ಲಕ್ಷಾಂತರ ಜನ ಸಂವೇದನಾಶೀಲರಾಗದೇ ಇರಲು ನಿರ್ಧರಿಸಿದ್ದಾರೆ. ಯಾರಾದರೂ ತಮಗೆ ನೋವು ಮಾಡಬಹುದೆಂಬ ಭಯದಿಂದ ಅವರು ದಪ್ಪ ಚರ್ಮವನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಭಾರೀ ಬೆಲೆ ತೆರಬೇಕಾಗಿದೆ. ಅವರಿಗೆ ನೋವು ಮಾಡುವುದು ಯಾರಿಗೂ ಸಾಧ್ಯವಿಲ್ಲ ಹಾಗೆಯೇ ಅವರಿಗೆ ಖುಶಿ ನೀಡುವುದು ಕೂಡ ಯಾರಿಗೂ ಆಗದ ಮಾತು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವಾಗ ನಿಮ್ಮನ್ನು ನೀವು ಓಪನ್ ಆಗಿಸಿಕೊಳ್ಳುತ್ತೀರೋ ಆಗ ಎರಡೂ ಸಂಗತಿಗಳು ನಿಮಗೆ ಲಭ್ಯವಾಗುತ್ತವೆ : ಕೆಲವೊಮ್ಮೆ ಮೋಡಮಯ ವಾತಾವರಣವಿದ್ದರೆ ಕೆಲವೊಮ್ಮೆ ಬಿಸಿಲು ಇರುತ್ತದೆ. ಆದರೆ ನೀವು ನಿಮ್ಮ ಗುಹೆಯಲ್ಲಿಯೇ ಅಡಗಿ ಕುಳಿತುಬಿಟ್ಟಿರಾದರೆ ನಿಮಗೆ ಮೋಡದ ಅನುಭವವೂ ಆಗುವುದಿಲ್ಲ ಹಾಗೆಯೇ ಬಿಸಿಲಿನ ಅನುಭವವೂ. ಹೊರಗೆ ಬಂದು ಬಿಸಿಲಿನೊಳಗೆ ಡಾನ್ಸ್ ಮಾಡುವುದು ಒಳ್ಳೆಯದು, ಹಾಗೆಯೇ ಮೋಡ ಮುಸುಕಿದಾಗ ದುಃಖಿತರಾಗುವುದೂ, ಮತ್ತು ಕೆಲವೊಮ್ಮೆ ಚಳಿ ಗಾಳಿಗೂ ಕೂಡ ತೆರೆದುಕೊಳ್ಳಬೇಕಾಗುತ್ತದೆ. ನೀವು ಗುಹೆ ಬಿಟ್ಟು ಹೊರಗೆ ಬಂದಾಗ ಎಲ್ಲ ಸಾಧ್ಯತೆಗಳೂ ತೆರೆದುಕೊಳ್ಳುತ್ತವೆ, ಮತ್ತು ಒಂದು ಸಾಧ್ಯವಾಗಬಹುದಾದ ಸಂಗತಿಯೆಂದರೆ ಜನ ನಿಮ್ಮನ್ನು ಹರ್ಟ್ ಮಾಡಬಹುದು. ಆದರೆ ಇದು ಒಂದು ಸಾಧ್ಯತೆ ಮಾತ್ರ.
ಈ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ, ಇಲ್ಲವಾದರೆ ಮತ್ತೆ ನೀವು ಕ್ಲೋಸ್ಡ್ ಆಗಿಬಿಡುತ್ತೀರ. ಲಕ್ಷಾಂತರ ಸಂಗತಿಗಳ ಸಾಧ್ಯತೆ ಇದೆ; ಅವುಗಳ ಬಗ್ಗೆ ಕೂಡ ವಿಚಾರ ಮಾಡಿ. ಆಗ ನೀವು ಹೆಚ್ಚು ಖುಶಿ ಅನುಭವಿಸುತ್ತೀರ; ಹೆಚ್ಚು ಪ್ರೇಮಮಯಿಗಳಾಗುತ್ತೀರ. ಆಗ ನೀವು ಹೆಚ್ಚು ಹೆಚ್ಚು available ಆಗುತ್ತೀರ, ಇತರರು ನಿಮಗೆ ಹೆಚ್ಚು available ಆಗುತ್ತಾರೆ. ಆಗ ನಿಮಗೆ ನಕ್ಕು ನಲಿಯುವುದು, ಸಂಭ್ರಮಿಸುವುದು ಸಾಧ್ಯವಾಗುತ್ತದೆ. ಸಾವಿರಾರು ಸಾಧ್ಯತೆಗಳು ನಿಮಗಾಗಿ ಲಭ್ಯವಿರುವಾಗ, ಜನ ನಿಮ್ಮನ್ನು ಹರ್ಟ ಮಾಡಬಹುದು ಎನ್ನುವ ಒಂದು ಸಾಧ್ಯತೆಯನ್ನು ಮಾತ್ರ ಯಾಕೆ ನೆಚ್ಚಿಕೊಂಡಿದ್ದೀರಿ?
