ಯಾವುದು ಸಾಧ್ಯವೋ ಅದನ್ನು ನೀವು ಬಯಸುವಾಗ, ಅಸಾಧ್ಯವೂ ಸಂಭವಿಸಬಹುದು. ಯಾವಾಗ ನೀವು ಅಸಾಧ್ಯಕ್ಕಾಗಿ ಹಾತೊರೆಯುತ್ತೀರೋ ಆಗ ಸಾಧ್ಯವೂ ಕಷ್ಟಕರವಾಗುತ್ತದೆ~ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ತುದಿಗಾಲ ಮೇಲೆ ನಿಂತವ
ಉರುಳಿ ಬೀಳುವ ಸಾಧ್ಯತೆಗಳೇ ಹೆಚ್ಚು.
ಎಲ್ಲರಿಗಿಂತ ಮುಂದೆ ಓಡಿ ಹೋದವ
ಬಹಳ ದೂರ ಹೋಗಲಾರ.
ಮಿಂಚಲು ಪ್ರಯತ್ನಿಸುವವನ
ಬೆಳಕು, ಕಂದುತ್ತ ಹೋಗುವುದು.
ತನ್ನನ್ನು ತಾನು ಸಾರಿಕೊಳ್ಳುವವ
ತನಗೆ ತಾನೇ ಅಪರಿಚಿತ.
ಪರರ ಮೇಲೆ ಹತೋಟಿ ಸಾಧಿಸಬಲ್ಲವ
ತನ್ನ ಮೇಲೆ ಅಧಿಕಾರ ಹೊಂದಲು ಅಸಮರ್ಥ.
ಕೆಲಸಕ್ಕೆ ಜೋತು ಬೀಳುವವ
ಶಾಶ್ವತವಾದದ್ದನ್ನು ಸೃಷ್ಟಿಸಲಾರ.
ಮಾಡಬೇಕಾದ ಕೆಲಸಮಾಡಿ
ಮರೆತು ಬಿಟ್ಟಾಗ ಮಾತ್ರ
‘ತಾವೋ’ ಜೊತೆಗೆ ಒಪ್ಪಂದ ಸಾಧ್ಯ.
~ ಲಾವೋತ್ಸೇ
ಎರಡು ಬಗೆಯ ಜನರಿರುತ್ತಾರೆ, Low Energy ಮತ್ತು High Energy ಜನರು. ಹೈ ಎನರ್ಜಿ ಅಂಥ ಒಳ್ಳೆಯದೂ ಅಲ್ಲ ಮತ್ತು Low Energy ಅಂಥ ಕೆಟ್ಟದ್ದೂ ಅಲ್ಲ. ಲೋ ಎನರ್ಜಿಯ ಜನ ನಿಧಾನವಾಗಿ ಚಲಿಸುತ್ತಾರೆ, ಅವರು ಹಾರುವುದಿಲ್ಲ , ಅವರು ಸ್ಫೋಟಗೊಳ್ಳುವುದಿಲ್ಲ. ಅವರು ಗಿಡ ಮರಗಳು ಬೆಳೆಯುವ ಹಾಗೆ ನಿಧಾನವಾಗಿ ಬೆಳೆಯುತ್ತಾರೆ. ಅವರಿಗೆ ಹೆಚ್ಚು ಸಮಯ ಬೇಕು, ಆದರೆ ಅವರ ಬೆಳವಣಿಗೆ ಹೆಚ್ಚು ಖಚಿತ, ಹೆಚ್ಚು ನಿರ್ದಿಷ್ಟ ಮತ್ತು ಅವರಿಗೆ ಹಿಂದೆ ಸರಿಯುವುದು ಕಷ್ಟ. ಒಮ್ಮೆ ಅವರು ನಿರ್ದಿಷ್ಟ ಪಾಯಿಂಟ್ ಮುಟ್ಟಿದ ಮೇಲೆ ಅವರು ಅದನ್ನು ಕಳೆದುಕೊಳ್ಳುವ ಸಾಧ್ಯತೆ ಬಹಳ ಕಡಿಮೆ.
ಹೈ ಎನರ್ಜಿಯ ಜನ ಬಹಳ ವೇಗದಲ್ಲಿ ಚಲಿಸುತ್ತಾರೆ, ಅವರು ಜಿಗಿಯುತ್ತಾರೆ, ಹಾರುತ್ತಾರೆ. ಅವರ ಕೆಲಸ ಬಹಳ ವೇಗದಿಂದ ಮುನ್ನಡೆಯುತ್ತದೆ. ಇದು ಒಳ್ಳೆಯದು ಆದರೆ ಅವರ ಸಮಸ್ಯೆಯೆಂದರೆ, ಎಷ್ಟು ಬೇಗ ಅವರು ಸಾಧಿಸಿದ್ದಾರೋ ಅಷ್ಟೇ ಬೇಗ ಅವರು ಅದನ್ನು ಕಳೆದುಕೊಳ್ಳಲೂ ಬಹುದು. ಅವರು ಜಂಪ್ ಮಾಡುತ್ತಾರೆ, ಹಾರುತ್ತಾದ್ದರಿಂದ ಬಹು ಬೇಗ ಅವರು ಸೋತು ಹೋಗಬಹುದು, ಅವರದು ಖಚಿತ, ನಿರ್ದಿಷ್ಟ ಬೆಳವಣಿಗೆ ಅಲ್ಲ. ಖಚಿತ ಬೆಳವಣಿಗೆಗೆ ನಿಧಾನ ಮಾಗುವಿಕೆ, ಸಮಯ, ಪಕ್ವವಾಗುವಿಕೆ ಬೇಕು.
