ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
1921 ರಲ್ಲಿ ಪಂಜಾಬ್ ನ ಲುಧಿಯಾನಾದಲ್ಲಿ ಶ್ರೀಮಂತ, ಪವರ್ ಫುಲ್ , ಜಮೀನ್ದಾರರ ಕುಟುಂಬದಲ್ಲಿ ಅಬ್ದುಲ್ ಅನ್ನೋ ಹುಡುಗನನ ಜನನವಾಗ್ತದೆ. ಆ ಕಾಲದ ಬಹುತೇಕ ಜಮೀನ್ದಾರರಂತೆ ಆ ಹುಡುಗನ ಅಪ್ಪ ಕ್ರೂರಿ ಮತ್ತು ಸಂವೇದನಾರಹಿತ. ಅವನು ಹನ್ವೆರಡು ಮದುವೆಯಾಗಿದ್ದ. ಅಬ್ದುಲ್ ನ ತಾಯಿ ಅವನ ಹನ್ನೊಂದನೇ ಹೆಂಡತಿ. ವಿಪರ್ಯಾಸ ಎಂದರೆ ಆ ಜಮೀನ್ದಾರನಿಗೆ ಆ ಹನ್ನೆರಡು ಮದುವೆಗಳಿಂದಲೂ ಸಾಧ್ಯವಾದ ಒಂದೇ ಸಂತಾನ ಅಬ್ದುಲ್.
ಅಬ್ದುಲ್ ಅಪ್ಪನಿಗೆ ಮದುವೆ, ಪ್ರೇಮ ಇತ್ಯಾದಿಗಳ ಬಗ್ಗೆ ಯಾವ ಭಾವನಾತ್ಮಕ ಸಂಬಂಧವೂ ಇರಲಿಲ್ಲ. ಅವನ ಕಾಳಜಿ ತನ್ನ ಆಸ್ತಿಯನ್ನು ಉಳಿಸಿ ಬೆಳೆಸಬಹುದಾದ ವಾರಸುದಾರನ ಬಗ್ಗೆ ಮಾತ್ರ ಇತ್ತು. ಗಂಡನ ಕ್ರೌರ್ಯವನ್ನು ಸಹಿಸಲಾರದೇ ಅಬ್ದುಲ್ ನ ತಾಯಿ ಮದುವೆಯಿಂದ ಹೊರಬಂದಳು. ಅವಳು ಒಬ್ಬಳೇ ಹೊರಟು ಹೋಗಿದ್ದರೆ ಆ ಜಮೀನ್ದಾರನಿಗೆ ಅಂಥ ವ್ಯತ್ಯಾಸವೇನಾಗುತ್ತಿರಲಿಲ್ಲ ಆದರೆ ಆಕೆ, ತನ್ನ ಜೊತೆ ತನ್ನ ಮಗ ಅಬ್ದುಲ್ ನನ್ನೂ ಕರೆದುಕೊಂಡು ಗಂಡನ ಮನೆಯಿಂದ ಹೊರಬಿದ್ದಿದ್ದಳು. ಇದು ಈ ಜಮೀನ್ದಾರನಿಗೆ ಸಹಿಸಲಾಗದ ವಿಷಯವಾಗಿತ್ತು. ಅವನು ತನ್ನ ಮಗನನ್ನು ಕಿಡ್ನ್ಯಾಪ್ ಮಾಡವ ಮತ್ತು ಈ ವಿಷಯವನ್ನು ಕೋರ್ಟಿಗೆ ಎಳೆಯುವ ಪ್ರಯತ್ನ ಮಾಡಿದ. ಕೋರ್ಟಿನಲ್ಲಿ ಕೊನೆಗೆ ಜಡ್ಜ್ ಎಲ್ಲ ನಿರ್ಧಾರವನ್ನೂ ಅಬ್ದುಲ್ ನ ಮೇಲೆ ಹಾಕಿದರು. ಕೋರ್ಟಿನಲ್ಲಿ ಅಬ್ದುಲ್ ಹೇಳಿದ್ದು ಒಂದೇ ಮಾತು, “ ನನಗೆ ನನ್ನ ತಾಯಿ ಬೇಕು”.
