ಪ್ರತಿಯೊಂದೂ ನಿರರ್ಥಕವೇ. ಇದನ್ನು ಗ್ರಹಿಸಬೇಕಾದದ್ದು ಬಹಳ ಮುಖ್ಯ, ಇಲ್ಲವಾದರೆ ಭ್ರಮೆಯಲ್ಲಿಯೇ ಬದುಕಬೇಕಾಗುತ್ತದೆ. ಪ್ರತಿಯೊಂದೂ ವ್ಯರ್ಥವೇ, ಬದುಕಿನಲ್ಲಿ ಯಾವ ಬೆಳವಣಿಗೆ ಇಲ್ಲ, ಯಾವ ಸುಧಾರಣೆ ಇಲ್ಲ, ಏಕೆಂದರೆ ಬದುಕು ಸನಾತನ. ಬದುಕು ಈಗಾಗಲೇ ಪರಿಪೂರ್ಣ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ತುದಿಗಾಲ ಮೇಲೆ ನಿಂತವ
ಉರುಳಿ ಬೀಳುವ ಸಾಧ್ಯತೆಗಳೇ ಹೆಚ್ಚು.
ಎಲ್ಲರಿಗಿಂತ ಮುಂದೆ ಓಡಿ ಹೋದವ
ಬಹಳ ದೂರ ಹೋಗಲಾರ.
ಮಿಂಚಲು ಪ್ರಯತ್ನಿಸುವವನ
ಬೆಳಕು, ಕಂದುತ್ತ ಹೋಗುವುದು.
ತನ್ನನ್ನು ತಾನು ಸಾರಿಕೊಳ್ಳುವವ
ತನಗೆ ತಾನೇ ಅಪರಿಚಿತ.
ಪರರ ಮೇಲೆ ಹತೋಟಿ ಸಾಧಿಸಬಲ್ಲವ
ತನ್ನ ಮೇಲೆ ಅಧಿಕಾರ ಹೊಂದಲು ಅಸಮರ್ಥ.
ಕೆಲಸಕ್ಕೆ ಜೋತು ಬೀಳುವವ
ಶಾಶ್ವತವಾದದ್ದನ್ನು ಸೃಷ್ಟಿಸಲಾರ.
ಮಾಡಬೇಕಾದ ಕೆಲಸಮಾಡಿ
ಮರೆತು ಬಿಟ್ಟಾಗ ಮಾತ್ರ
‘ತಾವೋ’ ಜೊತೆಗೆ ಒಪ್ಪಂದ ಸಾಧ್ಯ.
~ ಲಾವೋತ್ಸೇ
ಬದುಕನ್ನು ಹೆಚ್ಚು ಪರಿಪೂರ್ಣಗೊಳಿಸಲು ನೀವು ಮಾಡುತ್ತಿರುವ ಎಲ್ಲ ಪ್ರಯತ್ನವೂ ನಿರರ್ಥಕ, ಆದರೆ ಇದನ್ನು ಗ್ರಹಿಸಲು ಸಮಯ ಬೇಕಾಗುತ್ತದೆ. ಯಾವಾಗ ನೀವು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರೋ ಆಗ ನೀವು ಎರಡು ಸಂಗತಿಗಳ ಬಗ್ಗೆ ಯೋಚಿಸುತ್ತೀರಿ. ನೀವು ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬಹುದು, ನಂತರ ನಿಮ್ಮ ಮುಂದಿನ ಕೆಲದಿನಗಳು ನಿಮ್ಮ ಬಯಕೆಗಳ, ಭರವಸೆಗಳ ಮತ್ತು ಮಹತ್ವಾಕಾಂಕ್ಷೆಯ ಮಧುಚಂದ್ರದ ದಿನಗಳು, ಆಗ ನಿಮ್ಮ ನಾಳೆಗಳು ಜೀವಂತಿಕೆಯಿಂದ ಕೂಡಿರುತ್ತವೆ. ಆದರೆ ಕೆಲ ದಿನಗಳ ನಂತರ ನಿಮಗೆ ಗೊತ್ತಾಗುತ್ತದೆ ಆ ನಾಳೆಗಳು ಎಂದೂ ಬರಲಾರವು ಎನ್ನುವುದು. ಆಗ ಮತ್ತೆ ನೀವು ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ, ಮತ್ತೆ ಎಲ್ಲ ಸಂಗತಿಗಳು ರೂಟೀನ್ ಎನ್ನುವಂತೆ ಮುಂದುವರೆಯುತ್ತಿವೆ.
