ಸ್ಥಿತಪ್ರಜ್ಞತೆ ಮತ್ತು ನಿರ್ಭಾವುಕತೆ । ಅರಳಿಮರ ಸಂವಾದ

ಸ್ಥಿತಪ್ರಜ್ಞರಾಗಿರೋದು ಅಂದ್ರೆ ನಿರ್ಭಾವುಕರಾಗೋದು ಅಂತಾನಾ? ಹಾಗೆ ಭಾವನೆಗಳನ್ನ ಬೆಳೆಸ್ಕೊಳ್ದೆ ಇದ್ರೆ, ತೋರಿಸಿಕೊಳ್ದೆ ಇದ್ರೆ ಮನಸ್ಸು ಜಡ್ಡುಗಟ್ಟಿ ಹೋಗೋದಿಲ್ವಾ? ಹಾಗಂತ ಕಮೆಂಟ್ ಬಾಕ್ಸ್‌ನಲ್ಲೊಂದು ಪ್ರಶ್ನೆ ಕಾಯುತ್ತಿತ್ತು. ಅದಕ್ಕೆ ಉತ್ತರ ಇಲ್ಲಿದೆ… । ಚೇತನಾ ತೀರ್ಥಹಳ್ಳಿ

ವೈದಿಕ ಹಿಂದೂ ಧರ್ಮವಾಗಲೀ ಭಾರತ ಉಪಖಂಡದ ಯಾವುದೇ ಸ್ಥಳೀಯ ಜನಪದ ತತ್ವಗಳಾಗಲೀ ನಿರ್ಭಾವುಕತೆಯನ್ನು ಮತ್ತು ಪರಮ ವೈರಾಗ್ಯವನ್ನು ಬೋಧಿಸಿಲ್ಲ. ಪುರಾಣಗಳಲ್ಲಿ ಶುಕಮುನಿಯ ವಿನಾ ನಮಗೆ ಮದುವೆಯಾಗದೆ ಸನ್ಯಾಸ ತೆಗೆದುಕೊಂಡವರೂ ಕಾಣುವುದಿಲ್ಲ. ಶುಕನನ್ನೂ ಮುನಿ ಅನ್ನಲಾಗಿದೆಯೇ ಹೊರತು, ಸನ್ಯಾಸಿ ಎಂದಲ್ಲ.

ವೈದಿಕ ಧರ್ಮದಲ್ಲಿ ‘ಎಲ್ಲ ಭೋಗಗಳನ್ನೂ ಭಾವಗಳನ್ನೂ ತೊರೆಯುವ ವೈರಾಗ್ಯ’ ಅಡಕವಾಗಿದ್ದು ಬೌದ್ಧ ಮತ್ತು ಜೈನ ಧರ್ಮಗಳ ತರುವಾಯ ಅನ್ನುವುದು, ಬೌದ್ಧ – ಜೈನ ಪೂರ್ವ ವೈದಿಕ ಧರ್ಮದ ಸಾಹಿತ್ಯದಲ್ಲಿ ಸ್ಪಷ್ಟವಾಗಿ ತೋರುತ್ತದೆ.

ವೈದಿಕ ಧರ್ಮ ಎಲ್ಲ ಬಗೆಯ ಭೋಗಗಳನ್ನು ಅನುಭವಿಸುತ್ತಲೇ ಸಾಕ್ಷಾತ್ಕಾರದ ಹಾದಿಯಲ್ಲಿ ನಡೆಯುವ ವಿಚಾರವನ್ನು ವೇದಗಳಿಂದ ಹಿಡಿದು ಆರಣ್ಯಕ – ಸಂಹಿತೆಗಳವರೆಗೂ ಚರ್ಚಿಸಿವೆ.

