ನಿಮ್ಮೊಳಗೆ ಏಕತ್ವ ಇಲ್ಲದಿದ್ದರೆ, ನೀವು ಮಾಡುವ ಯಾವ ಕೆಲಸದಲ್ಲೂ ನಿಜವಾದ ಏಕತ್ವ ( integration) ಸಾಧ್ಯವಾಗುವುದಿಲ್ಲ; ಅಲ್ಲಿ ಕೇವಲ ಮೇಲು ಮೇಲಿನ ಜೋಡಣೆಯನ್ನು ಕಾಣಬಹುದು. ಮತ್ತು ಅಂಥ ಜೋಡಣೆಯಲ್ಲಿ ನಾವು ಕೇವಲ ಯಾಂತ್ರಿಕ ಏಕತ್ವವನ್ನು ಕಾಣಬಹುದು, ಸಾವಯವ ಏಕತ್ವವನ್ನಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜವಾದ ಧಾರ್ಮಿಕ ವ್ಯಕ್ತಿ ಅಸ್ತಿತ್ವವನ್ನು ಸಮಸ್ಯಾತ್ಮಕವಾಗಿ ನೋಡುವುದಿಲ್ಲ. ಅವನಿಗೆ ಅಸ್ತಿತ್ವ, ನಿಗೂಢ, ಪವಾಡ ಸದೃಶ್ಯ. ಅವನು ಅದರ ಆಳಕ್ಕೆ ಧುಮುಕುತ್ತಾನೆ, ಅದನ್ನು ಸೆಲೆಬ್ರೇಟ್ ಮಾಡುತ್ತಾನೆ, ಅದನ್ನು ಹಬ್ಬವಾಗಿ ನೋಡುತ್ತಾನೆ, ಹಾಡುತ್ತಾನೆ, ಕುಣಿಯುತ್ತಾನೆ, ಪ್ರೇಮಿಸುತ್ತಾನೆ, ಪ್ರಾರ್ಥಿಸುತ್ತಾನೆ, ಪೇಂಟ್ ಮಾಡುತ್ತಾನೆ, ಸಂಗೀತವನ್ನು ಸೃಷ್ಟಿ ಮಾಡುತ್ತಾನೆ ಆದರೆ ಅದನ್ನು ಸಾಲ್ವ್ ಮಾಡಲಿಕ್ಕೆ ಹೋಗುವುದಿಲ್ಲ.
ನೀವು ಕಾರ್ ನ ಬಿಡಿ ಭಾಗಗಳನ್ನು ಜೋಡಿಸಿ ಕಾರ್ ನ ಸಿದ್ಧಪಡಿಸಬಹುದು – ಆದರೆ ಅದೇ ರೀತಿಯಲ್ಲಿ ಹೂವನ್ನು ಸಿದ್ಧಪಡಿಸುವುದು ಸಾಧ್ಯವಿಲ್ಲ; ಹೂವನ್ನು ಬೆಳೆಯಬೇಕಾಗುತ್ತದೆ. ಅದು ಸಾವಯವ ಏಕತ್ವದಿಂದ ರೂಪಿತವಾಗಿದೆ, ಆಂತರ್ಯದ ಏಕತ್ವ – ಅದಕ್ಕೆ ಒಂದು ಕೇಂದ್ರ ಇದೆ, ಮತ್ತು ಆ ಕೇಂದ್ರ ಮೊದಲು ಹುಟ್ಟುತ್ತದೆ ನಂತರ ಹೂವಿನ ದಳಗಳು. ಯಾಂತ್ರಿಕ ಏಕತ್ವದಲ್ಲಿ ಮೊದಲು ಬಿಡಿ ಭಾಗಗಳು, ನಂತರ ಇಡೀ ಪ್ರೊಡಕ್ಟ್. ಸಾವಯವ ಏಕತ್ವದಲ್ಲಿ ಮೊದಲು ಕೇಂದ್ರ ನಂತರ ಬಿಡಿ ಭಾಗಗಳು.
ಕಾವ್ಯವೇ ಇಲ್ಲದ ಕವಿತೆಯನ್ನು ಒಬ್ಬರು ಬರೆಯಬಹುದು. ಮತ್ತು ಕೇಂದ್ರವೇ ಇಲ್ಲದ ಕಥೆಯನ್ನೂ ರಚಿಸಬಹುದು, ಮೂರ್ಖ ಕತೆ, ಕೇವಲ ಗದ್ದಲ, ರೊಚ್ಚು ತುಂಬಿದ ಕತೆ, ಯಾವುದೇ ಮಹತ್ವ ಇಲ್ಲದ ಕತೆ.
