ನಾವು ಹೃದಯಗಳ ಮೂಲಕ ಹೋಗದೇ ಅದನ್ನು ಬೈಪಾಸ್ ಮಾಡಿ ತಲೆಯನ್ನು ತಲುಪಿದ್ದೇವೆ. ನಾವು ಶಾರ್ಟಕಟ್ ದಾರಿಯನ್ನು ಬಳಸಿದ್ದೇವೆ. ಹೃದಯವನ್ನು ನಿರ್ಲಕ್ಷ ಮಾಡಿದ್ದೇವೆ, ನಿರಾಕರಿಸಿದ್ದೇವೆ – ಏಕೆಂದರೆ ಹೃದಯ ಎನ್ನುವುದು ಬಹಳ ಅಪಾಯಕಾರಿಯಾದ ವಿದ್ಯಮಾನ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸತ್ಯದ ಹಾದಿಯ ಮೇಲೆ
ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು
ಹೃದಯವೇ ಹೊರತು
ಬುದ್ಧಿಯಲ್ಲ.
ಈ ಪ್ರಯಾಣದಲ್ಲಿ ಹೃದಯ
ನಿಮ್ಮ ಪ್ರಧಾನ ಮಾರ್ಗದರ್ಶಿಯಾಗಿರಲಿ.
‘ಅಹಂ’ ತಕರಾರು ಮಾಡಿದರೆ
ಮುಟ್ಟಿ ಮಾತನಾಡಿಸಿ, ಒಪ್ಪಿಸಿ
ಸಾಧ್ಯವಾಗದಿದ್ದರೆ ಸವಾಲು ಹಾಕಿ
ಭೀಕರ ಯುದ್ಧವಾದರೂ ಚಿಂತೆಯಲ್ಲ
ಹೃದಯ, ನಿಮ್ಮ ಸುಳ್ಳು ಅಹಂ ಮೇಲೆ
ವಿಜಯ ಸಾಧಿಸಲಿ.
ನಿಮ್ಮೊಳಗಿನ
‘ಅಹಂ’ ನ ಎಳೆಗಳನ್ನು ಸ್ಪಷ್ಟವಾಗಿ
ಗುರುತಿಸಬಲ್ಲಿರಾದರೆ,
ಸತ್ಯದ ಹಾದಿಯಲ್ಲಿನ ದೊಡ್ಡ ಆತಂಕವೊಂದನ್ನು
ಯಶಸ್ವಿಯಾಗಿ ನಿಭಾಯಿಸಿದಂತೆ.
~ ಶಮ್ಸ್
ಹೃದಯ ಅನಿಯಂತ್ರಿತವಾದದ್ದು, ಮತ್ತು ಅನಿಯಂತ್ರಿತವಾದ ಎಲ್ಲವೂ ನಮಗೆ ಹೆದರಿಕೆಯನ್ನುಂಟು ಮಾಡುತ್ತದೆ. ತಲೆಯನ್ನು ನಿಯಂತ್ರಿಸಬಹುದು. ಅದು ನಿಮ್ಮೊಳಗೆ ಇದೆ ಮತ್ತು ಅದನ್ನು ನೀವು ಮ್ಯಾನೇಜ್ ಮಾಡಬಹುದು. ಹೃದಯ ನಿಮಗಿಂತಲೂ ವಿಶಾಲವಾದದ್ದು, ನೀವು ಅದರೊಳಗೆ ಇರುವಿರಿ, ಆದರೆ ತಲೆ ನಿಮ್ಮೊಳಗೇ ಇರುವಂಥದು. ಹೃದಯ ಜಾಗೃತವಾದಾಗ, ನೀವು ಹೃದಯದ ಸಣ್ಣ ಭಾಗ ಎನ್ನುವುದನ್ನು ಅರಿತು ನಿಮಗೆ ಆಶ್ಚರ್ಯವಾಗಬಹುದು. ಹೃದಯ ನಮಗಿಂತ ವಿಸ್ತಾರವಾದದ್ದು ಮತ್ತು ನಮಗೆ ಈ ವಿಸ್ತಾರದಲ್ಲಿ ಕಳೆದು ಹೋಗುವ ಭಯ.
ಹೃದಯದ ಕೆಲಸ ಬಹಳ ನಿಗೂಢವಾದದ್ದು, ಮತ್ತು ನಿಗೂಢತೆ ಯಾವಾಗಲೂ ನಮ್ಮನ್ನು ಮತ್ತೊಮ್ಮೆ ಚಿಂತಿಸುವಂತೆ ಮಾಡುತ್ತದೆ. ಯಾರಿಗೆ ಗೊತ್ತು ಮುಂದೆ ಏನಾಗುವುದು? ಮತ್ತು ಹೇಗೆ ಇದೆಲ್ಲದರೊಂದಿಗೆ ಹೊಂದಿಕೊಂಡು ಹೋಗುವುದು? ಹೃದಯಕ್ಕೆ ಸಂಬಂಧಿಸಿದಂತೆ ನಮ್ಮ ಪೂರ್ವಸಿದ್ಧತೆ ಇಲ್ಲವೇ ಇಲ್ಲ. ಹೃದಯಕ್ಕೆ ಸಂಬಂಧಿಸಿದಂತೆ ಸಂಗತಿಗಳು ಅನಿರೀಕ್ಷಿತವಾಗಿ ಸಂಭವಿಸುತ್ತವೆ. ಹೃದಯ ಯಾವಾಗಲೂ ಅಚ್ಚರಿಗಳನ್ನು ಎದುರು ಮಾಡುತ್ತದೆ ಆದ್ದರಿಂದಲೇ ಮನುಷ್ಯ ಯಾವಾಗಲೂ ಹೃದಯವನ್ನು ಬೈ ಪಾಸ್ ಮಾಡಲು ನಿರ್ಧರಿಸಿರುವುದು. ಆದ್ದರಿಂದಲೇ ಅವನು ಹೃದಯವನ್ನು ಬೈ ಪಾಸ್ ಮಾಡಿ ವಾಸ್ತವತೆಯ ಜೊತೆ ತಲೆಯ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸುವುದು.
********************************

