ಯಾವಾಗಲಾದರೂ ನಿಮ್ಮ ಮೈಂಡ್ ಮಾಡುತ್ತಿರುವ ಕೆಲಸ, ನಿಮ್ಮ ಪ್ರಕೃತಿಗೆ ವಿರುದ್ಧವಾಗಿದ್ದರೆ, ನಿಮ್ಮ ಅಜಾಗ್ರತ ಸ್ಥಿತಿ (unconscious) ಮೊದಲು ಸಭ್ಯತೆಯಿಂದ ನಿಮಗೆ ಸೂಚನೆಗಳನ್ನು ಕೊಡುತ್ತದೆ. ಆದರೆ ನೀವು ಆ ಸೂಚನೆಗಳನ್ನು ಕಡೆಗಣಿಸಿದಿರಾದರೆ ನಿಮಗೆ ದುಸ್ವಪ್ನಗಳ ಮೂಲಕ ಈ ಸೂಚನೆಗಳನ್ನ ಮತ್ತೆ ಕೊಡಲಾಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದುಸ್ವಪ್ನ, ನಿಮ್ಮ ಅಜಾಗ್ರತ ಸ್ಥಿತಿ ಯ ಕಿರುಚಾಟವಲ್ಲದೇ ಬೇರೇನೂ ಅಲ್ಲ. ನೀವು ನಿಮ್ಮ ಪ್ರಕೃತಿಯಿಂದ ಬಹಳ ದೂರ ಹೋಗುತ್ತಿದ್ದೀರಿ, ನಿಮ್ಮ ಇಡಿಯಾದ ಅಸ್ತಿತ್ವವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ ಎನ್ನುವುದನ್ನ ನಿಮಗೆ ಗಟ್ಟಿಯಾಗಿ ಹೇಳುವ ಪ್ರಯತ್ನ. ಕಾಡಿನಲ್ಲಿ ಹಾದಿ ತಪ್ಪಿರುವ ಮಗುವನ್ನು ತಾಯಿಯೊಬ್ಬಳು ಕೂಗಿ ಕರೆಯುವ ಹಾಗೆ. ದುಸ್ವಪ್ನ ಎನ್ನುವದು ಥೇಟ್ ಇದೇ ಥರ. ಆದ್ದರಿಂದ ಕನಸುಗಳ ಜೊತೆ ನಿಮ್ಮ ಗೆಳೆತನವನ್ನು ಶುರು ಮಾಡಿ.
ಗೆಳೆತನ ಮುಂದುವರೆದಂತೆಲ್ಲ, ನೀವು ಮತ್ತು ನಿಮ್ಮ ಅಜಾಗ್ರತ ಸ್ಥಿತಿ ಹತ್ತಿರವಾಗುತ್ತ ಹೋಗುತ್ತೀರಿ. ಹೆಚ್ಚು ಹತ್ತಿರ ಬಂದಂತೆಲ್ಲ ಕನಸುಗಳು ಕಡಿಮೆಯಾಗುತ್ತವೆ. ಏಕೆಂದರೆ ಆಗ ನಿಮಗೆ ಹೆಚ್ಚು ಕನಸುಗಳ ಅವಶ್ಯಕತೆ ಇರುವುದಿಲ್ಲ. ಆಗ ನೀವು ಎಚ್ಚರವಾಗಿದ್ದಾಗಲೂ ನಿಮ್ಮ unconscious ನಿಮಗೆ ಸೂಚನೆಗಳನ್ನು ಕೊಡುವುದು ಸಾಧ್ಯ. ನಿಮಗೆ ಸೂಚನೆ ನೀಡಲು ನೀವು ನಿದ್ದೆಗೆ ಜಾರುವವರೆಗೆ ನಿಮ್ಮ ಅಜಾಗ್ರತ ಸ್ಥಿತಿ ಕಾಯಬೇಕಿಲ್ಲ. ಅದು ಯಾವಾಗ ಬೇಕಾದರೂ ನಿಮಗೆ ಸೂಚನೆ ಕೊಡಬಹುದು.