ಭಗವದ್ಗೀತೆಯಲ್ಲಿ ಕೃಷ್ಣನೂ ಎಲ್ಲವನ್ನೂ ತೊರೆ ಎಂದಾಗಲೀ ಎಲ್ಲ ಭಾವವನ್ನೂ ಬಿಟ್ಟುಬಿಡು ಎಂದಾಗಲೀ ಹೇಳುವುದಿಲ್ಲ. ಅವನು ಹೇಳುವುದು ಯಾವ ಭಾವಕ್ಕೂ ಅಂಟಿಕೊಳ್ಳಬೇಡ – ಎಂದು. ಎಲ್ಲವನ್ನೂ ತೊರೆಯುವುದಕ್ಕೂ ಅಂಟಿಕೊಳ್ಳದೆ ಇರುವುದಕ್ಕೂ ವ್ಯತ್ಯಾಸ ಇದೆ.

~

ಯೋಗ ವಾಸಿಷ್ಟದಲ್ಲಿ ಒಂದು ಕತೆ ಬರುತ್ತದೆ. ಚೂಡಾಲೆಯ ಕತೆ.

ಸಂಪೂರ್ಣ ವೈರಾಗ್ಯ ತಳೆದು ಕಾಡಿಗೆ ಹೋದ ಗಂಡ ಶಿಖಿಧ್ವಜನನ್ನು ಚೂಡಾಲೆ ಮರಳಿ ಕರೆತಂದು ರಾಜ್ಯಭಾರಕ್ಕೆ ಹಚ್ಚುತ್ತಾಳೆ. ಎಲ್ಲವನ್ನೂ ತೊರೆಯುವುದಲ್ಲ, ಎಲ್ಲವನ್ನೂ ಅನುಭವಿಸುತ್ತಲೇ ಯಾವುದಕ್ಕೂ ಅಂಟಿಕೊಳ್ಳದೆ ಇರುವುದು ಸಾಧನೆ – ಇದು ಶಿಖಿಧ್ವಜನಿಗೆ ಯೋಗಿನಿಯೂ ಆಗಿದ್ದ ಚೂಡಾಲೆಯ ಉಪದೇಶ.

ಯಾಜ್ಞವಲ್ಕ್ಯರು ಕಾತ್ಯಾಯನಿಗೆ ಹೇಳುವ ಮಾತುಗಳಾಗಲೀ, ವಸಿಷ್ಠರು ರಾಮನಿಗೆ ಮಾಡುವ ಬೋಧನೆಯಾಗಲೀ, ವಿದುರ ಪಾಂಡವರಿಗೆ ಕೊಟ್ಟ ಸಲಹೆಗಳಾಗಲೀ, ಈಶಾವಾಸ್ಯದ ಅಷ್ಟೂ ಶ್ಲೋಕಗಳು, ಅಷ್ಟಾವಕ್ರ ಗೀತೆ, ಅವಧೂತ ಗೀತೆ – ಇವೆಲ್ಲವೂ ನಿರ್ಭಾವುಕತೆಯನ್ನು ಹೇಳದೆ, ಎಲ್ಲವನ್ನೂ ಸಾಕ್ಷೀಭಾವದಿಂದ ಗಮನಿಸುತ್ತಾ ಅನುಭವಿಸುತ್ತಾ ಸ್ಪಂದಿಸುತ್ತಾ ಯಾವುದಕ್ಕೂ ಅಂಟಿಕೊಳ್ಳದೆ ಬಾಳಬೇಕು ಅನ್ನುವುದನ್ನೇ ಬೋಧಿಸುತ್ತವೆ.

