ಎಲ್ಲವೂ ದೈವಿಕ ! ಇದು ನಿಮ್ಮ ಮೂಲಭೂತ ತಿಳುವಳಿಕೆಯಾಗಿರಲಿ – ಇದು ನಿಮ್ಮನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕವಿಗೆ ಒಂದು ಸಲಹೆ.
ಎಲ್ಲವನ್ನೂ ದೇವರಂತೆ ಕಾಣಲು
ಶುರು ಮಾಡು.
ಆದರೆ ಇದನ್ನು ರಹಸ್ಯವಾಗಿಡು.
– ಹಾಫಿಜ್
ಎಲ್ಲವೂ ದೈವಿಕ ಎನ್ನುವುದನ್ನ ನೀವು ಬಹಳಷ್ಟು ಬಾರಿ ಮರೆತುಬಿಡುವುದು ಸ್ವಾಭಾವಿಕ ; ಈ ಬಗ್ಗೆ ಚಿಂತೆ ಬೇಡ. ಮತ್ತೊಮ್ಮೆ ಇದು ನಿಮಗೆ ನೆನಪಾಯಿತೆಂದರೆ, ಗಟ್ಟಿ ಮಾಡಿಕೊಳ್ಳಿ. ಮರೆತುಕೊಂಡಿದ್ದಕ್ಕೆ ಪಶ್ಚಾತಾಪ ಬೇಡ, ಇದು ಸಹಜ. ಇಂಥ ಮರೆವು ಹಳೆಯ ಚಾಳಿ. ಈ ಚಾಳಿಯನ್ನ ನಾವು ಎಷ್ಟೋ ಜನ್ಮ ಬದುಕಿದ್ದೇವೆ, ಹಾಗಾಗಿ ಇದು ಸಹಜ. ಈ ಬಗ್ಗೆ ಪಶ್ಚಾತಾಪ ಬೇಡ. ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕೆಲವು ಸೆಕೆಂಡುಗಳಷ್ಟಾದರೂ ಇದು ನಿಮಗೆ ನೆನಪಾದರೆ ಸಾಕು, ಏಕೆಂದರೆ ಸತ್ಯಕ್ಕೆ ಅಷ್ಟು potential ಇದೆ, ಸತ್ಯ ಅಷ್ಟು ಸಾಮರ್ಥ್ಯಶಾಲಿ. ಸತ್ಯದ ಈ ಸಣ್ಣ ನೆನಪು ಸಾಕು ಅಸತ್ಯದ ಜಗತ್ತನ್ನು ನಾಶ ಮಾಡುವುದಕ್ಕೆ. ಕೇವಲ ಒಂದು ಬೆಳಕಿನ ಕಿರಣ ಸಾಕು, ಸಾವಿರಾರು ವರ್ಷಗಳ ಕತ್ತಲೆಯನ್ನು ನಾಶ ಮಾಡುವುದಕ್ಕೆ.
ಆದ್ದರಿಂದ ಇದು ಕ್ವಾಂಟಿಟಿಯ ಪ್ರಶ್ನೆ ಅಲ್ಲ, ನೆನಪಿರಲಿ. ಇದು ದಿನದ ಇಪ್ಪತ್ನಾಲ್ಕು ಗಂಟೆಯೂ ನೆನಪಿಡುವ ಪ್ರಶ್ನೆ ಅಲ್ಲ – ಹೇಗೆ ಸಾಧ್ಯ ಇಂಥ ನೆನಪು? ಆದರೆ ಒಂದು ದಿನ ನಿಮಗೆ ಗೊತ್ತಾಗುತ್ತದೆ ಅಸಾಧ್ಯವೊಂದು ಸಾಧ್ಯವಾಗಿಬಿಟ್ಟಿರುವುದು.
ಹಳೆಯ ಜಪಾನಿನಲ್ಲಿ, ಬಿದಿರು ಮತ್ತು ಕಾಗದಗಳಿಂದ ಕಂದೀಲುಗಳನ್ನು ತಯಾರಿಸಿ, ಅದರಲ್ಲಿ ಮೇಣದ ಬತ್ತಿ ಇಟ್ಟು ಉಪಯೋಗಿಸುತ್ತಿದ್ದರು.
ಕುರುಡನೊಬ್ಬ ತನ್ನ ಗೆಳೆಯನ ಮನೆಗೆ ಬಂದಿದ್ದ. ರಾತ್ರಿ ಅವ ವಾಪಸ್ ಹೋಗುವಾಗ, ಗೆಳೆಯ ಅವನಿಗೆ ದಾರಿಯಲ್ಲಿ ಬಳಸಲು ಒಂದು ಕಂದೀಲು ಕೊಟ್ಟ.
ಕುರುಡ : ನನಗೇಕೆ ಕಂದೀಲು? ಮೊದಲೇ ನನಗೆ ಕಣ್ಣು ಕಾಣಿಸುವುದಿಲ್ಲ. ಕತ್ತಲು, ಬೆಳಕು ಎಲ್ಲ ಒಂದೇ ನನಗೆ.
ಗೆಳೆಯ : ಗೊತ್ತು ನನಗೆ, ದಾರಿ ತೋರಿಸಲು ನಿನಗೆ ಕಂದೀಲು ಬೇಕಿಲ್ಲ. ಆದರೆ ಕಂದೀಲು ನಿನ್ನ ಹತ್ತಿರ ಇರದೇ ಹೋದರೆ, ದಾರಿಹೋಕರು ನಿನಗೆ ಡಿಕ್ಕಿ ಹೊಡೆಯಬಹುದು. ನಿನ್ನ ಜೊತೆ ಈ ಕಂದೀಲು ಇರಲಿ.
ಕುರುಡ ಕಂದೀಲು ಹಿಡಿದುಕೊಂಡು ರಸ್ತೆಯಲ್ಲಿ ನಡೆಯತೊಡಗಿದ. ಕತ್ತಲೆಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ, ಒಬ್ಬ ದಾರಿಹೋಕ ಕುರುಡನಿಗೆ ಡಿಕ್ಕಿ ಹೊಡೆದ.
ಯಾಕೆ ದಾರಿ ಕಾಣುವುದಿಲ್ಲವೆ? ನನ್ನ ಕೈಯಲ್ಲಿರುವ ಕಂದೀಲಿನ ಬೆಳಕು ಕಾಣುವುದಿಲ್ಲವೆ? ಕುರುಡ ಚೀರಿದ.
ನಿನ್ನ ಕೈಯಲ್ಲಿರುವ ಕಂದೀಲು ಆರಿ ಹೋಗಿದೆ ಗೆಳೆಯ, ದಾರಿಹೋಕ ಉತ್ತರಿಸಿದ.
******************************

