ಅಂತರ್ಮುಖಿ – ಬಹಿರ್ಮುಖಿ ( Introvert – Extrovert): ಓಶೋ 365 #Day 187

ಎರಡು ಬಗೆಯ ಗುಲಾಮರಿದ್ದಾರೆ : ಅಂತರ್ಮುಖಿಗಳು – ಬಹಿರ್ಮುಖಿಗಳು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಕಾರ್ಲ ಯೂಂಗ್ ನ ಪ್ರಕಾರ
ಜಗತ್ತಿನಲ್ಲಿ ಎರಡು ಥರದ ಜನರು.
ಅಂತರ್ಮುಖಿಗಳು ಮತ್ತು ಬಹಿರ್ಮುಖಿಗಳು.

ಬಹಿರ್ಮುಖಿಗಳು ಕ್ರಿಯಾಶೀಲರು
ಸಂಪತ್ತು, ಪ್ರತಿಷ್ಠೆ, ಅಧಿಕಾರದ ಹಿಂದೆ ಹೋಗುವವರು.
ಇವರು ರಾಜಕಾರಣಿಗಳು, ಸಮಾಜ
ಸುಧಾರಕರು, ಉದ್ಯಮಶೀಲರು.
ಹೊರ ಜಗತ್ತಿನ ವಿಷಯದಲ್ಲಿ ಆಸಕ್ತರು.

ಅಂತರ್ಮುಖಿಗಳು
ಸ್ವಂತದ ವಿಷಯದಲ್ಲಿ ಮಾತ್ರ ಆಸಕ್ತರು
ತಮ್ಮೊಳಗಿನ ವ್ಯವಹಾರದಲ್ಲಿ ಮಾತ್ರ ಮಗ್ನರು.
ಕುತ್ತಿಗೆಗೆ ಬಂದಾಗಲಷ್ಟೇ ಕ್ರಿಯೆಗೆ ಇಳಿಯುವವರು
ಇವರು ಕವಿಗಳು, ಅನುಭಾವಿಗಳು, ಚಿಂತಕರು.
ತಮ್ಮ ಶಕ್ತಿಯನ್ನೆಲ್ಲ ಅಂತರಂಗದ ವಹಿವಾಟಿಗೆ ಧಾರೆ ಎರೆಯುವವರು.

ಆದರೆ ಸೊಸಾನ್ ಈ ಇಬ್ಬರನ್ನೂ ದೂರ ಇಡುತ್ತಾನೆ.
ಏಕೆಂದರೆ ಅವರಲ್ಲಿ ವಿಭಜನೆ ಇದೆ.
ಬಹಿರ್ಮುಖಿಗಳು ಅಂತರಂಗದ ಖಾಲೀತನಕ್ಕೆ ಕೊರಗುವವರು,
ಮತ್ತು ಅಂತರ್ಮುಖಿಗಳು ಹೊರ ಜಗತ್ತಿನ ಸೌಂದರ್ಯದಿಂದ ವಂಚಿತರು.

ಈ ಎರಡೂ ಅತಿರೇಕಗಳಿಂದ ದೂರವಿರಿ.
ಅಂತರಂಗ ಬಹಿರಂಗಗಳ ನಡುವೆ  ಭೇದ ಮಾಡದಿರಿ
ಈ ಎರಡರ ಮಧ್ಯೆ ಸಮತೋಲನ ಸಾಧಿಸುತ್ತ ಪ್ರವಹಿಸುತ್ತೀರಿ
ಎನ್ನುತ್ತಾನೆ ಸೊಸಾನ್.

ಅಂತರಂಗ ಬಹಿರಂಗಗಳು
ಎರಡು ಕಣ್ಣುಗಳಿದ್ದಂತೆ, ಎರಡು ಕಿವಿಗಳಿದ್ದಂತೆ
ಎರಡು ಕೈ, ಎರಡು ಕಾಲುಗಳಿದ್ದಂತೆ.
ಒಂದನ್ನೇ ಆಯ್ಕೆ ಮಾಡಿಕೊಳ್ಳುವುದು ಹೇಗೆ?
ವ್ಯಕ್ತಿಗಳಷ್ಟೇ ಅಲ್ಲ, ಸಮಾಜಗಳು ಕೂಡ
ಈ ಆಯ್ಕೆಯಲ್ಲಿ ಭಾಗವಹಿಸುತ್ತಿವೆ.

