ಭೂತಕಾಲದೊಂದಿಗಿನ ನಮ್ಮ ಸೇತುವೆಯನ್ನು ಮುರಿದುಕೊಳ್ಳುವುದು ಯಾವಾಗಲೂ ಒಳ್ಳೆಯದು. ಆಗ ಮಾತ್ರ ಜೀವಂತಿಕೆ, ಮುಗ್ಧತೆ ಮತ್ತು ಬಾಲ್ಯದ ಅನುಭವವನ್ನು ಉಳಿಸಿಕೊಳ್ಳುವುದು ಸಾಧ್ಯ. ಬಹಳಷ್ಟು ಬಾರಿ ನಾವು ಈ ಎಲ್ಲ ಸೇತುವೆಗಳನ್ನು ಮುರಿಯಲೇ ಬೇಕು, ಶುದ್ಧತೆಯನ್ನು ಕಾಯ್ದುಕೊಳ್ಳಲು ಮತ್ತು ಮತ್ತೆ ಹೊಸದಾಗಿ ಶುರು ಮಾಡಲು~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನೀನು
ದಾರಿಯ ಮೇಲೆ
ಕಾಲಿಡುತ್ತ ಹೋದಂತೆ
ದಾರಿ ತೆರೆದುಕೊಳ್ಳುತ್ತ ಹೋಗುತ್ತದೆ.
ನೀನು
ನಾಶವಾಗುತ್ತ ಹೋದಂತೆ
ಬದುಕು ಹುಟ್ಟುತ್ತ ಹೋಗುತ್ತದೆ.
ನೀನು
ಕಿರಿದಾಗುತ್ತ ಹೋದಂತೆ
ಜಗತ್ತಿಗೆ ನಿನ್ನ ತುಂಬಿಕೊಳ್ಳುವುದು
ಅಸಾಧ್ಯವಾಗುತ್ತ ಹೋಗುತ್ತದೆ.
ಆಗ ಜನ
ನಿನ್ನ ಇರುವನ್ನು ನೋಡುತ್ತಾರೆ
ಆದರೆ ಅಲ್ಲಿ
‘ನೀನು’ ಇರುವುದಿಲ್ಲ.
– ರೂಮಿ
ಯಾವಾಗ ನೀವು ಒಂದು ಸಂಗತಿಯನ್ನು ಶುರು ಮಾಡುತ್ತೀರೋ ಆಗ ಮತ್ತೆ ಮಗುವಾಗುತ್ತೀರಿ. ನನ್ನ ಸಾಧನೆ ಪೂರ್ಣ ಎಂದು ನೀವು ಥಿಂಕ್ ಮಾಡಲು ಶುರು ಮಾಡಿದ ಕ್ಷಣವೇ ನೀವು ಬ್ರಿಡ್ಜ್ ನಾಶ ಮಾಡಲು ಸಕಾಲ, ಏಕೆಂದರೆ ಹಾಗೆಂದುಕೊಳ್ಳುವುದು ಸಾವು ಸೆಟಲ್ ಆಗುತ್ತಿರುವುದರ ಸೂಚನೆ. ಈಗ ನೀವು ಕೇವಲ ಒಂದು ಮಾರಾಟದ ವಸ್ತುವಾಗುತ್ತಿದ್ದೀರಿ. ಮತ್ತು ಸೃಜನಶೀಲ ವ್ಯಕ್ತಿ ಹಳತಿಗೆ ಪ್ರತಿ ಬಾರಿ ಸಾಯಬೇಕು ಏಕೆಂದರೆ ಸೃಜನಶೀಲ ಕ್ರಿಯೆ ಎನ್ನುವುದು ಮತ್ತೆ ಮತ್ತೆ ಹುಟ್ಟುವ ಕ್ರಿಯೆ. ನೀವು ಮತ್ತೆ ಹುಟ್ಟಲಿಲ್ಲವಾದರೆ ನೀವು ಸೃಷ್ಟಿ ಮಾಡಿದ್ದೆಲ್ಲ ಪುನರಾವರ್ತನೆ. ನೀವು ಮತ್ತೆ ಹುಟ್ಟಿದಾಗ ಮಾತ್ರ ನಿಮ್ಮಿಂದ ಹೊಸದೊಂದು ಹುಟ್ಟುವುದು ಸಾಧ್ಯ.
ಬಹಳಷ್ಟು ಬಾರಿ ಮಹಾ ಮಹಾ ಕಲಾವಿದರು, ಕವಿಗಳು, ಪೇಂಟರ್ ಗಳು ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರ ಮೊದಲ ಕೃತಿಯೇ ಅವರ ಶ್ರೇಷ್ಠ ಕೃತಿಯಾಗಿರುತ್ತದೆ. ಖಲೀಲ್ ಜಿಬ್ರಾನ್ ತನ್ನ ಆಚಾರ್ಯ ಕೃತಿ ‘ಪ್ರವಾದಿ’ ರಚಿಸಿದಾಗ, ಅವನಿಗೆ ಕೇವಲ ಇಪ್ಪತ್ತು, ಇಪ್ಪತ್ತೊಂದು ವರ್ಷ, ಮತ್ತು ಅದು ಅವನ ಕೊನೆಯ ಶ್ರೇಷ್ಠ ಕೃತಿಯೂ ಹೌದು. ಮುಂದೆ ಅವನು ಎಷ್ಟೋ ಒಳ್ಳೆಯ ಕೃತಿಗಳನ್ನು ರಚಿಸಿದ್ದಾನಾದರೂ, ಅವನ ಬೇರೆ ಯಾವ ಕೃತಿಯೂ ಪ್ರವಾದಿಯ ಮಟ್ಟಕ್ಕೇರಲಿಲ್ಲ. ಮುಂದೆ ಅವನು ಸೂಕ್ಷ್ಮವಾಗಿಯಾದರೂ ಪ್ರವಾದಿಯ ಥಾಟ್ ಗಳನ್ನು ರಿಪೀಟ್ ಮಾಡುತ್ತಲೇ ಹೋದ.
ಹಾಗಾಗಿ, ಒಬ್ಬ ಕವಿ, ಒಬ್ಬ ಪೇಂಟರ್, ಒಬ್ಬ ಸಂಗೀತಗಾರ, ಒಬ್ಬ ಕಲಾವಿದ ಯಾರು ಪ್ರತಿದಿನ ಹೊಸತೊಂದನ್ನು ಸೃಷ್ಟಿ ಮಾಡಬೇಕಾಗಿದೆಯೋ ಅವರಿಗೆ ನಿನ್ನೆಯನ್ನ ಪೂರ್ಣವಾಗಿ ಮರೆತುಬಿಡುವ ಪ್ರಚಂಡ ಅವಶ್ಯಕತೆಯಿದೆ. ಅವರ ಕಾಗದ ಸ್ವಚ್ಛ ಬಿಳಿಯಾಗಿರಬೇಕು ಮತ್ತು ಈ ಹೊಸತನದಲ್ಲಿಯೇ ಸೃಜನಶೀಲತೆಯ ಹುಟ್ಟು ಇದೆ.