ರಚನೆಗೆ ವ್ಯಕ್ತಿಯಿಂದಾಗಿ ಮಹತ್ವ ಪ್ರಾಪ್ತವಾಗುತ್ತದೆ, ಕವಿಯಿಂದ; ಅದು ಕವಿತೆಯಲ್ಲಿಲ್ಲ. ಕವಿಯೊಳಗೆ ಏನಾದರೂ ಉಕ್ಕಿ ಹರಿಯುತ್ತಿದ್ದರೆ, ಆಗ ಕವಿತೆ ಪ್ರಕಾಶಮಾನವಾಗುತ್ತದೆ, ಆಗ ಅದಕ್ಕೆ ಹೊಳಪು ಇರುತ್ತದೆ, ಸೂಕ್ಷ್ಮ ಏಕತ್ವ ಇರುತ್ತದೆ. ಅದು ಜೀವಂತಿಕೆಯಿಂದ ಮಿಡಿಯುತ್ತದೆ, ಅದಕ್ಕೆ ಒಂದು ಹೃದಯವಿದೆ, ಅದು ಮಿಡಿಯುತ್ತದೆ….. ನಿಮಗೆ ಆ ಹೃದಯದ ಬಡಿತ ಕೇಳಿಸುತ್ತದೆ. ಆಗ ಅದಕ್ಕೆ ಲೈಫ್ ಇದೆ, ಅದು ಬೆಳೆಯುತ್ತದೆ ಮತ್ತು ಬೆಳವಣಿಗೆ ಹೊಂದುತ್ತಲೇ ಹೋಗುತ್ತದೆ. ಇದು ಹೇಗೆಂದರೆ ನಿಮಗೆ ಮಗುವೊಂದು ಹುಟ್ಟಿದಂತೆ; ನೀವು ಸಾಯಬಹುದು ಆದರೆ ಮಗು ಬೆಳೆಯುತ್ತಲೇ ಹೋಗುತ್ತದೆ. ಕವಿ ಸತ್ತರೂ ನಿಜವಾದ ಕಾವ್ಯ ಬೆಳೆಯುತ್ತಲೇ ಹೋಗುತ್ತದೆ. ಕಾಳಿದಾಸ, ಶೆಕ್ಸಪಿಯರ್ ಇನ್ನೂ ಜೀವಂತವಾಗಿರುವ ಕಾರಣ ಇದೇ. ಕಾವ್ಯದಲ್ಲಿ ಸಾವಯವ ತತ್ವ ಇದೆ, ಅದು ಕೇವಲ ಯಾಂತ್ರಿಕ ಜೋಡಣೆ ಅಲ್ಲ.
ಭಗವಂತ ಒಬ್ಬ ಡಾನ್ಸರ್. ಅವನು ಜಗತ್ತನ್ನು ಪೇಂಟ್ ಮಾಡಿಲ್ಲ, ಹಾಗೇನಾದರೂ ಆಗಿದ್ದರೆ ಅವನು ಜಗತ್ತಿನಿಂದ ಹೊರತಾಗಿಬಿಡುತ್ತಿದ್ದ. ಜಗತ್ತು ಅವನ ಕಾವ್ಯ ಅಲ್ಲ, ಅವನ ಸಂಗೀತ ಅಲ್ಲ. ಎಕೆಂದರೆ ಅವನು ಜಗತ್ತಿನೊಳಗಿದ್ದಾನೆ, ಅವನೇ ಜಗತ್ತು ಆಗಿದ್ದಾನೆ . In this very moment, ಈ ಹಸಿರು ಮರಗಳು, ಮತ್ತು ತನ್ನ ಬಂಗಾರದ ಕಿರಣಗಳನ್ನು ಅವುಗಳ ಮೂಲಕ ಹಾಯಿಸುತ್ತಿರುವ ಸೂರ್ಯ, ಮತ್ತು ಹಕ್ಕಿಯ ಕುಹೂ, ಮತ್ತು ನೀನು ಮೌನದಲ್ಲಿ ಕುಳಿತಿರುವುದು, ನನ್ನ ಜೊತೆ ಯಾವ ಕಾರಣವಿಲ್ಲದೆ ಒಂದಾಗಿರುವುದು, ಈ ಕ್ಷಣವನ್ನು ಆಸ್ವಾದಿಸುತ್ತ, ಆನಂದಿಸುತ್ತ. This is it.