ಇದು ನೀವು ಒಬ್ಬ ಗಂಡು ಅಥವಾ ಹೆಣ್ಣನ್ನು ಪ್ರೇಮಿಸಿದಂತೆ. ಮಧುಚಂದ್ರ ಮುಗಿಯುತ್ತಿದ್ದಂತೆ ಪ್ರೇಮವೂ ತೀರಿಕೊಳ್ಳುತ್ತದೆ. ಮಧುಚಂದ್ರದ ಕೊನೆಯಲ್ಲಿ ನೀವು ಮತ್ತೆ ಇನ್ನೊಬ್ಬರ ಹುಡುಕಾಟದಲ್ಲಿ ತೊಡಗಿರುತ್ತೀರಿ. ಹೀಗೆ ನೀವು ಒಂದು ಮಧುಚಂದ್ರದಿಂದ ಇನ್ನೊಂದಕ್ಕೆ ಮುಂದುವರೆಯಬಹುದು ಆದರೆ ಇದು ನಿಮಗೆ ಸಹಾಯ ಮಾಡುವುದಿಲ್ಲ. ಈ ಬದುಕಿನಲ್ಲಿ ಸಾಧಿಸಿಕೊಳ್ಳಬೇಕಾದದ್ದು ಏನೂ ಇಲ್ಲ ಎನ್ನುವುದನ್ನ ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು. ಬದುಕು ಉದ್ದೇಶಾಧಾರಿತವಾದದ್ದಲ್ಲ. ಬದುಕು ಸನಾತನ, ಯಾವತ್ತಿನಿಂದ ಈ ಹೊತ್ತಿನವರೆಗೂ. ಅದು ಈಗಾಗಲೇ ಪರಿಪೂರ್ಣ, ಇದನ್ನು ಸುಧಾರಣೆ ಒಳಪಡಿಸುವುದು ಅಸಾಧ್ಯ.
ಒಮ್ಮೆ ಇದು ಅರ್ಥವಾದರೆ, ಮುಂದೆ ಭವಿಷ್ಯವಿಲ್ಲ, ಭರವಸೆಯಿಲ್ಲ, ಬಯಕೆಗಳಿಲ್ಲ ಮತ್ತು ಯಾವ ಮಹತ್ವಾಕಾಂಕ್ಷೆಗಳೂ ಇಲ್ಲ. ಆಗ ಈ ಕ್ಷಣದಲ್ಲಿ ಬದುಕುತ್ತಿದ್ದೀರಿ ನೀವು : ಬದುಕನ್ನು ಆನಂದಿಸುತ್ತ, ಸಂಭ್ರಮಿಸುತ್ತ.
ಒಂದು ದೊಡ್ಡ ಸಾಮ್ರಾಜ್ಯದ ಚಕ್ರವರ್ತಿ ತನ್ನ ರಾಜ್ಯದಲ್ಲಿ ವಾಸಿಸುತ್ತಿದ್ದ ಒಬ್ಬ ಝೆನ್ ಮಾಸ್ಟರ್ ನನ್ನು ತನ್ನ ಅರಮನೆಗೆ ಆಹ್ವಾನಿಸಿದ.
ತನ್ನ ಕೋರಿಕೆಯಂತೆ ಅರಮನೆಗೆ ಆಗಮಿಸಿದ ಮಾಸ್ಟರ್ ನನ್ನು ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಮಾಸ್ಟರ್ ಗೆ ಸಕಲ ಆದರೋಪಚಾರಗಳನ್ನು ಮಾಡಲು ಮುಂದಾದ. ಸರಳ ಜೀವನ ನಡೆಸುತ್ತಿದ್ದ ಮಾಸ್ಟರ್, ರಾಜನ ಸತ್ಕಾರವನ್ನು ಗೌರವದಿಂದ ನಿರಾಕರಿಸಿದ.
ಮಾಸ್ಟರ್ ನ ಈ ಸೌಜನ್ಯ, ಸರಳತೆ ಕಂಡು ರಾಜನಿಗೆ ಬಹಳ ಅಚ್ಚರಿಯಾಯಿತು.
“ ಮಾಸ್ಟರ್, ಇಷ್ಟು ಕಡಿಮೆ ವಸ್ತುಗಳಿಂದ ನೀನು ತೃಪ್ತನಾಗಿರುವೆ. ನಿನ್ನನ್ನು ಕಂಡು ನನಗೆ ಅಸೂಯೆಯಾಗುತ್ತಿದೆ. “ ಎಂದ ರಾಜ.
“ ಬದಲಾಗಿ ನಿನ್ನನ್ನು ಕಂಡರೆ ನನಗೆ ಹೊಟ್ಟೆಕಿಚ್ಚಾಗುತ್ತಿದೆ ಮಹಾರಾಜ”
ಎಂದ ಮಾಸ್ಟರ್.
“ ನೀನು ನನಗಿಂತಲೂ ಕಡಿಮೆ ವಸ್ತುಗಳಿಂದ ತೃಪ್ತನಾಗಿರುವೆ. ನನ್ನ ಮನೋರಂಜನೆಗೆ ಬ್ರಹ್ಮಾಂಡದ ದಿವ್ಯ ಸಂಗೀತ ಬೇಕೇ ಬೇಕು, ಬೆಟ್ಟ, ಗುಡ್ಡ, ನದಿ ಸಮುದ್ರ ಇಲ್ಲದೇ ಹೋದರೆ ನನಗೆ ಹೊತ್ತೇ ಹೋಗುವುದಿಲ್ಲ. ಚಂದ್ರ ಸೂರ್ಯರು ಕಣ್ಣು ಮುಂದಿರದೇ ಹೋದರೆ, ನನ್ನೊಳಗೆ ಒಂದು ತುತ್ತೂ ಇಳಿಯುವುದಿಲ್ಲ. ನೀನೇ ಅದೃಷ್ಟವಂತ ಮಹಾರಾಜ ನಿನಗೆ ನಿನ್ನ ರಾಜ್ಯ ಒಂದಾದರೆ ಸಾಕು. “