ಪೂರ್ವದ ದೇಶಗಳು ಅಂತರ್ಮುಖಿಯಾಗಿ
ಕವಿಗಳನ್ನು, ಅನುಭಾವಿಗಳನ್ನು, ಸಂತರನ್ನು ಸೃಷ್ಟಿಸಿದವು.
ಆದರೆ ದೇಶಗಳು ಬಡವಾಗಿಯೇ ಉಳಿದವು
ಜನರ ಬದುಕು ಅಸಹನೀಯವಾಗುತ್ತಲೇ ಹೋಯಿತು.

ಪಶ್ಚಿಮದ ದೇಶಗಳು ಬಹಿರ್ಮುಖತೆಯನ್ನು ಒಪ್ಪಿಕೊಂಡು
ವಿಜ್ಞಾನಿಗಳನ್ನು, ಇಂಜಿನೀಯರ್ ಗಳನ್ನು ಹುಟ್ಟು ಹಾಕಿತು.
ಆದರೆ ಮನಸ್ಸಿನ ಸಮಾಧಾನ ಇಲ್ಲದೇ ತತ್ತರಿಸಿತು.

ಆದ್ದರಿಂದಲೇ ಪೂರ್ವದ ಅಧ್ಯಾತ್ಮಿಕ ಗುರುಗಳಿಗೆ
ಪಶ್ಚಿಮದಲ್ಲಿ ಭಾರಿ ವ್ಯಾಪಾರ.
ಪಶ್ಚಿಮದ ವ್ಯಾಪಾರಿಗಳಿಗೆ ಪೂರ್ವದಲ್ಲಿ ಭರ್ಜರಿ ವ್ಯವಹಾರ.

ಈ ಎರಡೂ ಅತಿರೇಕಗಳು ಅಪಾಯಕಾರಿ.
ಎರಡಕ್ಕೂ ಬಹುಕಾಲ ಒಂದೇ ಜಾಗದಲ್ಲಿದ್ದು ರೂಢಿಯಿಲ್ಲ
ಜಾಗ ಬದಲಾಯಿಸುತ್ತಲೇ ಇರುತ್ತವೆ
ಇದೊಂದು ವಿಷ ವೃತ್ತ.

ಹಾಗಾದರೆ
ಎಲ್ಲಿ ಅಂತರಂಗ ಮುಗಿಯುತ್ತದೆ ?
ಎಲ್ಲಿ ಬಹಿರಂಗ ಶುರುವಾಗುತ್ತದೆ?
ಹುಡುಕಬಹುದೆ?
ಹೀಗೊಂದು ಗಡಿರೇಖೆ ಇದೆಯೆ?
ಖಂಡಿತ ಇಲ್ಲ.
ಅವೆರಡರ ನಡುವೆ ಯಾವ ಗೆರೆಯೂ ಇಲ್ಲ.
ಇದು ಮನಸ್ಸಿನ ಆಟ.
ಬಹಿರಂಗ, ಅಂತರಂಗದ ವಿಸ್ತರಣೆ ಅಷ್ಟೇ.
ಸೊಸಾನ್ ಹೇಳುತ್ತಿರುವುದು ಕೂಡ ಇದನ್ನೇ.

ಬಹಿರಂಗದ ಸಿಕ್ಕಿನಲ್ಲಿ ಸಿಕ್ಕಿ ಹಾಕಿಕೊಳ್ಳದಿರಿ,
ಅಂತರಂಗದ ಖಾಲೀತನಕ್ಕೆ ಭಾವಪರವಶರಾಗದಿರಿ.
ಆಚರಣೆಗಳ ಸಲುವಾಗಿ ಶ್ರಮಿಸದಿರಿ, ಬೆವರು ಸುರಿಸದಿರಿ,
ಸಹಜವಾಗಿರಿ, ಸಮಾಧಾನವಾಗಿರಿ
ವಿಷಯದ ಅನನ್ಯತೆಯಲ್ಲಿ ಒಂದಾಗಿ
ಆಗ ತಾನೇ ತಾನಾಗಿ
ಗೊಂದಲಗಳು ಮರೆಯಾಗುತ್ತ ಹೋಗುತ್ತವೆ.

