ಕನಸುಗಳ ಜೊತೆ ಗೆಳೆತನ ಮಾಡಿಕೊಳ್ಳುವುದನ್ನ ಕಲಿಯಿರಿ. ಕನಸುಗಳು, ನಿಮ್ಮ ಸುಪ್ತಪ್ರಜ್ಞೆ ನಿಮ್ಮ ಜೊತೆ ಮಾಡಬಯಸುತ್ತಿರುವ ಸಂಹವನ. ನಿಮ್ಮ ಸುಪ್ತಪ್ರಜ್ಞೆಯಿಂದ ನಿಮಗೆ ಸೂಚನೆ ಇದೆ. ಅದು ನಿಮ್ಮ ಮತ್ತು ನಿಮ್ಮ ಪ್ರಜ್ಞೆಯ ನಡುವೆ ಸೇತುವೆಯನ್ನು ಕಟ್ಟ ಬಯಸುತ್ತಿದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕನಸುಗಳನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ವಿಶ್ಲೇಷಿಸುವುದು ಬೇಕಾಗಿಲ್ಲ, ಏಕೆಂದರೆ ನೀವು ಕನಸುಗಳನ್ನು ವಿಶ್ಲೇಷಣೆ ಮಾಡುವಿರಾದರೆ, ಆಗ ನಿಮ್ಮ ಮೈಂಡ್ ನಿಮ್ಮ ಮಾಸ್ಟರ್ ಆಗುತ್ತದೆ. ಅದು ಕನಸುಗಳನ್ನು ವಿಚ್ಛೇದಿಸಿ ವಿಶ್ಲೇಷಣೆ ಮಾಡುವ ಪ್ರಯತ್ನ ಮಾಡುತ್ತದೆ, ಸುಪ್ತಪ್ರಜ್ಞೆ ನೀಡದ ಅರ್ಥಗಳನ್ನು ಅದು ಕನಸಿಗೆ ಕೊಡುತ್ತದೆ. ಸುಪ್ತಪ್ರಜ್ಞೆ ಕಾವ್ಯಾತ್ಮಕ ಭಾಷೆಯನ್ನು ಬಳಸುತ್ತದೆ. ಇಲ್ಲಿ ಅರ್ಥಗಳು ಬಹಳ ಸೂಕ್ಷ್ಮ; ಅವು ವಿಶ್ಲೇಷಣೆಗೆ ನಿಲುಕಲಾರವು. ಕನಸುಗಳ ಭಾಷೆಯನ್ನು ಅರ್ಥಮಾಡಿಕೊಂಡರೆ ಮಾತ್ರ ಕನಸುಗಳು ನಿಮಗೆ ದಕ್ಕುತ್ತವೆ. ಆದ್ದರಿಂದ ನಿಮ್ಮ ಮೊದಲ ಹೆಜ್ಜೆ, ಕನಸುಗಳ ಜೊತೆ ಗೆಳೆತನ ಬೆಳೆಸುವುದಾಗಿರಬೇಕು.
ಯಾವಾಗಲಾದರೂ ನಿಮಗೆ ಕನಸು ಮಹತ್ವದ್ದು ಅನಿಸಿದರೆ ( ಅದು ದುಸ್ವಪ್ನ, ಹಿಂಸಾತ್ಮಕವಾಗಿದ್ದರೂ), ಮುಂಜಾನೆ ನಿದ್ದೆಯಿಂದ ಎದ್ದೊಡನೆ ಅಥವಾ, ಮಧ್ಯರಾತ್ರಿಯೇ ನೀವು ಕನಸನ್ನು ಮರೆಯುವ ಮೊದಲು, ಕಣ್ಣು ಮುಚ್ಚಿಕೊಂಡು ಹಾಸಿಗೆಯ ಮೇಲೆ ಕುಳಿತು ಆ ಕನಸನ್ನು ಧ್ಯಾನಿಸಿ, ಆ ಕನಸಿನ ಜೊತೆ ಗೆಳೆತನ ಬೆಳೆಸಿಕೊಳ್ಳಿ. ಅದಕ್ಕೆ ಹೇಳಿ, “ನಾನು ನಿನ್ನ ಜೊತೆ ಇರುವೆ. ನಿನ್ನ ಜೊತೆ ಬರಲು ಸಿದ್ಧವನಾಗಿರುವೆ. ನಿನಗೆ ಎಲ್ಲಿಗೆ ಬೇಕೋ ಅಲ್ಲಿಗೆ ನನ್ನ ಕರೆದುಕೊಂಡು ಹೋಗು. ನಾನಂತೂ ಸಿದ್ಧ”.
ಸುಮ್ಮನೇ ಕನಸಿಗೆ ಶರಣಾಗಿ. ಕಣ್ಣು ಮುಚ್ಚಿಕೊಂಡು ಕನಸನ್ನು ಹಿಂಬಾಲಿಸಿ, ಅದನ್ನು ಆನಂದಿಸಿ; ಕನಸು ನಿಮ್ಮೆದುರು ಅನಾವರಣಗೊಳ್ಳಲಿ. ಆ ಕನಸು ಏನೆಲ್ಲ ಸಂಪತ್ತನ್ನು ತನ್ನೊಳಗೆ ಅಡಗಿಸಿಕೊಂಡಿದೆ ಎನ್ನುವುದು ಗೊತ್ತಾದಾಗ ನಿಮಗೆ ಆಶ್ಚರ್ಯವಾಗುತ್ತದೆ, ಆಗ ನೀವು ಕನಸು ತನ್ನ ಅರ್ಥಗಳು ನಿಮ್ಮೆದುರು ಪೂರ್ತಿಯಾಗಿ ಬಿಚ್ಚಿಡಲು ಅವಕಾಶ ಮಾಡಿಕೊಡುತ್ತೀರಿ.

