ಚೆನ್ನಮಲ್ಲಿಕಾರ್ಜುನನನ್ನು ಬಿಡೆ: ಅಕ್ಕ ಮಹಾದೇವಿ #57

ನೋಟ ಹರಿದು ಮನಸು ನೆಲೆಗೊಂಡಿತು. ಅವನಾರೆಂದು ಗೊತ್ತಿಲ್ಲ. ಭಾವ ಅವನಲ್ಲಿ ನಟ್ಟಿತು. ಅಂಗದ ಕಳೆ ಹೆಚ್ಚಾಗಿ ಘರ್ಷಣೆ ಹುಟ್ಟಿತು ಯಾರು ಏನೆಂದರೂ ಚೆನ್ನಮಲ್ಲಿಕಾರ್ಜುನನನ್ನು ಬಿಡುವವಳಲ್ಲ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ದೃಷ್ಟಿವರಿದು ಮನ ನೆಲೆಗೊಂಡುದಿದೇನೊ
ಆವನೆಂದರಿಯೆ ಭಾವನಟ್ಟುದವ್ವಾ.
ಕಳೆವರಿದು ಅಂಗ ಗಸಣೆಯಾದುದವ್ವಾ.
ಇನ್ನಾರೇನೆಂದಡೆ ಬಿಡೆನು
ಚೆನ್ನಮಲ್ಲಿಕಾರ್ಜುನಲಿಂಗವ [೨೪೩]

[ದೃಷ್ಟಿವರಿದು=ನೋಟ ಹರಿದು; ಕಳೆವರಿದು=ಕಳೆಬೆಳೆದು (?); ಅಂಗ=ದೇಹ; ; ಗಸಣೆ=ಘರ್ಷಣೆ]

ನೋಟ ಹರಿದು ಮನಸು ನೆಲೆಗೊಂಡಿತು. ಅವನಾರೆಂದು ಗೊತ್ತಿಲ್ಲ. ಭಾವ ಅವನಲ್ಲಿ ನಟ್ಟಿತು. ಅಂಗದ ಕಳೆ ಹೆಚ್ಚಾಗಿ ಘರ್ಷಣೆ ಹುಟ್ಟಿತು ಯಾರು ಏನೆಂದರೂ ಚೆನ್ನಮಲ್ಲಿಕಾರ್ಜುನನನ್ನು ಬಿಡುವವಳಲ್ಲ.

