ಥೆರಪಿ ಹೇಳುವುದೇನೆಂದರೆ, ನಿಧಾನವಾಗಿ ನೀವು ನಿಮ್ಮ ಮೇಲಿನ ಭಾರವನ್ನು ಕಡಿಮೆ ಮಾಡಿಕೊಳ್ಳಿ. ಆದರೆ ನಾನು ಹೇಳುವುದು ಥೆರಪಿಯನ್ನು ಮೀರಿದ್ದು, ಆದರೆ ಥೆರಪಿ ಖಂಡಿತ ನಿಮ್ನನ್ನು ತಯಾರುಮಾಡುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸೂಲಗಿತ್ತಿಗೆ ಚೆನ್ನಾಗಿ ಗೊತ್ತು.
ಹೆರಿಗೆ ಬೇನೆ ಶುರುವಾಗದ ಹೊರತು
ಮಗು ಹೊರ ಬರುವ ದಾರಿ
ಪೂರ್ತಿಯಾಗಿ ತೆರೆದುಕೊಳ್ಳುವುದಿಲ್ಲ
ಮತ್ತು ತಾಯಿ, ಮಗುವಿಗೆ ಜನ್ಮ ನೀಡುವುದು
ಸಾಧ್ಯವಾಗುವುದಿಲ್ಲ.
ಪ್ರತೀ ಹೊಸ ಹುಟ್ಟಿನ ದಾರಿ
ಯಾತನೆ ಮತ್ತು ಸಂಕಷ್ಟಗಳ ಮೂಲಕವೇ,
ಹೇಗೆ ಗಟ್ಟಿಯಾಗಲು ಮಡಿಕೆ
ಬೆಂಕಿಯ ಶಾಖ ಹಾಯ್ದು ಬರಬೇಕೋ ಹಾಗೆ.
ನೋವು ಮಾತ್ರ
ಪರಿಪೂರ್ಣವಾಗಿಸಬಲ್ಲದು ಪ್ರೇಮವನ್ನು.
~ ಶಮ್ಸ್
ಥೆರಪಿಯ ಕೆಲಸ ಸೀಮಿತವಾದದ್ದು : ಅದು ನೀವು ವಿವೇಕವಂತರಾಗಲು ಸಹಾಯ ಮಾಡುತ್ತದೆ ಅಷ್ಟೇ. ನನ್ನ ಕೆಲಸ ಥೆರಪಿಯನ್ನ ಮೀರಿದ್ದು, ಆದರೆ ಥರಪಿ, ಖಂಡಿತ ದಾರಿಯನ್ನು ಸಿದ್ಧಗೊಳಿಸುತ್ತದೆ. ಥೆರಪಿಗಳು ನೆಲವನ್ನು ಸ್ವಚ್ಛ ಮಾಡಿದ ಮೇಲೆ ನನಗೆ ಬೀಜ ಬಿತ್ತಲು ಅನುಕೂಲವಾಗುತ್ತದೆ. ಕೇವಲ ನೆಲವನ್ನ ಸ್ವಚ್ಛ ಮಾಡುವುದರಿಂದ ಗಾರ್ಡನ್ ತಯಾರಾಗುವುದಿಲ್ಲ. ಪಶ್ಚಿಮದಲ್ಲಿ ಥೆರಪಿ ಸೃಷ್ಟಿ ಮಾಡುತ್ತಿರುವ ಗೊಂದಲವೇ ಇದು. ನೀವು ಥೆರಪಿಸ್ಟ್ ಬಳಿ ಹೋದಾಗ ಅವರು ನೆಲವನ್ನೇನೋ ಸ್ವಚ್ಛಗೊಳಿಸುತ್ತಾರೆ, ಇದು ನಿಮ್ಮ ಮೇಲಿನ ಭಾರವನ್ನು ಕಡಿಮೆ ಮಾಡುತ್ತದೆ ನಿಜ ಆದರೆ ಅಲ್ಲಿ ಮತ್ತೆ ಬೇಡದ ಎಲ್ಲ ಸಂಗತಿಗಳು ಸೇರುತ್ತ ಹೋಗುತ್ತವೆ. ಏಕೆಂದರೆ ಅಲ್ಲಿ ಗಾರ್ಡನ್ ಇನ್ನೂ ತಯಾರಾಗಿಲ್ಲ. ಸ್ವಚ್ಛ ನೆಲವನ್ನು ತೆಗೆದುಕೊಂಡು ಮಾಡುವುದೇನಿದೆ? ಮತ್ತೆ ಅಲ್ಲಿ ಎಲ್ಲ ರೀತಿಯ ಕಸ ಸಂಗ್ರಹವಾಗುತ್ತದೆ.
ಥೆರಪಿ ನೆಲವನ್ನು ಸ್ವಚ್ಛ ಮಾಡುತ್ತದೆ ಮತ್ತು ನಂತರ ನಿಮ್ಮೊಳಗೆ ಗುಲಾಬಿಯನ್ನು ಬೆಳೆಸಬಹುದು. ಆದ್ದರಿಂದ ಥೆರಪಿಸ್ಟ್ ಹೇಳುವುದು ಸರಿ : ಉದ್ರಿಕ್ತತೆ, ಕೋಪ, ದುಗುಡ, ಹತಾಶೆ, ಪ್ರೀತಿ – ಎಲ್ಲವನ್ನೂ ಅಭಿವ್ಯಕ್ತಿಸುವುದು ಬಹಳ ಅವಶ್ಯಕ, ಒಪ್ಪಿಕೊಂಡೆ. ನಂತರ ನನ್ನ ಕೆಲಸ ಶುರುವಾಗುತ್ತದೆ; ನಂತರ ನಾನು ನಿಮಗೆ ಅಹಂ ಹೇಗೆ ತ್ಯಜಿಸಬೇಕೆಂದು ಹೇಳಿಕೊಡಬಹುದು. ಈಗ ಅದನ್ನು ಕ್ಯಾರಿ ಮಾಡುವ ಅವಶ್ಯಕತೆ ಇಲ್ಲ.
ಸೀರಿಯಸ್ ಸಮಸ್ಯೆಯೊಂದಿಗೆ ನಸ್ರುದ್ದೀನ್ ಡಾಕ್ಟರ್ ಹತ್ತಿರ ಬಂದ. ನಸ್ರುದ್ದೀನ್ ನನ್ನು ಕೂಲಂಕಷವಾಗಿ ತಪಾಸಣೆ ಮಾಡಿದ ಡಾಕ್ಟರ್,
“ ನಸ್ರುದ್ದೀನ್, ನಿನಗೇನೂ ಆಗಿಲ್ಲ, ಸುಮ್ಮನೇ ಗಾಬರಿ ಮಾಡಿಕೊಂಡಿದ್ದೀಯ. ನನಗೆ ಯಾವ ತೊಂದರೆಯೂ
ಕಾಣುತ್ತಿಲ್ಲ. ಬಹುಶಃ ಇದು ಕುಡಿತದ ಇಫೆಕ್ಟ್ ಇರಬಹುದು. “
“ ಹಾಗಾದರೆ ನಿಮ್ಮ ನಶೆ ಇಳಿದ ಮೇಲೆ ಮತ್ತೆ ಬರ್ತೀನಿ ಡಾಕ್ಟರ್. “
ನಸ್ರುದ್ದೀನ್, ಅಲ್ಲಿಂದ ಜಾಗ ಖಾಲೀ ಮಾಡಿದ.