~

ಸ್ಥಿತಪ್ರಜ್ಞ ಅಂದರೆ ಮರ್ತ್ಯದಲ್ಲಿ ಎದುರಾಗುವ ಎಲ್ಲ ಕಷ್ಟಸುಖಗಳಿಗೆ ನಮ್ಮ ಎಚ್ಚರ ಕಳೆದುಕೊಳ್ಳದಂತೆ ಸ್ಪಂದಿಸುವುದು. ಕಷ್ಟ ಬಂದಾಗ ಅಳಬಾರದೆಂದಲ್ಲ, ಆ ದುಃಖದಲ್ಲಿ ಮೈಮರೆತು ಜೀವನ ಹಾಳು ಮಾಡಿಕೊಳ್ಳದೆ ಇರುವುದು. ಸುಖ ಬಂದಾಗ ನಗಬಾರದೆಂದಲ್ಲ. ಆ ನಗುವಲ್ಲಿ ನಮ್ಮ ಹೊಣೆಗಾರಿಕೆ ಮರೆಯದೆ ಇರುವುದು. ಅತಿ ಸರ್ವತ್ರ ವರ್ಜಯೇತ್ ಅನ್ನುವಂತೆ, ನಮ್ಮ ಅರಿವು ಕೆಡಿಸುವ ಯಾವ ಅತಿಗಳಿಗೂ ಅವಕಾಶ ಮಾಡಿಕೊಡದಂತೆ ನಮ್ಮ ಪ್ರಜ್ಞೆ ನಮ್ಮಲ್ಲಿ ಸದಾ ನೆಲೆಸಿರುವಂತೆ, ನಾವು ನಮ್ಮ ಪ್ರಜ್ಞೆಯನ್ನು ಜಾಗೃತವಾಗಿಟ್ಟುಕೊಳ್ಳುವುದು.

ಒಂದೇ ಸಾಲಿನಲ್ಲಿ ಹೇಳುವುದಾದರೆ – ಯಾರ ಪ್ರಜ್ಞೆ ಸದಾ ಎಚ್ಚರವಾಗಿರುವುದೋ ಅವರು ಸ್ಥಿತಪ್ರಜ್ಞರು.

ಸ್ಥಿತ ಅನ್ನುವ ಪದಕ್ಕೆ ನಿಲ್ಲು, ನೆಲೆಸು, ಎಚ್ಚರವಾಗಿರು – ಅನ್ನುವ ಅರ್ಥಗಳಿವೆ. ಒಟ್ಟು ವೇದೋಪನಿಷತ್ ಚಿಂತನೆ ಮತ್ತು ಆಶಯವನ್ನು ಗಮನಿಸಿದರೆ, ಸ್ಥಿತಪ್ರಜ್ಞ ಪದದಲ್ಲಿರುವ ‘ಸ್ಥಿತ’ ಪದಕ್ಕೆ ಎಚ್ಚರವೇ ಸರಿಯಾದ ಹೊಂದಾಣಿಕೆ. ಮತ್ತು, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುವ ಸ್ಥಿತಪ್ರಜ್ಞರ ಗುಣಲಕ್ಷಣಗಳಿಗೂ ಇದು ಹೊಂದಾಣಿಕೆಯಾಗುತ್ತದೆ.

~

ಇನ್ನು, ಪ್ರಜ್ಞೆ ಜಡಗಟ್ಟುವುದು ಒಂದು ಮನೋರೋಗ. ಅದು ನಿರ್ಭಾವುಕತೆಯನ್ನು ಉಂಟುಮಾಡುತ್ತದೆ.

ಸಾಮಾನ್ಯವಾಗಿ ಎಲ್ಲ ಬಗೆಯ ಕರ್ಮಠರು ಮತ್ತು ಕ್ರಿಮಿನಲ್ ಗಳು ಈ ಕ್ಯಟಗರಿಗೆ ಸೇರುತ್ತಾರೆ. ವೈದಿಕ ಸಾಹಿತ್ಯ ಅಥವಾ ಆರ್ಷೇಯ ಚಿಂತನೆ ಪ್ರಜ್ಞೆಯನ್ನು ಕೊಂದುಕೊಳ್ಳಲಾಗಲೀ ಜಡಗೊಳಿಸಿಕೊಳ್ಳಲಾಗಲೀ ಹೇಳುವುದಿಲ್ಲ.