~ Hsin Hsin Ming

ಸಮಯ ಸಂದರ್ಭಗಳಿಗನುಸಾರವಾಗಿ ನಡೆದುಕೊಳ್ಳಲು ಸ್ವತಂತ್ರನಾಗಿರದ ವ್ಯಕ್ತಿ,  ಒಬ್ಬ ಗುಲಾಮ. ಎರಡು ಬಗೆಯ ಗುಲಾಮರಿದ್ದಾರೆ : ಅಂತರ್ಮುಖಿಗಳು – ಬಹಿರ್ಮುಖಿಗಳು. ಬಹಿರ್ಮುಖಿಗಳು ಬಹಿರಂಗದ ಗುಲಾಮರು. ಅವರಿಗೆ ಒಳಗೆ ಪ್ರವೇಶ ಮಾಡುವುದು ಅಸಾಧ್ಯ ; ಅವರು ಸಂಪೂರ್ಣವಾಗಿ ದಾರಿ ಮರೆತುಬಿಟ್ಟಿದ್ದಾರೆ. ಒಳ ಪ್ರವೇಶದ ಬಗ್ಗೆ ನೀವು ಅವರ ಜೊತೆ ಮಾತನಾಡಿದರೆ, ಅವರು ಸುಮ್ಮನೇ ನಿಮ್ಮ ಮುಖ ನೋಡುತ್ತಾರೆ ದಿಗ್ಭ್ರಮೆಯಿಂದ. ನೀವು ಏನು ಮಾತನಾಡುತ್ತಿದ್ದೀರಿ ಎನ್ನುವುದು ಅವರಿಗೆ ಅರ್ಥವಾಗುವುದಿಲ್ಲ ; ನೀವು ಏನೋ ಮೂರ್ಖತನದ ಮಾತನಾಡುತ್ತಿದ್ದೀರಿ ಎಂದುಕೊಳ್ಳುತ್ತಾರೆ.

ಅತಿಯಾದ ಅಂತರ್ಮುಖತೆಯನ್ನು ರೂಢಿಸಿಕೊಂಡಿರುವ ವ್ಯಕ್ತಿ ರಿಲೇಟೆಡ್ ನೆಸ್ ನ, ಜವಾಬ್ದಾರಿಯನ್ನ ಕಳೆದುಕೊಳ್ಳಲು ಶುರು ಮಾಡುತ್ತಾನೆ ಮತ್ತು ಬಹುತೇಕ ಕ್ರಿಯೆಗಳನ್ನು ಮಿಸ್ ಮಾಡಿಕೊಳ್ಳುತ್ತಾನೆ. ಅವನು ತನ್ನೊಳಗೆ ತಾನೇ ಕ್ಲೋಸ್ಡ್ ಆಗುತ್ತಾನೆ ; ಅವನು ಒಂದು ಗೋರಿಯ ಹಾಗೆ. ಬಹಿರ್ಮುಖಿ ರಾಜಕಾರಣಿಯಾದರೆ, ಅಂತರ್ಮುಖಿ ಎಸ್ಕೇಪಿಸ್ಟ್ ಆಗುತ್ತಾನೆ – ಎರಡೂ ಕಾಯಿಲೆಗಳೇ, ಎರಡೂ ಮಾನಸಿಕ ವ್ಯಾಧಿಗಳೇ.

ನಿಜವಾಗಿಯೂ ಆರೋಗ್ಯವಂತ ವ್ಯಕ್ತಿ ಎರಡರಿಂದಲೂ ದೂರವಾಗಿರುತ್ತಾನೆ. ಒಳ ಪ್ರವೇಶ ಮತ್ತು ಹೊರ ಪ್ರಯಾಣ ಎರಡೂ ಅವನಿಗೆ ನಿಶ್ವಾಸ, ಉಚ್ಛ್ವಾಸಗಳಂತೆ. ಉಸಿರಿನ ಒಳ ಮತ್ತು ಹೊರ ಪ್ರಯಾಣದಂತೆ. ಎರಡರಲ್ಲೂ ನೀವು ಸ್ವತಂತ್ರರು. ಎರಡರಲ್ಲೂ ಸ್ವತಂತ್ರರಾಗಿರುವುದೆಂದರೆ, ಎರಡನ್ನೂ ಮೀರುವಂತೆ. ಆಗ ನೀವು ಪೂರ್ಣ ಮನುಷ್ಯರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.