ಯಾವುದೇ ಸಂಗತಿಯನ್ನು ವಿಭಿನ್ನ ಕೋನಗಳಿಂದ ಗಮನಿಸುವುದು ಒಳ್ಳೆಯದು, ಏಕೆಂದರೆ ಜನರಿಗೆ ವಿಭಿನ್ನ ದೃಷ್ಟಿಕೋನಗಳಿರುತ್ತವೆ. ` ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಾವು ನಮ್ಮೊಳಗೆ ಜಗತ್ತನ್ನು ಕ್ಯಾರಿ ಮಾಡುತ್ತಿರುತ್ತೇವೆ, ಮತ್ತು ನಿಮಗೆ ನಿಜವಾಗಿಯೂ ಇನ್ನೊಬ್ಬ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ, ನೀವು ಅವರನ್ನು ಸಾಧ್ಯವಾದಷ್ಟು ವಿಭಿನ್ನ ದೃಷ್ಟಿಕೋನಗಳಿಂದ ಅರ್ಥ ಮಾಡಿಕೊಳ್ಳಬೇಕು. ಆಗ ನೀವು ಇಬ್ಬರೂ ಸದಾ ಒಬ್ಬರನ್ನೊಬ್ಬರು ಮೆಚ್ಚಿಸಬಹುದು, ಏಕೆಂದರೆ ಯಾರ ಬಗ್ಗೆಯೂ ನಿಮಗೆ ನಿರ್ದಿಷ್ಟ ಗ್ರಹಿಕೆಗಳಿರುವುದಿಲ್ಲ, ಯಾರ ಪಾತ್ರಗಳೂ ಫಿಕ್ಸ್ಡ್ ಆಗಿರುವುದಿಲ್ಲ. ಮತ್ತು ಕೆಲ ದಿನಗಳ ನಂತರ ನೀವು ಮತ್ತೆ ಬದಲಾವಣೆಗಾಗಿ ಗಂಡ ಹೆಂಡತಿಯ ಪಾತ್ರಗಳನ್ನು ಅಭಿನಯಿಸುತ್ತಿರುವಾಗ, ಇದು ನಿಮಗೆ ಸುಂದರ ಅನಿಸುತ್ತದೆ, ಹೊಸತು ಅನಿಸುತ್ತದೆ. ಆಗ ನಿಮಗೆ ನೀವು ಎಷ್ಟೋ ದಿನಗಳ ನಂತರ ಭೇಟಿ ಮಾಡುತ್ತಿರುವ ಅನುಭವವಾಗುತ್ತದೆ.
ಬದಲಾವಣೆ ಯಾವತ್ತೂ ಒಳ್ಳೆಯದು. ಯಾವಾಗಲೂ ವ್ಯಕ್ತಿಯೊಂದಿಗೆ ವ್ಯವಹರಿಸುವ ಹೊಸ ವಿಧಾನಗಳನ್ನ, ಹೊಸ ರೀತಿಗಳನ್ನ, ಹೊಸ ಸಂದರ್ಭಗಳನ್ನ ಕಂಡುಕೊಳ್ಳಿ. ರೂಟೀನ್ ಲ್ಲಿ ಮುಳುಗಿ ಹೋಗಿ ಬಿಡಬೇಡಿ. ಆಗ ನಿಮ್ಮ ಸಂಬಂಧ ಯಾವತ್ತೂ ನದಿಯಂತೆ ಹರಿಯುತ್ತಿರುತ್ತದೆ. ಸಂಬಂಧಗಳಲ್ಲಿ ಯಾವತ್ತೂ ಅಚ್ಚರಿಗಳು ಎದುರಾಗಬಹುದು : ಅಚ್ಚರಿಗೆ ಒಳಗಾಗುವುದು, ಅಚ್ಚರಿಯನ್ನುಂಟು ಮಾಡುವುದು ಯಾವಾಗಲೂ ಒಳ್ಳೆಯದು. ಇಂಥ ಸಂಬಂಧಗಳು ಯಾವತ್ತೂ ಜೀವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ.
ತನ್ನ ಗೆಳತಿಯರೆಲ್ಲ ಬಿಟ್ಚು ಹೋದರೆಂದು ನಸ್ರುದ್ದೀನ್ ನ ಹೆಂಡತಿ ಬೇಸರದಲ್ಲಿದ್ದಳು.
“ ನನ್ನ ಮಾತು ಕೇಳು ಒಂದು ತಿಂಗಳು ಏಕಾಂತದಲ್ಲಿರು, ಸ್ವತಃ ನಿನ್ನ ಜೊತೆ ಕಾಲ ಕಳೆ ಆಗ ನಿನ್ನ ಬೇಸರ ಕಡಿಮೆಯಾಗಬಹುದು “
ನಸ್ರುದ್ದೀನ್ ಹೆಂಡತಿಗೆ ಸಲಹೆ ನೀಡಿದ.
“ ಏನು ! ಒಂದು ತಿಂಗಳು ನಾನು ಒಬ್ಬಳೇ ಇರಬೇಕಾ ?
ಸಾಧ್ಯವಿಲ್ಲ ನನಗೆ ಬೋರ್ ಆಗತ್ತೆ “
ನಸ್ರುದ್ದೀನ್ ನ ಹೆಂಡತಿ ಏಕಾಂತವನ್ನು ನಿರಾಕರಿಸಿದಳು.
“ ನೋಡು ನಿನ್ನ ಸಹವಾಸವೇ ನಿನಗೆ ಬೋರ್ ಅನಿಸುವಾಗ, ನಿನ್ನ ಗೆಳತಿಯರಿಗೆ ಹೇಗೆ ನೀನು ಇಂಟರೆಸ್ಟಿಂಗ್ ಆಗಿರುವುದು ಸಾಧ್ಯ? “
ನಸ್ರುದ್ದೀನ್ ಹೆಂಡತಿಗೆ ಅವಳ ಸಮಸ್ಯೆಯ ಕಾರಣ ವಿವರಿಸಿದ.
********************************

