ಸಾಧನಗಳು ಮತ್ತು ತತ್ವಗಳು (Devices & Principles): ಓಶೋ 365 #Day 203

ಎಲ್ಲ ಧರ್ಮಗಳು ಮೂಲಭೂತವಾಗಿ ಪ್ರಜ್ಞೆಯನ್ನ ಎಚ್ಚರಿಸಿಕೊಳ್ಳುವ ವಿಧಾನಗಳು. ಆದರೆ ಸಿದ್ಧಾಂತಗಳ ಕಾರಣವಾಗಿ ಎಲ್ಲ ಧರ್ಮಗಳು ದಾರಿ ತಪ್ಪಿವೆ. ಸಿದ್ಧಾಂತಗಳು ಮುಖ್ಯವಲ್ಲ; ಆ ಸಿದ್ಧಾಂತಗಳು ವಿಧಾನಗಳನ್ನ ಪೊರೆಯುವ ಸಾಧನಗಳು. ಅವು ಬೇಕಾಬಿಟ್ಟಿಯಾದವು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

**************

ಧರ್ಮ ಮತ್ತು ದ್ರೋಹದ ಆಚೆಗೆ
ಒಂದು ಬಯಲು ಇದೆ
ಪ್ರೇಮ, ಮನೆ ಕಟ್ಟಿಕೊಂಡಿರುವುದು
ಈ ಬಯಲಿನ ನಟ್ಟ ನಡುವೆ.
ಸಂತರು ತಲೆ ಬಗ್ಗಿಸುವುದು
ಇಲ್ಲಿ ಮಾತ್ರ.

ನಂಬಿಗಸ್ತರಿಗೆ ಮತ್ತು
ದ್ರೋಹಿಗಳಿಗೆ
ಇಲ್ಲಿ ಜಾಗ ಇಲ್ಲ.

– ರೂಮಿ

ಕ್ರಿಶ್ಚಿಯನ್ನರು ಕೇವಲ ಒಂದು ಜನ್ಮವನ್ನು ನಂಬುತ್ತಾರೆ. ಈ ನಂಬಿಕೆಯು ಜನರನ್ನು ಪ್ರಜ್ಞಾವಂತರನ್ನಾಗುಸುವ ಸಲಕರಣೆ. ನಿಮಗೆ ಆಶ್ಚರ್ಯವಾಗಬಹುದು ಏಕೆಂದರೆ, ಸಾಮಾನ್ಯವಾಗಿ ನಾವು ಇದನ್ನು ತತ್ವ ( principle ) ಎಂದುಕೊಳ್ಳುತ್ತೇವೆ. ಇದು ತತ್ವ ಅಲ್ಲ ; ಇದು ಕೇವಲ ಐಡಿಯಾವನ್ನ ನಿಮ್ಮೊಳಗೆ ಅಚ್ಚೊತ್ತುವ ಸಾಧನ. ಇದು ಒಂದು ಬಗೆಯ ಅಚ್ಚೊತ್ತುವಿಕೆ; “ ಅನವಶ್ಯಕ ಸಂಗತಿಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ಅಧಿಕಾರ, ಹಣ, ಪ್ರತಿಷ್ಠೆಯ ಹಿಂದೆ ಬೀಳಬೇಡಿ, ಏಕೆಂದರೆ ನಿಮಗಿರುವುದು ಕೇವಲ ಒಂದೆ ಜನ್ಮ. ಸಾವು ಸಮೀಪಿಸುತ್ತಿದೆ. ಹಾಗಾಗಿ ಎಚ್ಚರದಿಂದಿರಿ, ಎಲ್ಲವನ್ನು ಗಮನಿಸುತ್ತಿರಿ, ನೀವು ಏನು ಮಾಡುತ್ತಿರುವಿರಿ ಎನ್ನುವುದರ ಬಗ್ಗೆ ನಿಮ್ಮ ಗಮನವಿರಲಿ.” ಇದು ಸಾಧನ, ತತ್ವ ಅಲ್ಲ.

