ್ಲಿಂದಾಚೆಗೆ ಭಾವನೆಗಳ ಪರಿಣಾಮವೂ ಇಲ್ಲ, ಭಾವುಕತೆಯೂ ಇಲ. ನನಗಿಂತ ಬೇರೆಯಾಗಿ ಇರುವ ಮತ್ತೇನನ್ನೋ ಗ್ರಹಿಸಬೇಕು ಅಂತಲೂ ಇಲ್ಲ. ಚೆನ್ನಮಲ್ಲಿಕಾರ್ಜುನನನ್ನು ಬೆರೆಸಿದ ಮೇಲೆ ಅರಿಯಬೇಕಾದ ಇನ್ನೊಂದು ನಿಜತತ್ವ ಅನ್ನುವುದು ಇದೆ ಎಂಬ ಮಾತೂ ಇಲ್ಲ.

