ಪರವಶದ ಉಡುಗೆ-ಜಾಣರಿಗೆ ಜಗುಳಿಕೆ : ಅಕ್ಕ ಮಹಾದೇವಿ #68

 ಈ ವಚನವನ್ನು ಸ್ವಲ್ಪ ವಾಚ್ಯಗೊಳಿಸಿ, ವಿಸ್ತಾರಗೊಳಿಸಿ ಇನ್ನೊಂದು ಆವೃತ್ತಿಯನ್ನು ನಂತರದ ಪ್ರತಿಕಾರರು ಸಿದ್ಧಮಾಡಿದರೆಂದು ತೋರುತ್ತದೆ. ಅದನ್ನು ಮುಂದಿನ ಬರಹದಲ್ಲಿ ನೋಡೋಣ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6ಲಜ್ಜೆಯಳಿದು-ನಾನು ನೀನಾಗಿ

ತಲೆಯಲ್ಲಿ ನಿರಿ
ಟೊಂಕದಲ್ಲಿ ಮುಡಿ
ಮೊಳಕಾಲಲ್ಲಿ ಕಿವಿಯೋಲೆಯ ಕಂಡೆ.
ಹರವಸದ ಉಡಿಗೆ
ಏಕಾಂತದಲ್ಲಿ ಮುಖವ ಕಂಡು ಕಾಣದೆ
ಚೆನ್ನಮಲ್ಲಿಕಾರ್ಜುನನ ನೆರೆವ ಪರಿ ಕರ ಹೊಸತು [೨೩೪]

[ನಿರಿ=ನಿರಿಗೆ, ಹರವಸ=ಪರವಶ; ನೆರೆವ=ಕೂಡುವ, ಪರಿ=ರೀತಿ, ಕರ=ಬಹಳ]

ಪ್ರತಿ ಸಾಲಿನ ಮೊದಲು ʻನನ್ನʼ ಅಥವ ʻನಿನ್ನʼ ಎಂದು ಸೇರಿಸಿಕೊಂಡು ಈ ವಚನದ ಒಂದೊಂದು ಸಾಲಿನ ಚಿತ್ರವನ್ನೂ ಕಲ್ಪಿಸಿಕೊಂಡಾಗ ಅಕ್ಕಮಹಾದೇವಿ ಎಷ್ಟು ಸೂಕ್ಷ್ಮವಾಗಿ, ಧೈರ್ಯವಾಗಿ ತನ್ನ ಮತ್ತು ಚೆನ್ನಮಲ್ಲಿಕಾರ್ಜುನನ ಕೂಟವನ್ನು ಹೇಳುತ್ತಿದ್ದಾಳೆಂದು ಹೊಳೆಯುತ್ತದೆ. ಏಕಾಂತದಲ್ಲಿ ಒಬ್ಬರು ಇನ್ನೊಬ್ಬರ ವಶವಾಗಿರುವ, ಪರವಶವಾಗಿರುವ ಇಂಥ ಮಿಲನದ ಭಂಗಿಯಲ್ಲಿ  ಅವನ ಮುಖ ಕಂಡರೂ ಕಾಣದಂತಿತ್ತು. ಚೆನ್ನಮಲ್ಲಿಕಾರ್ಜುನ ಕೂಡುವ ರೀತಿ ತೀರ ಹೊಸತು. ಅಲ್ಲದೆ ನಾನು ನೀನು ಬೇರೆಯಲ್ಲ ಅನ್ನುವುದನ್ನು ಸೂಚಿಸುವಂತೆ ಯಾರ ತಲೆಯಲ್ಲಿ ಯಾರ ನಿರಿ, ಯಾರ ಟೊಂಕದಲ್ಲಿ ಯಾರ ಮುಡಿ, ಯಾರ ಮೊಳಕಾಲಲ್ಲಿ ಯಾರ ಕಿವಿಯೋಲೆ ಅನ್ನುವುದನ್ನು ಹೇಳದೆ ಬಿಟ್ಟಿರುವುದೂ ಇಬ್ಬರ ಪರವಶತೆಯನ್ನು ಸೂಚಿಸುವುದಕ್ಕೆ ಅಗತ್ಯವಾದ ಸಂದಿಗ್ಧತೆ. ತನ್ನ ಆತ್ಮಸಂಗಾತಿಯೊಡನೆ ನಡೆಸಿದ ಕೂಟದ ವರ್ಣನೆ ಈ ವಚನದಲ್ಲಿದೆ. ಹಾಗೆ ಇದನ್ನು ಚನ್ನಮಲ್ಲಿಕಾರ್ಜುನನಲ್ಲಿ  ಐಕ್ಯವಾದ ಪರಿಯ ವಿವರಣೆ ಎಂದೂ ನೋಡಬಹುದು.

