ಒಂಟಿತನದಲ್ಲಿ ಒಂದು ಬಗೆಯ ದುಗುಡ ಮತ್ತು ಸಮಾಧಾನ ಎರಡೂ ಇವೆ. ಒಂಟಿತನವನ್ನು ನೀವು ಹೇಗೆ ನೋಡುತ್ತೀರಿ ಎನ್ನುವುದರ ಮೇಲೆ ಇದು ಡಿಪೆಂಡ್ ಆಗಿರುತ್ತದೆ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂಟಿತನ ಮತ್ತು ಏಕಾಂತ
ಎರಡೂ ಬೇರೆ ಬೇರೆ.
ಒಂಟಿತನ ಕಾಡುತ್ತಿರುವಾಗ,
ಸರಿಯಾದ ದಾರಿಯಲ್ಲಿದ್ದೇವೆಂದು
ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುವುದು
ಬಹಳ ಸುಲಭ.
ಏಕಾಂತ ಒಳ್ಳೆಯದು.
ಇಲ್ಲಿಯೂ ಇರುವುದು ಕೇವಲ ನಾವು ಮಾತ್ರ,
ಆದರೆ ಒಂಟಿತನದ ಜಿಗುಪ್ಸೆ ಇಲ್ಲಿಲ್ಲ.
ಕನ್ನಡಿಯಂಥ ಸಂಗಾತಿಯನ್ನ ಹುಡುಕಿ.
ಆ ಇನ್ನೊಬ್ಬರ ಹೃದಯದಲ್ಲಿ ಮಾತ್ರ
ನೀವು ನಿಮ್ಮ ನಿಜವನ್ನು ಕಾಣುವಿರಿ
ಮತ್ತು
ನಿಮ್ಮೊಳಗಿನ ಭಗವಂತನನ್ನು ಕೂಡ.
~ ಶಮ್ಸ್
ಒಬ್ಬರು ತಮ್ಮ ಸ್ವಂತ ಅವಕಾಶ (space) ಹೊಂದುವುದು ಬಹುತೇಕ ಬಹಳ ಕಷ್ಟದ ವಿಷಯ. ಆದರೆ ನೀವು ನಿಮ್ಮ ಸ್ವಂತ ಜಾಗ ಹೊಂದದೇ ಇದ್ದರೆ, ನಿಮ್ಮ ಸ್ವಂತದ ಇರುವಿಕೆಯ ಜೊತೆ ನಿಮ್ಮ ಪರಿಚಯ ಸಾಧ್ಯವಾಗುವುದೇ ಇಲ್ಲ. ನೀವು ಯಾರು ಎನ್ನುವುದು ನಿಮಗೆ ಗೊತ್ತೇ ಆಗುವುದಿಲ್ಲ. ನೀವು ಯಾವಾಗಲೂ ಸಾವಿರಾರು ಸಂಗತಿಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡಿರುವಿರಿ ; ಸಂಬಂಧಗಳಲ್ಲಿ, ಲೌಕಿಕ ವ್ಯವಹಾರಗಳಲ್ಲಿ, ಆತಂಕಗಳಲ್ಲಿ, ಯೋಜನೆಗಳಲ್ಲಿ, ಭವಿಷ್ಯದಲ್ಲಿ, ಭೂತ ಕಾಲದಲ್ಲಿ, ಆಳದಲ್ಲಿ ಅಲ್ಲ ಮೇಲು ಮೇಲೆ ಮಾತ್ರ.
ನೀವು ಏಕಾಂಗಿಯಾಗಿರುವಾಗ, ನಿಮ್ಮ ಅಂತರಂಗದ ಆಳದಲ್ಲಿ ನೀವು ನೆಲೆಗೊಳ್ಳಲು ಶುರು ಮಾಡುವಿರಿ. ಏಕೆಂದರೆ, ಈಗ ನೀವು ನಿಮ್ಮನ್ನು ಬೇರೆ ಯಾವುದರಲ್ಲೂ ತೊಡಗಿಸಿಕೊಂಡಿಲ್ಲ, ನಿಮಗೆ ಯಾವಾಗಲೂ ಅನಿಸುವ ಹಾಗೆ ಈಗ ಅನಿಸುವುದಿಲ್ಲ. ಇದು ವಿಭಿನ್ನ ; ಈ ವಿಭಿನ್ನತೆ ಕೂಡ ವಿಚಿತ್ರ. ಮತ್ತು ಖಂಡಿತವಾಗಿ ತಮ್ಮ ಪ್ರೇಮಿಯನ್ನ, ತಮ್ಮ ಗೆಳೆಯರನ್ನ ಜನ ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ಇದು ಬಹುಕಾಲ ಮುಂದುವರೆಯುವುದಿಲ್ಲ. ಇದು ಸಣ್ಣ ಶಿಸ್ತು ಮಾತ್ರ.
ನೀವು ನಿಮ್ಮನ್ನು ಆಳವಾಗಿ ಪ್ರೀತಿಸುತ್ತೀರಾದರೆ, ನಿಮ್ಮ ಅಂತರಾಳವನ್ನು ಪ್ರವೇಶಿಸುವುದು ನಿಮಗೆ ಸಾಧ್ಯವಾಗುತ್ತದೆಯಾದರೆ, ನೀವು ಇತರರನ್ನು ಇನ್ನೂ ಹೆಚ್ಚು ಪ್ರೀತಿಸಲು ಸಿದ್ಧರಾಗಿರುವಿರಿ. ಏಕೆಂದರೆ ತನ್ನನ್ನು ತಾನು ಪ್ರೀತಿಸಿಕೊಳ್ಳದವ ಇತರರನ್ನೂ ಆಳವಾಗಿ ಪ್ರೀತಿಸಲಾರ. ನೀವು ಮೇಲ್ಮೈಯಲ್ಲಿಯೇ ಇರುವಿರಾದರೆ, ನಿಮ್ಮ ಸಂಬಂಧಗಳಿಗೆ ಆಳ ಸಾಧ್ಯವಾಗುವುದಿಲ್ಲ. ಎಷ್ಟೆಂದರೂ ಇದು ನಿಮ್ಮ ಸಂಬಂಧ. ನಿಮ್ಮೊಳಗೆ ಆಳ ಇದ್ದಾಗ ಮಾತ್ರ ನಿಮ್ಮ ಸಂಬಂಧದಲ್ಲಿಯೂ ಆಳ ಇರುವುದು ಸಾಧ್ಯ.

