ತಾನು ಮತ್ತು ತನ್ನ ಇಷ್ಟದೈವವನ್ನು ಪ್ರಿಯೆ-ಪ್ರಿಯಕರನನ್ನಾಗಿ ರೂಪಿಸಿಕೊಂಡ ಅಕ್ಕನ ವಚನಗಳು ದೈವದ ಸಾಕ್ಷಾತ್ಕಾರವನ್ನೂ ಅದೇ ಒಲವಿನ ರೂಪಕದ ಮೂಲಕ ಹೇಳಿಕೊಂಡಂತೆ ತೋರುತ್ತದೆ.~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6, ಲಜ್ಜೆಯಳಿದು-ನಾನು ನೀನಾಗಿ
ಎಲ್ಲರ ಗಂಡರ ಶೃಂಗಾರದ ಪರಿಯಲ್ಲ
ಎನ್ನ ನಲ್ಲನ ಶೃಂಗಾರದ ಪರಿ ಬೇರೆ.
ಶಿರದಲ್ಲಿ ಕಂಕಣ
ಉರದ ಮೇಲಂದುಗೆ
ಕಿವಿಯಲ್ಲಿ ಹಾವುಗೆ
ಉಭಯ ಸಿರಿವಂತನ ಮೊಳಕಾಲಲ್ಲಿ ಜಳವಟ್ಟಿಗೆ.
ಉಂಗುಟದಲ್ಲಿ ಮೂಕುತಿ
ಇದು ಜಾಣರಿಗೆ ಜಗುಳಿಕೆ. ಚೆನ್ನಮಲ್ಲಿಕಾರ್ಜುನಯ್ಯನ
ಶೃಂಗಾರದ ಪರಿ ಬೇರೆ [೧೧೭]
[ಉರ=ಎದೆ; ಅಂದುಗೆ=ಕಾಲಂದುಗೆ; ಹಾವುಗೆ=ಮರದಪಾದರಕ್ಷೆ; ಜಳವಟ್ಟಿಗೆ=ಕಂಠಾಭರಣ; ಉಂಗುಟ=ಉಂಗುಷ್ಠ; ಕಾಲಿನ ಹೆಬ್ಬೆರಳು; ಜಗುಳಿಕೆ=ಜಾರಿಕೆ]
ಈ ವಚನದ ಆರಂಭದಲ್ಲಿಯೇ ನನ್ನ ನಲ್ಲನ ಶೃಂಗಾರದ ಪರಿ ಬೇರೆ ಎಂದು ವಾಚ್ಯವಾಗಿ ಹೇಳಿ, [ನನ್ನ] ಉರದ ಮೇಲೆ [ಅವನ] ಅಂದುಗೆ. [ನನ್ನ] ಕಿವಿಯಲ್ಲಿ [ಅವನ] ಹಾವುಗೆ [ನನ್ನ] ಮೊಳಕಾಲಲ್ಲಿ [ಅವನ] ಕಂಠಾಭರಣ, [ಅವನ] ಉಂಗುಷ್ಠದಲ್ಲಿ ನನ್ನ ಮೂಗುತಿ ಎಂದು ವಿವರಗಳನ್ನು ಸೇರಿಸಿ, ಕೊನೆಯಲ್ಲಿ ಇದು ಅರ್ಥವಾಗಬೇಕಾದರೆ ಜಾಣರಾಗಿರಬೇಕು, ಜಾಣರನ್ನೂ ಜಾರಿ ಬೀಳಿಸುವ ಮಾತು ಇದು ಅನ್ನುವ ಸವಾಲೂ ಇದೆ. ಹಾಗಾಗಿ ಈ ವಚನ ಆನಂತರದಲ್ಲಿ ವಿಸ್ತಾರಗೊಂಡದ್ದು ಅನಿಸುತ್ತದೆ.
ತಾನು ಮತ್ತು ತನ್ನ ಇಷ್ಟದೈವವನ್ನು ಪ್ರಿಯೆ-ಪ್ರಿಯಕರನನ್ನಾಗಿ ರೂಪಿಸಿಕೊಂಡ ಅಕ್ಕನ ವಚನಗಳು ದೈವದ ಸಾಕ್ಷಾತ್ಕಾರವನ್ನೂ ಅದೇ ಒಲವಿನ ರೂಪಕದ ಮೂಲಕ ಹೇಳಿಕೊಂಡಂತೆ ತೋರುತ್ತದೆ. ಹೀಗೆ ಇಷ್ಟದೈವದೊಡನೆ ಒಂದಾದ ಬಗೆಯನ್ನು ಮಾತಿನ ರೂಪದಲ್ಲಿ ವ್ಯಕ್ತಗೊಳಿಸಿರು ವಚನಗಳು ತೀರ ಅಪರೂಪ.