ದಿನ ನಿತ್ಯದ ಲೌಕಿಕ ಜಗತ್ತಿನ ಸ್ಪರ್ಧೆಯಲ್ಲಿ ಲೋ ಎನರ್ಜಿಯ ಸೋತು ಬಿಡಬಹುದು. ಅವರು ಯಾವಾಗಲೂ ಹಿಂದೆ ಉಳಿಯಬಹುದು. ಆದ್ದರಿಂದ ಈ ಕಾರಣವಾಗಿ ಅವರು ಖಂಡನೆಗೂ ಗುರಿಯಾಗಬಲ್ಲರು. ಲೌಕಿಕದ ಸ್ಪರ್ಧೆ ತುರುಸಿನದ್ದಾದರಿಂದ, ಅವರು ರೇಸ್ ನಿಂದ ಹೊರಗೆ ಉಳಿಯಬಹುದು, ಸ್ಫರ್ಧೆಯಲ್ಲಿ ಮುಂದುವರೆಯುವುದು ಅವರಿಗೆ ಸಾಧ್ಯವಾಗದೇ ಇರಬಹುದು. ಆದರೆ ಅಧ್ಯಾತ್ಮಿಕ ಜಗತ್ತಿನಲ್ಲಿ, ಅವರು ಹೈ ಎನರ್ಜಿ ಜನರಿಗಿಂತ ಆಳವಾಗಿ ಬೆಳವಣಿಗೆಯನ್ನು ಸಾಧಿಸಬಲ್ಲರು ಏಕೆಂದರೆ ಅವರು ಸಹನೆಯಿಂದ ಕಾಯಬಲ್ಲರು. ಅವರಿಗೆ ಯಾವ ಅವಸರವೂ ಇಲ್ಲ. ಅವರಿಗೆ ಇನ್ಸ್ಟಂಟ್ ಆಗಿ ಯಾವುದೂ ಬೇಕಿಲ್ಲ. ಅವರು ಯಾವತ್ತೂ ಅಸಾಧ್ಯವನ್ನು ನಿರೀಕ್ಷೆ ಮಾಡುವುದಿಲ್ಲ; ಅವರು ಕೇವಲ ಸಂಭವನೀಯತೆಗಾಗಿ ಹಾತೊರೆಯುತ್ತಾರೆ.
ಒಬ್ಬ ಸದ್ಗ್ರಹಸ್ಥ, ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬಂದು ಅವನನ್ನು ತನ್ನ ಹೊಸ ಮನೆಯ ಕಾರ್ಯಕ್ರಮ ಒಂದಕ್ಕೆ ಆಹ್ವಾನಿಸಿದ.
ಮಾಸ್ಟರ್ : ನನಗೆ ಬಿಡುವಿಲ್ಲ, ಬರಲು ಆಗುವುದಿಲ್ಲ
ಗ್ರಹಸ್ಥ : ಏನು ಕೆಲಸ ಮಾಡುತ್ತಿದ್ದೀರಿ? ನನ್ನ ಸಹಾಯ ಏನಾದರೂ ಬೇಕೆ?
ಮಾಸ್ಟರ್ : ಏನೂ ಮಾಡುತ್ತಿಲ್ಲ. ಏನೂ ಮಾಡದಿರುವುದೇ ಝೆನ್ ಸನ್ಯಾಸಿಯ ಮುಖ್ಯ ಕೆಲಸ
ಸ್ವಲ್ಪ ದಿನಗಳ ನಂತರ ಮತ್ತೆ ಆ ಗ್ರಹಸ್ಥ, ಮಾಸ್ಟರ್ ನನ್ನು ಮತ್ತೆ ತನ್ನ ಮನೆಗೆ ಆಹ್ವಾನಿಸಿದ.
ಮಾಸ್ಟರ್ : ನನಗೆ ಬಿಡುವಿಲ್ಲ, ಬರಲು ಆಗುವುದಿಲ್ಲ “
ಗ್ರಹಸ್ಥ : ಈಗ ಏನು ಮಾಡುತ್ತಿದ್ದೀರಿ?
ಮಾಸ್ಟರ್: ಏನೂ ಮಾಡುತ್ತಿಲ್ಲ .
ಗ್ರಹಸ್ಥ : ಆವತ್ತೂ ನೀವು ಅದನ್ನೇ ಮಾಡುತ್ತಿದ್ದಿರಿ, ಅಲ್ಲವೆ?
ಮಾಸ್ಟರ್ : ಹೌದು, ಅದು ಇನ್ನೂ ಮುಗಿದಿಲ್ಲ.