ವಚನದಲ್ಲಿ ಬರುವ ʻಕಂಡೆʼ ಎಂಬ ಕ್ರಿಯಾಪದ ಕುತೂಹಲ ಹುಟ್ಟಿಸುತ್ತದೆ. ಈ ವಚನವನ್ನು ನುಡಿಯುತ್ತಿರುವ ಮನಸ್ಸು ಚೆನ್ನಮಲ್ಲಿಕಾರ್ಜುನನೊಡನೆ ನಡೆದ ಕೂಟವನ್ನು ʼಕಂಡೆʼ ಅನ್ನುತ್ತಿದೆ. ಮಿಲವನ್ನು ಅನುಭವಿಸುತ್ತ ದೂರ ನಿಂತೂ ಕಂಡ ಅಚ್ಚರಿ ಇಲ್ಲಿದೆ. ಚೆನ್ನಮಲ್ಲಿಕಾರ್ಜುನನ ಮುಖವನ್ನು ʻಕಂಡುʼ ʻಕಾಣದೆʼ ಅನ್ನುವ ಮಾತಂತೂ ಅದ್ಭುತವೆನಿಸುವ ಅರ್ಥ ಸಂದಿಗ್ಧತೆ. ಏಕಾಂತದಲ್ಲಿ ಕಂಡ ಮುಖ ಕಲ್ಪನೆಯೋ ನಿಜವಾಗಿ ಅವನದೋ! ಏಕಾಂತದಲ್ಲಿ ಕಂಡೆ, ಆಮೇಲೆ ಕಾಣದೆ ಹೋದೆ! ದೇಹದ ಮನೋ ಲೋಕದಲ್ಲಿ ಕಂಡೆ ನಿಜದಲ್ಲಿ ಅವನನ್ನು ಕಾಣಲಿಲ್ಲ, ಮನೋ ಲೋಕದಲ್ಲಿ ಕೂಡಿದೆ, ನಿಜದಲ್ಲಿ ಕೂಡಲಿಲ್ಲ ಹೀಗೆ ಅರ್ಥದ ಸಾಧ್ಯತೆಗಳು ಈ ವಚನದ ಸಾವಕಾಶ ಓದಿನಲ್ಲಿ ಹೊಳೆಯುತ್ತವೆ. ಅನುಭವಿಸಲು ಕಾಯ ಮುಖ್ಯ ಅನ್ನುವ ಮಾತಿನೊಡನೆ ಆತ್ಮಸಂಗಾತದ ವ್ಯಕ್ತರೂಪವನ್ನು ಕಾಣುವುದೂ ಇಲ್ಲಿದೆ.

 ಈ ವಚನವನ್ನು ಸ್ವಲ್ಪ ವಾಚ್ಯಗೊಳಿಸಿ, ವಿಸ್ತಾರಗೊಳಿಸಿ ಇನ್ನೊಂದು ಆವೃತ್ತಿಯನ್ನು ನಂತರದ ಪ್ರತಿಕಾರರು ಸಿದ್ಧಮಾಡಿದರೆಂದು ತೋರುತ್ತದೆ. ಅದನ್ನು ಮುಂದಿನ ಬರಹದಲ್ಲಿ ನೋಡೋಣ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.