ನೀವು ದುಃಖದಲ್ಲಿರುವಾಗ, ನಿಜವಾಗಿಯೂ ಆ ದುಗುಡವನ್ನು ಅನುಭವಿಸಿ, ದುಃಖದಲ್ಲಿ ಒಂದಾಗಿಬಿಡಿ. ನೀವು ಬೇರೆ ಏನು ತಾನೇ ಮಾಡಬಹುದು? ದುಗುಡ ಅವಶ್ಯಕ. ಅದು ನಿಮ್ಮನ್ನು ರಿಲ್ಯಾಕ್ಸ್ ಮಾಡುತ್ತದೆ, ಅದು ನಿಮ್ಮನ್ನು ಸುತ್ತುವರೆದಿರುವ ದಟ್ಟ ಕಾರಿರುಳು. ದುಗುಡವನ್ನು ಒಪ್ಪಿಕೊಳ್ಳಿ, ಅದರೊಳಗೆ ನಿದಿರೆಗೆ ಜಾರಿ. ಆಗ ನಿಮಗೆ ಗೊತ್ತಾಗುತ್ತದೆ, ಒಮ್ಮೆ ನೀವು ದುಗುಡವನ್ನು ಸ್ವೀಕಾರಮಾಡಿದಿರಾದರೆ ಅದು ಹೇಗೆ ಹೂವಿನಂತೆ ಸುಂದರವಾಗಿ ಅರಳುತ್ತದೆ ಎನ್ನುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದುಃಖವನ್ನು
ಬಟ್ಟಲಲ್ಲಿ ಸುರಿದುಕೊಂಡು
ಚಪ್ಪರಿಸುತ್ತ ಕುಳಿತಿದ್ದ ಸಂಕಟವನ್ನು
ಅಂತಃಕರಣದಿಂದ ಮಾತಿಗೆಳೆದೆ ;
” ಹೇಗಿದೆ ದುಃಖ? ರುಚಿಯಾಗಿದೆಯಾ?”
“ಓಹ್ ! ಸಿಕ್ಕಿಹಾಕಿಕೊಂಡೆ “
ಕಿರುಚಿತು ಸಂಕಟ.
“ನನ್ನ ವ್ಯಾಪಾರಕ್ಕೆ ಕಲ್ಲು ಹಾಕಿದೆ ನೀನು,
ಮಾರಬೇಕೆಂದುಕೊಂಡಿದ್ದೆ
ನಿನ್ನ ದಯೆಯೆಂದು ಗೂತ್ತಾದ ಮೇಲೆ
ಹೇಗೆ ಮಾರಲಿ? “
– ರೂಮಿ
ದುಗುಡ ನಮಗೆ ಕುರೂಪಿಯಾಗಿ ಕಾಣುವುದು ಅದರ ಕುರಿತಾದ ನಮ್ಮ ಪ್ರೊಜೆಕ್ಷನ್ ನಿಂದ, ಅದು ತಾನೇ ತಾನಾಗಿ ಕುರೂಪಿಯೇನಲ್ಲ. ಒಮ್ಮೆ ನೀವು ದುಗುಡವನ್ನು ಒಪ್ಪಿಕೊಂಡುಬಿಟ್ಟರೆ ಆಗ ನಿಮಗೆ ಗೊತ್ತಾಗುತ್ತದೆ ಅದು ಎಷ್ಟು ಸುಂದರವೆಂದು, ಎಷ್ಟು ರಿಲ್ಯಾಕ್ಸಿಂಗ್ ಎಂದು, ಎಷ್ಟು ಪ್ರಶಾಂತ, ಎಷ್ಟು ಮೌನಿಯೆಂದು. ಖುಶಿ ನಿಮಗೆ ಕೊಡಲಾರದ್ದನ್ನು ದುಗುಡ ಸಾಧ್ಯ ಮಾಡುತ್ತದೆ.