ಆದರೆ ಇಲ್ಲಿಯೇ ಸಂಗತಿಗಳು ತಪ್ಪಾಗುವುದು : ಕ್ರಿಶ್ಚಿಯನ್ನರು ಇದನ್ನು ತತ್ವ ಎಂದುಕೊಂಡರು, ಇದನ್ನೇ ಅವರು ಫಿಲಾಸೊಫಿಯಾಗಿಸುವ ಪ್ರಯತ್ನ ಮಾಡಿದರು. ಆಗ ಇದು ಖಂಡಿತವಾಗಿ ಹಿಂದೂ ಧರ್ಮದ ವಿರುದ್ಧವಾಯಿತು. ಹಿಂದೂ ಧರ್ಮ ಹಲವಾರು ಜನ್ಮಗಳ ಸರಣಿಯನ್ನು ನಂಬುತ್ತದೆ. ಇದು ಸಮಸ್ಯೆ ; ತತ್ವಗಳಿವೆಯೆಂದಾದರೆ ಬಿಕ್ಕಟ್ಟುಗಳೂ ಇವೆ ಎಂದೇ ಅರ್ಥ. ಆಗ ಇಬ್ಬರಲ್ಲಿ ಯಾರೋ ಒಬ್ಬರು ಮಾತ್ರ ಸರಿ ಎಂದಾಗುತ್ತದೆ.

ಆದರೆ ಈ ಐಡಿಯಾ ಕೂಡ ವಿಭಿನ್ನ ರೀತಿಯ ಜನರಿಗಾಗಿ, ಯಾರು ಬಹಳಷ್ಟು ಬಲ್ಲರೋ , ಯಾರು ಬಹಳಷ್ಟು ಬದಲಾವಣೆಗಳನ್ನು ಕಂಡಿರುವರೋ, ಯಾರಿಗೆ ಇತಿಹಾಸ ಮರುಕಳಿಸುತ್ತದೆ ಎಂದು ಗೊತ್ತಿದೆಯೋ  ಅಂಥವರಿಗಾಗಿ ರೂಪಿಸಲಾಗಿರುವ ಒಂದು ಸಾಧನ. ಆದರೆ ಗುರಿ ಮಾತ್ರ ಒಂದೇ. ಪೂರ್ವ ಹೇಳುತ್ತದೆ, “ ಹಲವಾರು ಜನ್ಮಗಳಲ್ಲಿ ಮತ್ತೆ ಮತ್ತೆ ನೀವು ಅದೇ ಸಂಗತಿಗಳನ್ನು ಪುನರಾವರ್ತಿಸುತ್ತಿದ್ದೀರಿ. ಈಗಾಗಲೇ ನೀವು ಬಹಳ ಸಮಯ ಅದೇ ಮೂರ್ಖ ಸಂಗತಿಗಳನ್ನು ಮಾಡುತ್ತ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ, ಇನ್ನೂ ಎಷ್ಟು ಸಮಯ ಹೀಗೆ ಕಳೆಯುವವರುದ್ದೀರಿ? ಈಗಲಾದರೂ ಎಚ್ಚರಾಗಿ”.

ಝೆನ್ ಮಾಸ್ಟರ್ ಸಾವಿನ ಹಾಸಿಗೆಯಲ್ಲಿದ್ದ.
ಅವನ ಪ್ರೀತಿ ಪಾತ್ರ ಮತ್ತು ಅವನ ವಾರಸುದಾರ ಶಿಷ್ಯ, ಪ್ರಶ್ನೆ ಮಾಡಿದ.

ಮಾಸ್ಟರ್, ಇನ್ನೂ ಏನಾದರೂ ನಮಗೆ ಕಲಿಸುವುದು ಉಳಿದಿದೆಯೆ? ಹಾಗೇನಾದರೂ ಉಳಿದಿದ್ದರೆ ಸಾವಿಗೂ ಮುಂಚೆ ಆದಷ್ಟು ಬೇಗ ಹೇಳಿಕೊಡಿ.

ಮಾಸ್ಟರ್, ಒಂದು ಕ್ಷಣ ಧ್ಯಾನ ಮಗ್ನನಾಗಿ ಚಿಂತಿಸಿ ಮಾತನಾಡಿದ.

ನಿನ್ನ ಒಳನೋಟ ಅದ್ಭುತ, ನಿನ್ನ ಕಲಿಕೆ ಮತ್ತು ತರಬೇತಿ ಪರಿಪೂರ್ಣ, ಆದರೂ………

ಹೇಳಿ ಮಾಸ್ಟರ್, ಅದೇನಿದ್ದರೂ ನಾನು ಪರಿಹರಿಸಿಕೊಳ್ಳುವೆ.

ಏನಿಲ್ಲ, ನಿನ್ನ ಮೈ ಝೆನ್ ನಿಂದ ನಾರುತ್ತಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.