ಆ ಕ್ಷಣದಿಂದ ಆ ತಾಯಿ ತನ್ನ ಇಡೀ ಬದುಕನ್ನ ತನ್ನ ಮಗನಿಗಾಗಿ ಮೀಸಲಿಟ್ಟಳು. ಆಕೆ ತನ್ನ ಆಭರಣಗಳನ್ನೆಲ್ಲ ಮಾರಿ ಮಗನ ವಿದ್ಯಾಭ್ಯಾಸ ಮತ್ತು ಬದುಕನ್ನು ಕಟ್ಟಿದಳು. ಅಬ್ದುಲ್ ನಿಗೆ ಅಪ್ಪನ ಮನೆಯ ಐಷಾರಾಮಿ, ಶ್ರೀಮಂತಿಕೆ ಮಿಸ್ ಆಗಿರಬಹುದು ಆದರೆ ಆ ತಾಯಿ ತನ್ನ ಮಗನನ್ನು ಪ್ರೀತಿ, ಸೌಹಾರ್ದ ಮತ್ತು ಅಂತಃಕರಣ ತುಂಬಿ ಬೆಳೆಸಿದಳು.
ಮುಂದೆ ಅಬ್ದುಲ್ ಉರ್ದೂ ಭಾಷೆಯ ಅತ್ಯಂತ ಪ್ರಸಿದ್ಧ ಕವಿಯಾಗಿ ರೂಪಗೊಂಡ ಮತ್ತು ತನ್ನ ಕಾವ್ಯನಾಮದೊಂದಿಗೆ ತನ್ನ ಊರಿನ ಹೆಸರೂ ಸೇರಿಸುಕೊಂಡು ‘ಸಾಹಿರ್’ ಲುಧಿಯಾನ್ವಿ ಎಂದು ಪ್ರಸಿದ್ಧನಾದ. ಆತನ ಪ್ರಸಿದ್ಧಿ ಬೆಳೆದಂತೆಲ್ಲ ತನ್ನ ತಾಯಿಯೊಡನೆಯ ಅವನ ಬಾಂಧವ್ಯ ಮತ್ತಷ್ಟು ಇನ್ನಷ್ಟು ಗಟ್ಟಿಯಾಗುತ್ತಲೇ ಹೋಯ್ತು. ಆತ ಯಾವತ್ತೂ ಆಕೆಯನ್ನು ಕೇಳದೇ ಒಂದು ಹೆಜ್ಜೆಯನ್ನೂ ಮುಂದಿಡುತ್ತಿರಲಿಲ್ಲ ಮತ್ತು ಅವನು ಆಕೆಯನ್ನು ಬಹಳ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಂಡ. 1976 ರಲ್ಲಿ ಸಾಹಿರ್ ನ ತಾಯಿ ತೀರಿಕೊಂಡಳು.
ಎರಡು ವರ್ಷದ ನಂತರ 1978 ರಲ್ಲಿ ಯಶಚೋಪ್ರಾ ಅವರ ತ್ರಿಶೂಲ್ ಸಿನೇಮಾಕ್ಕಾಗಿ ಸಾಹಿರ್ ಒಂದು ಹಾಡು ಬರೆದ ಆ ಹಾಡನ್ನ ಲತಾ ಮಂಗೇಶ್ಕರ್ ಹಾಡಿದ್ದರು. ಹಾಡು ಸಾಹೀರ್ ನದಾದರೂ ಆ ಹಾಡಿನ ಭಾವನಗಳೆಲ್ಲ ಅವನ ತಾಯಿಯವಾಗಿದ್ದವು. ಆ ಹಾಡು ಯಾವುದೆಂದರೆ……..
ಮೈ ತುಝೆ ರೆಹಮ್ ಕೇ ಸಾಯೇ ಮೇ ನ ಪಲನೇ ದೂಂಗೀ
ಜಿಂದಗಾನಿ ಕೀ ಕಡೀ ಧೂಪ್ ಮೇ ಜಲನೇ ದೂಂಗೀ
ತಾಕೀ ತಪ್ ತಪ್ ಕೇ ತೂ ಫೌಲಾದ್ ಬನೇ
ಮಾ ಕೀ ಔಲಾದ್ ಬನೇ…..