ಖುಶಿ ಎತ್ತರವನ್ನು ಸಾಧ್ಯ ಮಾಡುತ್ತದೆಯಾದರೆ, ದುಗುಡ ಆಳವನ್ನು ಸಾಧ್ಯ ಮಾಡುತ್ತದೆ. ದುಗುಡ ನಿಮಗೆ ಬೇರುಗಳನ್ನು ಸಾಧ್ಯ ಮಾಡುತ್ತದೆಯಾದರೆ, ಖುಶಿ ರೆಂಬೆಕೊಂಬೆಗಳನ್ನು. ಖುಶಿ ಎನ್ನುವುದು ಆಕಾಶವನ್ನು ತಲುಪಬಲ್ಲ ಮರವಾದರೆ, ದುಗುಡ ಎನ್ನುವುದು ಭೂಮಿಯ ಗರ್ಭವನ್ನು ತಲುಪಬಲ್ಲ ಮರದ ಬೇರು. ನಮಗೆ ಎರಡೂ ಅವಶ್ಯಕ. ಮರ ಹೆಚ್ಚು ಎತ್ತರಕ್ಕೆ ಬೆಳೆಯುತ್ತಿರುವಾಗಲೇ ಮರದ ಬೇರುಗಳು ಹೆಚ್ಚು ಆಳವನ್ನು ಮುಟ್ಟುತ್ತಿರುತ್ತವೆ ಅದೇ ಸಮಯದಲ್ಲಿ. ಮರ ಎತ್ತರವಾದಷ್ಟು ಅದರ ಬೇರುಗಳು ಹೆಚ್ಚು ಆಳವನ್ನು ತಲುಪುತ್ತವೆ. ಎರಡೂ ದಿಕ್ಕುಗಳಲ್ಲಿ ಮರದ ಬೆಳವಣಿಗೆ ಪ್ರಮಾಣಾನುಗತ. ಇದು ಸಮತೋಲನ.
ಬದುಕಿನಲ್ಲಿ ಸಮತೋಲನವನ್ನು ತರುವುದು ನಿಮಗೆ ಸಾಧ್ಯವಾಗುವುದಿಲ್ಲ. ಅದು ಒತ್ತಾಯಪೂರ್ವಕವಾದದ್ದು, ಅದರಿಂದ ಯಾವ ಉಪಯೋಗ ಇಲ್ಲ. ಸಮತೋಲನ ಸಹಜವಾಗಿ ಒದಗಿಬರುತ್ತದೆ ; ಅದು ಈಗಾಗಲೇ ಇರುವಂಥದು. ನೀವು ಗಮನಿಸಿದ್ದೀರಾ? ಯಾವಾಗ ನಿಮಗೆ ಹೆಚ್ಚು ಖುಶಿಯಾಗುತ್ತದೆಯೋ ಆಗ ನಿವು ಹೆಚ್ಚು ಆಯಾಸಗೊಳ್ಳುತ್ತೀರಿ. ಆಗ ಹೃದಯ ಕೂಡಲೇ ಇನ್ನೊಂದು ದಿಕ್ಕಿನಲ್ಲಿ ಮೂವ್ ಆಗುತ್ತದೆ ನಿಮಗೆ ವಿಶ್ರಾಂತಿಯನ್ನು ಸಾಧ್ಯಮಾಡಲು. ಇದನ್ನು ನೀವು ದುಗುಡ ಎಂದುಕೊಳ್ಳುತ್ತೀರಿ. ಇಂಥ ಸ್ಥಿತಿಗೆ ವೈದ್ಯಕೀಯದ, ಚಿಕಿತ್ಸೆಯ ಗುಣವಿದೆ. ಇದು ಹಗಲಿನಲ್ಲಿ ನೀವು ಕಠಿಣ ಪರಿಶ್ರಮ ಮಾಡಿ ರಾತ್ರಿ ಗಾಢ ನಿದ್ದೆಯನ್ನು ಅನುಭವಿಸುವಂತೆ. ಮರುದಿನ ಮುಂಜಾನೆ ನೀವು ಮತ್ತೆ ಫ್ರೆಶ್ ಆಗಿ ಆಗಿರುವಿರಿ. ದುಗುಡದ ನಂತರ ನೀವು ಮತ್ತೆ ಫ್ರೆಶ್ ಆಗುವಿರಿ ಮತ್ತೆ ಹೆಚ್ಚು ಖುಶಿಯನ್ನು ಅನುಭವಿಸಲು.