ಅಂತರ ಕಡಿಮೆಯಾದಂತೆಲ್ಲ ನಿಮ್ಮ ಜಾಗ್ರತ ಮತ್ತು ಅಜಾಗ್ರತ ಸ್ಥಿತಿ overlap ಆಗಲು ಶುರುವಾಗುವುದು. ಇದು ಒಂದು ಅದ್ಭುತ ಅನುಭವ. ನೀವು ಆಕ್ಯತೆಯನ್ನು (oneness) ಮೊದಲಬಾರಿಗೆ ಅನುಭವಿಸುತ್ತೀರಿ. ನಿಮ್ಮ ಅಸ್ತಿತ್ವದ ಯಾವ ಭಾಗವೂ ನಿರಾಕರಣೆಗೆ ಒಳಪಡುತ್ತಿಲ್ಲ. ನಿಮ್ಮ ಪೂರ್ಣತ್ವವನ್ನು ನೀವು ಸ್ವೀಕಾರ ಮಾಡಿದ್ದೀರಿ. ನೀವು ಪೂರ್ಣವಾಗುವತ್ತ ಹೆಜ್ಜೆ ಹಾಕುತ್ತಿದ್ದೀರಿ.
ಕೆಲ ದಿನಗಳಿಂದ ಮುಲ್ಲಾ ನಸ್ರುದ್ದೀನ್ ಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿಬಿಡುತ್ತಿತ್ತು. ತನ್ನ ಈ ಸಮಸ್ಯೆಯನ್ನು ತನ್ನ ಬಂಧು ಬಳಗದವರ ಹತ್ತಿರ ಮುಲ್ಲಾ ಹಂಚಿಕೊಂಡ, “ ನನಗೆ ಕೆಲ ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕತ್ತೆಯೊಡನೆ ಕುಸ್ತಿ ಆಡುವ ಕನಸುಗಳು ಬೀಳುತ್ತವೆ.”
ಮುಲ್ಲಾನ ಸಮಸ್ಯೆ ಕೇಳಿ ಸಂಬಧಿಕರು ಚಿಂತಿತರಾದರು. ಅವನನ್ನು ಹತ್ತಿರದ ಮಂತ್ರದ ಮದ್ದು ಮಾಡುವ ವೈದ್ಯನ ಹತ್ತಿರ ಕರೆದುಕೊಂಡು ಹೋದರು. ಮುಲ್ಲಾನ ಸಮಸ್ಯೆಯನ್ನು ಕೂಲಂಕಷವಾಗಿ ಕೇಳಿಸಿಕೊಂಡ ವೈದ್ಯ, ಕೆಲವು ಗಿಡ ಮೂಲಿಕೆಗಳನ್ನು ರುಬ್ಬಿ ಔಷಧಿ ತಯಾರಿಸಿದ. ಪವಿತ್ರ ಗ್ರಂಥದ ಕೆಲವು ಮಂತ್ರಗಳನ್ನು ಉಚ್ಛರಿಸಿ ಆ ಔಷಧಿಗೆ ಶಕ್ತಿ ತುಂಬಿದ.
“ ನಸ್ರುದ್ದೀನ ತೊಗೋ, ಈ ಸಂಜೆ ಊಟಕ್ಕಿಂತ ಮುಂಚೆ ಅಲ್ಲಾಹ್ ನನ್ನು ಸ್ಮರಿಸುತ್ತ ಈ ಔಷಧಿ ಕುಡಿ. ನಿನ್ನ ಸಮಸ್ಯೆ ಪರಿಹಾರವಾಗುತ್ತದೆ. ಇನ್ನು ಮುಂದೆ ಕತ್ತೆಯ ಕನಸುಗಳು ಬೀಳುವುದಿಲ್ಲ” ಹೇಳಿದ ವೈದ್ಯ .
“ ಕ್ಷಮಿಸಿ ವೈದ್ಯರೆ, ಈ ಔಷಧಿ ನಾಳೆ ಕುಡಿಯಲಾ” ಎಂದ ನಸ್ರುದ್ದೀನ.
“ ಯಾಕೆ? ಇವತ್ತಿಗೇನು ಸಮಸ್ಯೆ?” ವೈದ್ಯ ತಿರುಗಿ ಪ್ರಶ್ನೆ ಮಾಡಿದ .
“ ಏನಿಲ್ಲ ಇವತ್ತು ಕನಸಿನಲ್ಲಿ ಕತ್ತೆಯೊಂದಿಗೆ ಫೈನಲ್ ಕುಸ್ತಿ ಪಂದ್ಯ ಇದೆ “ ಉತ್ತರಿಸಿದ ನಸ್ರುದ್ದೀನ.
******************************