ಇಲ್ಲಿ ಕಳೆವರಿದು ಮತ್ತು ಗಸಣೆ ಎಂಬ ಮಾತುಗಳನ್ನು ನೋಡಿದರೆ ಮಿಕ್ಕ ವಚನಕಾರರಲ್ಲಿ ಎದ್ದು ಕಾಣದ ಅಕ್ಕನ ವಚನಗಳಲ್ಲಿ ಮಾತ್ರ ಎದ್ದು ಕಾಣುವ ಒಂದು ಸಂಗತಿ ನನಮ್ಮ ಗಮನ ಸೆಳೆಯುತ್ತದೆ. ಮನಸ್ಸು ಭಾವಗಳ ಬೆಳವಣಿಗೆಯಾಗುವಾಗ, ದೇಹದಲ್ಲಿ ಮನಸಿನಲ್ಲಿ ಹುಟ್ಟುವ ಕಳೆಯ ಘರ್ಷಣೆಯನ್ನು ಕಳೆದುಕೊಳ್ಳುವ ಹಂಬಲ ಇರುವವಳಾಗಿ ಅಕ್ಕ  ಕಾಣುತ್ತಾಳೆ. ಈ ವಚನದ ಹಾಗೆಯೇ  ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ/ ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ ಎಂದು ಆರಂಭವಾಗುವ ಅಲ್ಲಮ ವಚನವನ್ನು ನೋಡಿ [೨.೧೨೨೯]. ಅಕ್ಕ ಮತ್ತು ಅಲ್ಲಮ ಇಬ್ಬರೂ ದೇಹ, ಮನಸು, ಭಾವಗಳ ವ್ಯವಸಾಯ ಎಂಬ ರೂಪಕವನ್ನು ಬಳಸುತ್ತಾರೆ. ಬುದ್ಧಿ ಭಾವಗಳ ಬೆಳವಣಿಗೆಯಲ್ಲಿ ಅನುಭವಿಸಲೇಬೇಕಾದ ಗಸಣೆ-ಘರ್ಷಣೆ ಮತ್ತು ಮಾಡಲೇಬೇಕಾದ ಒಳಮನಸಿನ ದುಡಿಮೆಯ ಶ್ರಮದ ಬಗ್ಗೆ ಹೇಳುತಿದ್ದಾರೆ ಅನಿಸುತ್ತದೆ. ಕಳೆ ಎಂದರೆ ನಮ್ಮ ಉಪಯೋಗಕ್ಕೆ ಒದಗದ, ನಮಗೆ ಬೇಕಾದ ಬೆಳೆಯ ಬೆಳವಣಿಗೆಗೆ ಅಡ್ಡಿಮಾಡುವ ಸಸ್ಯಗಳು. ನಿಸರ್ಗದಲ್ಲಿ ಕಳೆ ಅನ್ನುವ ಪ್ರಭೇದ ಇರಲು ಸಾಧ್ಯವಿಲ್ಲ. ಇದು ಕಳೆ ಎಂದು ಗುರುತಿಸುವುದು ಮನುಷ್ಯ ಮನಸ್ಸು, ಮನುಷ್ಯ ಬಯಕೆ, ಮನುಷ್ಯ ಕಲ್ಪನೆ.

ಆಧ್ಯಾತ್ಮವು ಬೆಳೆ ಎಂದು ತಿಳಿದರೆ ಆಗ ದೇಹಮೂಲದ ಕಾಮ, ಪ್ರೀತಿಗಳೆಲ್ಲ ಕಳೆಯಾಗಿ ಕಾಣುತ್ತವೆ. ಅವನ್ನು ನೀಗಿಕೊಳ್ಳುವುದು ಕಳೆಯನ್ನು ಇಲ್ಲವಾಗಿಸುವಷ್ಟೇ ಕಷ್ಟದ ಕೆಲಸ, ಒಳ  ಘರ್ಷಣೆ. ಈ ವಚನವನ್ನು ನುಡಿಯುತ್ತಿರುವ ಮನಸಿಗೆ  ಸ್ಪಷ್ಟವಾಗಿರುವುದೇನೆಂದರೆ ನನ್ನ ಇಷ್ಟದ ಚೆನ್ನಮಲ್ಲಿಕಾರ್ಜುನ ನನಗೆ ಬೇಕು ಅಷ್ಟೇ. ಕಳೆಯೋ, ಕಸವೋ ಎಷ್ಟು ನೋವು ಘರ್ಷಣೆ ಅನುಭವಿಸಬೇಕೋ ಅದು ನನಗೆ ಲೆಕ್ಕಕ್ಕಿಲ್ಲ ಅನ್ನುವಂತೆ ತೋರುತ್ತದೆ.

ಇದನ್ನೆಲ್ಲ ಸಂಸ್ಕೃತದ ಒಂದು ಮಾತಿನಲ್ಲಿ ನಿಷ್ಠೆ ಮತ್ತು ಭಕ್ತಿಯ ಲಕ್ಷಣ ಅಂದುಬಿಟ್ಟರೆ ಪ್ರೀತಿಯಲ್ಲೂ ಭಕ್ತಿಯಲ್ಲೂ ಇರುವ ತೊಳಲಾಟ ಕಣ್ಮರೆಯಾಗುತ್ತದೆ, ಮನಮರೆಯಾಗುತ್ತದೆ, ಬೇಸಾಯದ ಕಷ್ಟದ ಅರಿವೇ ಇಲ್ಲದ ಸಂತೃಪ್ತ ಗ್ರಾಹಕರಷ್ಟೇ ಅಗುತ್ತೇವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.