ಹಾಗೇನಾದರೂ ಆದರೆ ನಮಗೆ ಕರ್ಮಠರು ಮತ್ತು ಸೈಕೋಪಾತ್ ಗಳ ಹಾಗೆ ಖುಷಿಯೂ ಆಗುವುದಿಲ್ಲ, ನೋವೂ ಆಗುವುದಿಲ್ಲ.

ಅವನ್ನು ಅಭಿವ್ಯಕ್ತಿಸದೆ ಇರುವುದು. ಸ್ಪಂದಿಸದೆ ಇರುವುದು ಬೇರೆ. ಅವು ಆಗದೆಯೇ ಇರುವುದೇ ಬೇರೆ.

ಅಭಿವ್ಯಕ್ತಿಸದೆ ಇರುವುದು ಹಠವಾದವೇ ಹೊರತು ಸ್ಥಿತಪ್ರಜ್ಞತೆ ಅಲ್ಲ. ಸ್ಪಂದಿಸದೆ ಇರುವುದು ಕೂಡಾ ಅಹಂಕಾರವೇ ಸರಿ. ಅದು ಕೂಡಾ ಸ್ಥಿತಪ್ರಜ್ಞ ಸ್ಥಿತಿ ಅಲ್ಲ.

ಅಭಿವ್ಯಕ್ತಿಸಬೇಡಿ, ಸ್ಪಂದಿಸಬೇಡಿ ಎಂದು ಆರ್ಷೇಯ ಚಿಂತನೆ ಹೇಳುವುದಿಲ್ಲ. ಅವುಗಳ ಬಂಧಕ್ಕೆ ಸಿಲುಕಿ ವರ್ತಿಸಬೇಡಿ, ಅವುಗಳಲ್ಲಿ ಮುಳುಗಿ ಕಳೆದುಹೋಗಬೇಡಿ, ಅರಿವುಗೇಡಿಗಳಾಗಿ ಮಿಥ್ಯಾ ಜಗತ್ತಿನಲ್ಲಿ ಹಿಂಸೆಪಡಬೇಡಿ – ಅನ್ನುತ್ತದೆ.

ಭಗವದ್ಗೀತೆಯ ಎರಡನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಸ್ಥಿತಪ್ರಜ್ಞರ ಗುಣಲಕ್ಷಣ ಹೇಳುತ್ತಾ – “ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ” ಅನ್ನುತ್ತಾನೆ. ಇದರ ಅರ್ಥ, ಸ್ಥಿತಪ್ರಜ್ಞರು ಅಂದರೆ ‘ದುಃಖ ಪಡದೆ ಇರುವವರು’ ಎಂದಲ್ಲ, ‘ದುಃಖದಿಂದ ಉದ್ವಿಗ್ನರಾಗದವರು’ ಎಂದು. ‘ಸುಖ ಪಡದವರು’ ಎಂದಲ್ಲ, ‘ಸುಖ ಬಂದಾಗ ಅದಕ್ಕೆ ಅಂಟಿಕೊಳ್ಳದವರು’

ಇದು ಬೌದ್ಧ ಚಿಂತನೆಯೂ ಹೌದು. ಬುದ್ಧ, ಭಾವನೆಗಳೊಂದಿಗೆ ಗುರುತಿಸಿಕೊಳ್ಳಬೇಡಿ ಎಂದ. ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲ ಭಾವನೆಗಳನ್ನೂ ಸಾಕ್ಷಿ ಭಾವದಿಂದ ಕಾಣತೊಡಗಿದ. ಪ್ರತಿಯೊಂದು ಸ್ಥಿತಿಯೂ ಕ್ರಮೇಣ ಬದಲಾಗುವುದು ಅಥವಾ ಇಲ್ಲವಾಗುವುದು ಅನ್ನುವ ಅರಿವು ಅವನನ್ನು ಸದಾ ಆನಂದಮಯ ಸ್ಥಿತಿಯಲ್ಲೇ ನೆಲೆಸಿರುವಂತೆ ಮಾಡಿತ್ತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.