ಒಮ್ಮೆ ಮುಲ್ಲಾ ನಸ್ರುದ್ದೀನ ವಿದ್ವಾಂಸರೊಬ್ಬರಿಗೆ ಒಂದು ಚರ್ಚೆಗಾಗಿ ಸಮಯ ಕೊಟ್ಟಿದ್ದ. ಆದರೆ ಮರೆತು ಯಾವದೋ ಕೆಲಸಕ್ಕೆಂದು ಬೇರೆ ಊರಿಗೆ ಹೋಗಿ ಬಿಟ್ಟ.
ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ವಿದ್ವಾಂಸರು ಮುಲ್ಲಾನ ಮನೆಗೆ ಆಗಮಿಸಿದರು. ಆದರೆ ಮನೆಯ ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಮನೆಯ ಬಾಗಿಲಲ್ಲಿ ಸ್ವಲ್ಪ ಹೊತ್ತು ಕಾದರು. ಆದರೂ ಮುಲ್ಲಾ ವಾಪಸ್ ಬರುವ ಸೂಚನೆ ಕಾಣದಿದ್ದಾಗ ಸಿಟ್ಟಿನಿಂದ ಮನೆಯ ಬಾಗಿಲ ಮೇಲೆ ‘ಮೂರ್ಖ’ ಎಂದು ಸುಣ್ಣದಿಂದ ಬರೆದು ವಾಪಸ್ ಹೋಗಿಬಿಟ್ಟರು.
ಸಂಜೆ ಮನೆಗೆ ವಾಪಸ್ ಬಂದ ನಸ್ರುದ್ದೀನ ಮನೆಯ ಬಾಗಿಲ ಮೇಲೆ ಬರೆದದ್ದನ್ನು ಓದಿದ. ಆಗ ಅವನಿಗೆ ತಾನು ವಿದ್ವಾಂಸರಿಗೆ ಚರ್ಚೆಗೆಂದು ಸಮಯ ಕೊಟ್ಟಿದ್ದು ನೆನಪಾಯಿತು.
ಕೂಡಲೇ ಮುಲ್ಲಾ ಓಡುತ್ತ ವಿದ್ವಾಂಸರ ಮನೆಗೆ ಹೋದ. ಇವನನ್ನು ಕಂಡ ಕೂಡಲೆ ವಿದ್ವಾಂಸರ ಸಿಟ್ಟು ನೆತ್ತಿಗೇರಿತು. ಅವರು ಬಾಯಿಗೆ ಬಂದ ಹಾಗೆ ಮುಲ್ಲಾನನ್ನು ಬೈಯ್ಯಲು ಶುರುಮಾಡಿದರು.
ಅವರನ್ನು ಸಮಾಧಾನ ಮಾಡುತ್ತ ಮುಲ್ಲಾ ಮಾತನಾಡಿದ,
“ ಸ್ವಾಮಿ ದಯವಿಟ್ಟು ಕ್ಷಮಿಸಿ, ನನಗೆ ಮರೆತು ಹೋಗಿತ್ತು. ಸಂಜೆ ಮನೆಗೆ ಬಂದಾಗ ಯಾರೋ ನನ್ನ ಮನೆಯ ಬಾಗಿಲ ಮೇಲೆ ನಿಮ್ಮ ಹೆಸರು ಬರೆದಿದ್ದರು, ಕೂಡಲೇ ಓಡಿ ಬಂದೆ “

